ಧರ್ಮಸ್ಥಳ ಪ್ರಕರಣ: ಕಾಂಗ್ರೆಸ್ ಮುಖಂಡರು ತನಿಖೆಗೆ ಧಕ್ಕೆಯುಂಟಾಗುವ ಹೇಳಿಕೆ ನೀಡದಂತೆ ನಿರ್ದೇಶನ ನೀಡಲು ಸೋನಿಯಾ ಗಾಂಧಿಗೆ ಪತ್ರ
ಸೋನಿಯಾ ಗಾಂಧಿ (Photo: PTI)
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಸಂಬಂಧ ರಾಜ್ಯ ಸರಕಾರವು ಎಸ್‍ಐಟಿ ತನಿಖೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಎಸ್‍ಐಟಿ ಕಾರ್ಯಾಚರಣೆಗೆ ಮತ್ತು ನ್ಯಾಯೋಚಿತ ತನಿಖೆಗೆ ಧಕ್ಕೆಯುಂಟುಮಾಡುವಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ‘ಕೊಂದವರು ಯಾರು?’ ಎಂಬ ಸಂಘಟನೆಯು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದೆ.
ಗುರುವಾರ ಕಾಂಗ್ರೆಸ್ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿಗೆ ‘ಕೊಂದವರು ಯಾರು?’ ಎಂಬ ಸಂಘಟನೆಯ ಹೆಸರಿನಲ್ಲಿ ಪತ್ರಕರ್ತೆ ವಿಜಯಮ್ಮ, ಅರುಂಧತಿ ನಾಗ್, ಡಾ.ಸಬಿತಾ ಬನ್ನಾಡಿ, ಪದ್ಮಾವತಿ ರಾವ್, ಕವಿತಾ ಲಂಕೇಶ್, ಡಿ.ಸುಮನ ಕಿತ್ತೂರು, ಅಕ್ಕೈ ಪದ್ಮಶಾಲಿ, ಪ್ರೊ. ಎ.ಆರ್.ವಾಸವಿ, ಪ್ರೊ.ಜಾನಕಿ ನಾಯರ್, ಸಿ.ಜಿ. ಮಂಜುಳಾ, ಡಾ. ವಸುಂಧರಾ ಭೂಪತಿ, ಡಾ. ಸಬಿಹಾ ಭೂಮಿಗೌಡ, ಡಾ.ಎಚ್.ಎಸ್.ಅನುಪಮಾ ಸೇರಿ 40ಕ್ಕೂ ಅಧಿಕ ಮಹಿಳಾ ಹೋರಾಟಗಾರರು ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಮುಖಂಡರು ತನಿಖೆಗೆ ಧಕ್ಕೆಯುಂಟುಮಾಡುವಂತಹ ಹೇಳಿಕೆ ನೀಡುವ ಬದಲಿಗೆ, ಮಹಿಳೆಯರ ಮೇಲೆ ಆಗಿರುವ ಹಿಂಸೆಯನ್ನು ಗಂಭೀರವಾಗಿ ಪರಿಗಣಿಸಿ, ಅದಕ್ಕೆ ನ್ಯಾಯ ಕೊಡಿಸುವುದಕ್ಕೆ ಒತ್ತು ನೀಡಬೇಕು. ಹಿಂಸೆಗೆ ಕಾರಣವಾಗಿರುವ ಹಾಗೂ ಆಳವಾಗಿ ಬೇರೂರಿರುವ ರಚನೆಗಳನ್ನು ವಿರೋಧಿಸುವುದಕ್ಕೆ ದನಿ ಜೋಡಿಸಬೇಕು ಎಂದು ಮಹಿಳಾ ಹೋರಾಟಗಾರರು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಪ್ರದೇಶದಲ್ಲಿ ನಡೆದಿರುವ ಅಸಹಜ ಸಾವುಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಯು ಒತ್ತಡ ಮುಕ್ತವಾಗಿ ನಿಷ್ಪಕ್ಷಪಾತವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಎಸ್‍ಐಟಿಯು ದೃಢವಾಗಿ ಗಮನ ಕೇಂದ್ರೀಕರಿಸಬೇಕು. ಈ ಅಸಹಜ ಸಾವುಗಳ ಬಗ್ಗೆ ಮತ್ತು ಇದರಲ್ಲಿ ಸ್ಥಳೀಯ ಪೊಲೀಸ್ ಮತ್ತು ಇತರ ಅಧಿಕಾರಿ ವರ್ಗವು ಶಾಮೀಲಾಗಿರುವ ಬಗ್ಗೆ ಮಾಹಿತಿ ಹಕ್ಕು ವರದಿ ಮತ್ತು 2018ರ ಉಗ್ರಪ್ಪ ಸಮಿತಿಯ ವರದಿಗಳೂ ಸೂಚಿಸಿವೆ. ಹೀಗಾಗಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು, ಅಪರಾಧ ಎಸಗಿರುವವರನ್ನು ಬಂಧಿಸಬೇಕು, ಕರ್ತವ್ಯ ನಿರ್ವಹಿಸಲು ವಿಫಲರಾದ ಅಧಿಕಾರ ವರ್ಗವನ್ನು ಹೊಣೆಗಾರರನ್ನಾಗಿಸಬೇಕು ಎಂದು ಆಗ್ರಸಿದ್ದಾರೆ.
ತಮ್ಮ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಸಲುವಾಗಿ ಸೌಜನ್ಯ ಪ್ರಕರಣದಲ್ಲಿನ ತನಿಖೆಗೆ ಎಡವಟ್ಟು ಮಾಡಿದ್ದಕ್ಕೆ ಕಾರಣರಾದ, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸರಕಾರ ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು 2024ರ ಸೆ.13 ರಂದು ಹೈಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿಯವರೇ, ಇದು ಧರ್ಮಸ್ಥಳ ಗ್ರಾಮದ ಕತೆಯಷ್ಟೇ ಅಲ್ಲ, ಮಹಿಳೆಯರ ಮೇಲಿನ ಹಿಂಸೆಯೊಂದಿಗೆ ಶಾಮೀಲಾಗುವ ವ್ಯವಸ್ಥೆಯನ್ನು ಸರಕಾರ ಎದುರಿಸುತ್ತದೆಯೇ ಎಂಬುದರ ಜೊತೆಗೆ ಕರ್ನಾಟಕದ ಮಹಿಳೆಯರಾದ ನಮ್ಮ ಜೀವಗಳೂ ಸರಕಾರಕ್ಕೆ ಮುಖ್ಯವೆಂಬುದನ್ನು ನಂಬಬಹುದೇ? ಎಂಬ ಪ್ರಶ್ನೆಯೂ ಇದೆ. ಹೀಗಾಗಿ ಧರ್ಮಸ್ಥಳ ಗ್ರಾಮದ ಮಹಿಳೆಯರಿಗೆ ನ್ಯಾಯ ದೊರಕಿಸಲು ತಾವು ಮಧ್ಯಸ್ಥಿಕೆಯನ್ನು ವಹಿಸಬೇಕು ಎಂದು ಮಹಿಳಾ ಹೋರಾಟಗಾರರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.