ರೈತರಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶಕ್ಕಾಗಿ ಭೂ ಮರು ಸರ್ವೆ: ಸಚಿವ ಕೃಷ್ಣ ಬೈರೇಗೌಡ

Update: 2023-11-15 13:50 GMT
ಫೈಲ್‌ ಚಿತ್ರ

ರಾಮನಗರ, ನ.15: ಭೂ ಸರ್ವೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದರಿಂದಾಗಿ, ರೈತರು ತಮ್ಮದಲ್ಲದ ತಪ್ಪಿಗೆ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಹೀಗಾಗಿ ರೈತರ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಶತಮಾನಗಳ ನಂತರ ಭೂ ಮರು ಸರ್ವೆ ಪ್ರಾಯೋಗಿಕ ಪರೀಕ್ಷೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಭೂ ಮರು ಮಾಪನ (ರೀ ಸರ್ವೆ) ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ವೇ ನಂಬರ್ ವ್ಯಾಜ್ಯ(ಡಿಸ್ಪ್ಯೂಟ್) ಎಂಬುದು ಇತ್ತೀಚೆಗೆ ರೈತರ ಪಾಲಿನ ಸಾಮಾನ್ಯ ಸಮಸ್ಯೆಯಾಗಿದೆ. ತಮ್ಮದಲ್ಲದ ತಪ್ಪಿಗೆ ದಿನಂಪ್ರತಿ ಸರಕಾರಿ ಕಚೇರಿಯನ್ನು ಅಲೆಯುವಂತಾಗಿದೆ ಎಂದು ವಿಷಾದಿಸಿದರು.

ಅಲ್ಲದೆ, ರೈತರ ಈ ಪರಿಸ್ಥಿತಿಗೆ ಸರ್ವೇ ಇಲಾಖೆಯಲ್ಲಿನ ಸಮಸ್ಯೆಯೆ ಕಾರಣ. ಬ್ರಿಟೀಷರ ಕಾಲದಲ್ಲಿ 1925 ರಲ್ಲಿ ನಡೆದ ಭೂ ಸರ್ವೇಯನ್ನೆ ಆಧಾರವಾಗಿಟ್ಟುಕೊಂಡು ನಾವು ಈಗಲೂ ವ್ಯವಹರಿಸುತ್ತಿದ್ದೇವೆ. ಇದೇ ಕಾರಣಕ್ಕೆ ಇದೀಗ ಭೂ ಮರು ಸರ್ವೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಇದು ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲ ಕೃಷಿ ಮತ್ತು ಅರಣ್ಯ ಭೂಮಿಯನ್ನು ರೀ ಸರ್ವೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ರೀ ಸರ್ವೇ ಲಾಭವೇನು?: ಪ್ರತಿ ಹಳ್ಳಿಯ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳಿಗೆ ಸಂಬಂಧಿಸಿದಂತೆ ಈಗ ಸರಕಾರದ ಬಳಿ ಇರುವುದು ನೂರು ವರ್ಷಗಳ ಹಳೆಯ ದಾಖಲೆ. ಆದರೆ ಈ ನೂರು ವರ್ಷದಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪ್ರತಿಯೊಂದು ಗ್ರಾಮಠಾಣಾ ಹಾಗೂ ಸರ್ವೇ ನಂ ಗಡಿಯಲ್ಲೂ ವ್ಯತ್ಯಾಸಗಳಿವೆ. ಈ ಬಗ್ಗೆ ಸರಕಾರಿ ದಾಖಲೆಗಳಲ್ಲಿ ನಿಖರ ವಿವರಣೆ ಇಲ್ಲ ಎಂದು ಅವರು ಹೇಳಿದರು.

ಇದಲ್ಲದೆ, ಸರಕಾರಿ ಭೂ ಒತ್ತುವರಿ ಜಮೀನು ಯಾವುದು? ಹಾಗೂ ಅರಣ್ಯ ಪ್ರದೇಶದ ಗಡಿಯ ಬಗ್ಗೆಯೂ ಸಾಕಷ್ಟು ಗೊಂದಲ ಇದೆ. ಈ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿಯೆ ಇದೀಗ ತಾಂತ್ರಿಕ ಭೂ ರೀ ಸರ್ವೇಗೆ ಚಾಲನೆ ನೀಡಲಾಗಿದೆ. ಡ್ರೋನ್ ತಂತ್ರಜ್ಞಾನದ ಮೂಲಕ ಭೂ ರೀ ಸರ್ವೆ ನಡೆಸಲಾಗುತ್ತಿದೆ. ಡ್ರೋನ್ ಪ್ರತಿ ಚ.ಕಿಲೊಮೀಟರ್ ಗೆ 4 ಸಾವಿರಕ್ಕೂ ಅಧಿಕ ಫೋಟೊ ತೆಗೆಯುತ್ತದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಈ ಫೋಟೊಗಳ ಆಧಾರದಲ್ಲಿ ವೈಜ್ಞಾನಿಕವಾಗಿ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳನ್ನು ಗುರುತಿಸಲಾಗುವುದು. ಈ ಮೂಲಕ ರೈತರ ಸರ್ವೇ ವ್ಯಾಜ್ಯಗಳಿಗೆ ಶಾಶ್ವತ ಪರಿಹಾರ ಹಾಗೂ ಸರಕಾರಿ ಭೂಮಿ ಗುರುತಿಸಿ ಒತ್ತುವರಿ ತೆರವು ಮಾಡಲು ಸಹಕಾರಿಯಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್, ವಿಧಾನಪರಿಷತ್ ಸದಸ್ಯ ಎಸ್.ರವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News