×
Ad

ರಾಜ್ಯದಲ್ಲಿ ತೆಂಗು ಬೆಳೆಗಾರ ಸಮಾವೇಶ | ಕುಮಾರಸ್ವಾಮಿ-ಶಿವರಾಜ್‍ಸಿಂಗ್ ಚೌಹಾಣ್ ಸಮಾಲೋಚನೆ

Update: 2025-01-21 18:05 IST

ಹೊಸದಿಲ್ಲಿ : ರಾಜ್ಯದ ಕೊಬ್ಬರಿ ಮತ್ತು ಅಡಿಕೆ ಬೆಳೆಗಾರರು ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸಮಾಲೋಚನೆ ನಡೆಸಿದರು.

ಮಂಗಳವಾರ ಪುತ್ರರಿಬ್ಬರ ವಿವಾಹಕ್ಕೆ ತಮ್ಮ ಧರ್ಮಪತ್ನಿ ಅವರೊಂದಿಗೆ ಬೃಹತ್ ಕೈಗಾರಿಕೆ ಸಚಿವಾಲಯಕ್ಕೆ ಆಗಮಿಸಿ ಸಚಿವ ಕುಮಾರಸ್ವಾಮಿಗೆ ಆಮಂತ್ರಣ ನೀಡಿದರು ಕೃಷಿ ಸಚಿವರು, ಈ ವೇಳೆ ಕರ್ನಾಟಕ ಸೇರಿದಂತೆ ರಾಷ್ಟ್ರದ ಕೃಷಿ ಕ್ಷೇತ್ರದ ಆಗು-ಹೋಗುಗಳು, ರೈತರ ಕುಂದು-ಕೊರತೆಗಳ ಬಗ್ಗೆ ಚರ್ಚಿಸಿದರು.

ಅಡಿಕೆಗೆ ಬರುತ್ತಿರುವ ರೋಗಗಳ ಪರಿಹಾರಕ್ಕೆ 67 ಕೋಟಿ ರೂ.ಗಳನ್ನು ಮುಂದಿನ ಬಜೆಟ್‍ನಲ್ಲಿ ಘೋಷಣೆ ಮಾಡಲಾಗುವುದು ಎಂದು ಚೌಹಾಣ್ ಘೋಷಣೆ ಮಾಡಿದ್ದು, ಆ ಬಗ್ಗೆ ಕುಮಾರಸ್ವಾಮಿ ಕೃಷಿ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಿದರು. ಅಗತ್ಯ ಮಾರುಕಟ್ಟೆ ಸೌಲಭ್ಯದ ಕೊರತೆ ಹಾಗೂ ಬೆಳೆ ತೆಗೆಯುವ ಬಗ್ಗೆ ಸವಾಲು ಎದುರಿಸುವ ರೈತರಿಗೆ ಸಹಾಯ ಹಸ್ತದ ಬೇಕಿದೆ. ಈ ನಿಟ್ಟಿನಲ್ಲಿ ತಾವು ನೀಡಿರುವ ಭರವಸೆ ರೈತರಲ್ಲಿ ಹರ್ಷ ಮೂಡಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

ಕರ್ನಾಟಕದ ತೆಂಗು ಬೆಳೆಗಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕೃಷಿ ಸಚಿವರ ಗಮನ ಸೆಳೆದ ಕುಮಾರಸ್ವಾಮಿ, ತೆಂಗು ಬೆಳೆಗಾರರ ಸಂಕಷ್ಟ ಪರಿಹಾರ ಮಾಡುವ ನಿಟ್ಟಿನಲ್ಲಿ ತಮ್ಮ ಕಡೆಯಿಂದ ದೊಡ್ಡ ಉಪಕ್ರಮ ಆಗಬೇಕಿದೆ. ಈ ನಿಟ್ಟಿನಲ್ಲಿ ತಾವು ರಾಜ್ಯದಲ್ಲಿ ತೆಂಗು ಬೆಳೆಗಾರರ ಸಮಾವೇಶ ನಡೆಸಿ ಅವರ ಸಂಕಷ್ಟಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ತಕ್ಷಣವೇ ಸ್ಪಂದಿಸಿದ ಸಚಿವರು, ಇದು ಬಹಳ ಒಳ್ಳೆಯ ಆಲೋಚನೆ. ಬೆಳೆಗಾರರು ತಮ್ಮೆಲ್ಲ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಿ. ಅನಂತರ ಪರಿಹಾರೋಪಾಯಗಳನ್ನು ಕಂಡುಕೊಳ್ಳೋಣ ಎಂದು ಚೌಹಾಣ್ ಹೇಳಿದರು. ದುಬಾರಿಗೆ ಸಾಗಾಣಿಕೆ ವೆಚ್ಚವೇ ತೆಂಗು ಬೆಳೆಗಾರರಿಗೆ ಸಮಸ್ಯೆ ಆಗಿದೆ. ರೈತನ ಬಹುತೇಕ ಆದಾಯ ಸಾಗಾಣಿಕೆಗೆ ವ್ಯಯವಾಗುತ್ತಿದೆ. ಅವರಿಗೆ ನ್ಯಾಯಯುತ ಬೆಲೆ ಧಕ್ಕಿಸಿಕೊಡುವುದರ ಜೊತೆಗೆ ಸಾಗಾಣಿಕೆ ವ್ಯವಸ್ಥೆಯನ್ನು ರೈತರ ಕೈಗೆಟುಕುವಂತೆ ಮಾಡುವುದು ಅತ್ಯಗತ್ಯ. ಇದಕ್ಕೆ ಕೃಷಿ ಸಚಿವಾಲಯದ ನೆರವು ಅಗತ್ಯವಿದೆ ಕುಮಾರಸ್ವಾಮಿ ಕೋರಿದರು.

ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಉಪಟಳ ಮೀತಿ ಮೀರಿದೆ. ಕೇಂದ್ರ ಸರಕಾರದಿಂದ ಎಷ್ಟೇ ಅನುಕೂಲಕರ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ರೈತರ ಸಂಕಷ್ಟ ಬಗೆಹರಿದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಉತ್ತಮ ಬೆಲೆ ಖಾತರಿ ಜತೆಗೆ, ಬೆಳೆಗಳ ದಾಸ್ತಾನು ಖಾತರಿಯನ್ನು ರೈತರಿಗೆ ಕೊಡಬೇಕಿದೆ ಎಂದು ಉಭಯ ಸಚಿವರು ಸಮಾಲೋಚನೆ ನಡೆಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News