×
Ad

ಬಿಜೆಪಿಯವರು ಹಿಂದೂ- ಮುಸ್ಲಿಮರೆಂದು ಭೂತ ಕನ್ನಡಿಯಿಂದ ನೋಡುವುದು ಬಿಡಬೇಕು : ಲಕ್ಷ್ಮೀ ಹೆಬ್ಬಾಳ್ಕರ್‌

Update: 2025-06-02 18:08 IST

 ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಬಿಜೆಪಿಯವರು ಹಿಂದೂ, ಮುಸ್ಲಿಮರೆಂದು ಭೂತ ಕನ್ನಡಿಯಿಂದ ನೋಡುವುದನ್ನು ಬಿಡಬೇಕು. ಸಾಮಾಜಿಕ ಬದ್ಧತೆಯಿಂದ ಎಲ್ಲವನ್ನೂ ನೋಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವವೆ ಲಕ್ಷ್ಮೀ ಹೆಬ್ಬಾಳ್ಕರ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ‌.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಂಘಪರಿವಾರವನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿಯ ಸುನೀಲ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೊದಲು ಸುನೀಲ್ ಕುಮಾರ್ ಅವರು ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕೆಂದು ತಿರುಗೇಟು ನೀಡಿದರು.

ನಾವು ಕೂಡ ಹಿಂದೂನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಲ್ಲೇ ರಾಮ ಇದ್ದಾನೆ. ಮಹಾತ್ಮಾ ಗಾಂಧಿ ಪಕ್ಷದವರು‌ ನಾವು. ರಾಮನ ಮೇಲೆ ನಮಗೂ ಭಕ್ತಿ ಇದೆ. ಬಿಜೆಪಿಯವರು ಹಿಂದೂ, ಮುಸ್ಲಿಂ ವಿಷಯದಲ್ಲಿ ರಾಜಕೀಯ ‌ಮಾಡಿಕೊಂಡು ಬರುತ್ತಿದ್ದಾರೆ. ಯಾರೇ ಕಾನೂನು ಕೈಗೆತ್ತಿಕೊಂಡರೂ, ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.

ನಾವು ಯಾರನ್ನೂ ಟಾರ್ಗೆಟ್ ಮಾಡುವ ಅನಿವಾರ್ಯತೆ ಇಲ್ಲ. ಬಿಜೆಪಿಗೆ ಮಾತ್ರ ಅಂತಹ ಅನಿವಾರ್ಯತೆ ಇದೆ. ನಮ್ಮ ಮೊದಲ ಆದ್ಯತೆ ಕಾನೂನು ಸುವ್ಯವಸ್ಥೆ ಇರಬೇಕು ಎಂಬುದು. ಉಡುಪಿಯಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆ. ಅವಿಭಾಜ್ಯ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿ ಮಾಡುತ್ತೇವೆ ಎಂದು ಹೇಳಿದರು.

ಸಂತ್ರಸ್ತರ ಗೌಪ್ಯತೆ ಕಾಪಾಡಬೇಕು :

ಬೆಳಗಾವಿ ಸಾಮೂಹಿಕ ಅತ್ಯಾಚಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿಯಲ್ಲಿ ಹದಿನೈದು ದಿನದ ಹಿಂದೆ ಒಂದು ಪ್ರಕರಣ ಆಗಿತ್ತು. ಇದು ಬಹಳ ಸೂಕ್ಷ್ಮ ವಿಚಾರ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಹೇಳುತ್ತಿದ್ದೇನೆ. ಸಂತ್ರಸ್ತರ ಗೌಪ್ಯತೆಯನ್ನು ಕಾಪಾಡಬೇಕು. ಪೊಲೀಸ್ ಕಮಿಷನರ್ ಜೊತೆ ಸಂಪರ್ಕದಲ್ಲಿದ್ದೇನೆ. ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಈಗ ಆಗಿರುವ ಘಟನೆಯನ್ನು ನಾನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತೇನೆ. ಈಗಾಗಲೇ ಇಬ್ಬರ ಬಂಧನ ಕೂಡ ಆಗಿದೆ. ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಾಳೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧನ ಮಾಡುತ್ತೇವೆ ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News