ಎಚ್.ಸಿ.ಬಾಲಕೃಷ್ಣ/ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕು ಅನ್ನುವುದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಸೆಯಾಗಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ಮಂಗಳವಾರ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜ್ವಲ್ ಪ್ರಕರಣಕ್ಕೂ ನೈಸ್, ಕೆಪಿಎಸ್‍ಸಿಗೂ ಏನು ಸಂಬಂಧ?. ಪದೇ ಪದೇ ಪ್ರಜ್ವಲ್ ಕುರಿತು ಮಾತನಾಡಿಯೇ ಅವರನ್ನು ಜೈಲಿಗೆ ಕಳುಹಿಸಿದರು. ಪ್ರಜ್ವಲ್ ಜೈಲಲ್ಲೇ ಇರಬೇಕು, ಅವರನ್ನು ರಾಜಕೀಯವಾಗಿ ಮುಗಿಸಿ ತಮ್ಮ ಮಗನನ್ನು ಪ್ರತಿಷ್ಠಾಪನೆ ಮಾಡಬೇಕು ಎನ್ನುವುದೇ ಕುಮಾರಸ್ವಾಮಿ ಅವರ ಅಸಲಿ ಅಭಿಲಾಷೆ ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಹೇಗೆ ಬಂತು ಎಂದು ಅನುಮಾನವಿದ್ದರೆ ಸಿಬಿಐ ತನಿಖೆಗೆ ಕುಮಾರಸ್ವಾಮಿ ಪತ್ರ ಬರೆಯಲಿ ಎಂದು ಸಚಿವ ಬಾಲಕೃಷ್ಣ ಸವಾಲು ಎಸೆದರು.

ನಾನು ವಿದೇಶದಿಂದ ಬರುವವರೆಗೆ ಯಾರೂ ನಿದ್ದೆ ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಬಾಲಕೃಷ್ಣ, ಅವರು ಬರುವವರೆಗೂ ನಾವ್ಯಾರೂ ನಿದ್ದೆಯೇ ಮಾಡಿರಲಿಲ್ಲ. ಎಲ್ಲಿ ಎದೆ ಢಮ್ ಅನ್ನುತ್ತೋ ಅಂತ ಭಯ ಇತ್ತು. ಎದೆ ಗಟ್ಟಿಯಾಗಿ ಇಟ್ಟುಕೊಂಡಿದ್ದೆವು. ಇಂತಹ ಚಿಲ್ಲರೆ ಹೇಳಿಕೆಗಳನ್ನು ನೀಡುವುದನ್ನು ಕುಮಾರಸ್ವಾಮಿಯವರು ನಿಲ್ಲಿಸಲಿ ಎಂದು ವ್ಯಂಗ್ಯವಾಡಿದರು.

ದೇವೇಗೌಡರ ಕುಟುಂಬವನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಬಾಲಕೃಷ್ಣ, ಯಾರು, ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನಮ್ಮನ್ನು ಮುಗಿಸಲು ಅವರು ನೋಡಿದರೆ, ನಾವು ಅದನ್ನೇ ಮಾಡುತ್ತೇವೆ, ಇದು ರಾಜಕಾರಣ. ದೇವೇಗೌಡರು, ಕುಮಾರಸ್ವಾಮಿ ಎಂದರೆ ಒಕ್ಕಲಿಗರು ಎದ್ದು ನಿಲ್ಲುತ್ತಾರೆ ಎನ್ನುವ ಸೆಂಟಿಮೆಂಟ್ ರಾಜಕಾರಣ ಬಿಡಲಿ ಎಂದರು.

ಪಂಚಾಯಿತಿ ಸದಸ್ಯನಂತೆ ಎಚ್‍ಡಿಕೆ ವರ್ತನೆ: ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗೌರವಯುತವಾಗಿ ಮಾತನಾಡಲಿ. ಕೇಂದ್ರ ಮಂತ್ರಿಯಾಗಿದ್ದಾರೆ, ರಾಜ್ಯಕ್ಕೆ ಉದ್ಯೋಗಗಳನ್ನು ತರಲಿ. ಆದರೆ, ಅವರು ಕೇಂದ್ರ ಮಂತ್ರಿ ಎನ್ನುವುದನ್ನು ಮರೆತು ಗ್ರಾಮ ಪಂಚಾಯಿತಿ ಸದಸ್ಯನಂತೆ ವರ್ತಿಸುತ್ತಿದ್ದಾರೆ’

-ಎಚ್.ಸಿ.ಬಾಲಕೃಷ್ಣ, ಸಚಿವ

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor