ಜ.1ರಿಂದ LLR ನಿಯಮ ಬದಲಾವಣೆ: 7 ದಿನದೊಳಗೆ ಕಲಿಕಾ ಪರೀಕ್ಷೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ವಾಹನ ಚಾಲನಾ ಕಲಿಕಾ ಪರವಾನಗಿ(ಎಲ್‍ಎಲ್‍ಆರ್) ಪಡೆಯಲು ಅರ್ಜಿ ಸಲ್ಲಿಸಿದವರು ಏಳು ದಿನಗಳ ಒಳಗೆ ಆನ್‍ಲೈನ್ ಮೂಲಕ ಕಲಿಕಾ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳುವ ನಿಯಮ ಜ.1 ರಿಂದ ಜಾರಿಗೆ ಬರಲಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ.ಯೋಗೀಶ್ ತಿಳಿಸಿದ್ದಾರೆ.
ವಾಹನ ಚಾಲನೆ ಕಲಿಯಲು ಅರ್ಜಿ ಹಾಕಿದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂಬುದು ಈ ಪರೀಕ್ಷೆಯಲ್ಲಿ ಪತ್ತೆ ಹಚ್ಚಲಾಗುತ್ತದೆ. ಯಾವುದೇ ಸಮಸ್ಯೆ ಇಲ್ಲದವರಿಗೆ ಚಾಲನಾ ಕಲಿಕೆಗೆ ಪರವಾನಗಿ ಸಿಗಲಿದೆ. ಎನ್‍ಐಸಿ ಅಭಿವೃದ್ಧಿ ಪಡಿಸಿರುವ ಕೇಂದ್ರೀಕೃತ ವೆಬ್ ಆಧಾರಿತ ಸಾರಥಿ ತಂತ್ರಾಂಶದ ಮೂಲಕ ಆಧಾರ್, ಮೊಬೈಲ್ ಒಟಿಪಿ ಬಳಸಿಕೊಂಡು ಅರ್ಜಿ ಸಲ್ಲಿಸಬೇಕು. ನಿಗದಿತ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಶುಲ್ಕ ಪಾವತಿಸಬೇಕು ಎಂದು ಹೇಳಿದೆ.
ಪರವಾನಗಿ ಪ್ರಾಧಿಕಾರಿ ಅವರಿಂದ ಅರ್ಜಿ ಪರಿಶೀಲನೆ ನಡೆಸಿದ ಬಳಿಕ ಏಳು ದಿನಗಳ ಒಳಗೆ ಆನ್‍ಲೈನ್ ಮೂಲಕ ಪರೀಕ್ಷೆ ತೆಗೆದುಕೊಳ್ಳಬೇಕು. ಏಳು ದಿನಗಳ ಒಳಗೆ ಪರೀಕ್ಷೆ ತೆಗೆದುಕೊಳ್ಳದೇ, ಇದ್ದರೆ ತಂತ್ರಾಂಶದಲ್ಲಿ ಅರ್ಜಿಯು ಸ್ವಯಂ ರದ್ದಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಡಿ.31ರ ಒಳಗೆ ಕಲಿಕಾ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿ ಏಳು ದಿನಗಳ ಒಳಗೆ ಪರೀಕ್ಷೆ ತೆಗೆದುಕೊಳ್ಳುವ ನಿಯಮ ಜ.1 ರಿಂದ ಜಾರಿಗೆ ಬರಲಿದೆ ಎಂದು ಯೋಗೀಶ್ ಮಾಹಿತಿ ನೀಡಿದ್ದಾರೆ.