ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು : ಕೇಂದ್ರಕ್ಕೆ ಡಿ.ಕೆ.ಶಿವಕುಮಾರ್ ಮನವಿ
‘ಮೇಕೆದಾಟು ಅಣೆಕಟ್ಟಿನ ನೀರನ್ನು ನೀರಾವರಿಗೆ ಬಳಸುವುದಿಲ್ಲ’
ಚೆನ್ನೈ(ಮಹಾಬಲಿಪುರಂ) : ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಳ ಮಾಡಬಾರದು, 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಎಂಬುದು ನಮ್ಮ ಸಭೆಯ ಪ್ರಮುಖ ಅಜೆಂಡಾ ಆಗಿತ್ತು. ಈ ವಿಚಾರದಲ್ಲಿ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ರಾಜ್ಯಗಳು ಒಮ್ಮತದ ತೀರ್ಮಾನಕ್ಕೆ ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ 31ನೆ ದಕ್ಷಿಣ ವಲಯ ಮಂಡಳಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇದರ ಜೊತೆಗೆ ನೆರೆ ರಾಜ್ಯಗಳ ನೀರು ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ಕರೆದು ಸೂಕ್ತ ರೀತಿಯಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಯಡಿ ಸಂಗ್ರಹವಾಗುವ ಒಂದೇ ಒಂದು ಹನಿ ನೀರನ್ನು ನಾವು ನೀರಾವರಿಗೆ ಬಳಸುವುದಿಲ್ಲ ಎಂದು ತಮಿಳುನಾಡಿಗೆ ಸ್ಪಷ್ಟಪಡಿಸಿದ್ದೇನೆ. ಕುಡಿಯಲು 5 ಟಿಎಂಸಿ ನೀರು ಬಳಸುವುದು ಬಿಟ್ಟರೆ ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಾಗುವುದು.
ಮೇಕೆದಾಟು ಅಣೆಕಟ್ಟು ಯೋಜನೆಯಿಂದ ತಮಿಳುನಾಡು ಹಾಗೂ ಪಾಂಡಿಚೇರಿ ಪಾಲಿನ ನೀರು ನೀಡಲು ಸಾಧ್ಯ. ಮೇಕೆದಾಟು ಅಣೆಕಟ್ಟು ನಿರ್ಮಾಣವಾಗುತ್ತಿರುವುದೇ ನಿಮಗಾಗಿ ಎಂದು ಹೇಳಿರುವೆ ಎಂದು ಶಿವಕುಮಾರ್ ತಿಳಿಸಿದರು.