×
Ad

ಕೇಂದ್ರ ಸರಕಾರ ಒಪ್ಪಿಗೆ ಕೊಟ್ಟರೆ ನಾಳೆಯೆ ಮಹಾದಾಯಿ ಯೋಜನೆ ಜಾರಿ: ಸಿಎಂ ಸಿದ್ದರಾಮಯ್ಯ

Update: 2025-04-20 19:56 IST

Photo: X/@siddaramaiah

ಬೆಳಗಾವಿ: ಮಹಾದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆಯನ್ನೆ ಕೊಡುತ್ತಿಲ್ಲ. ಕೇಂದ್ರ ಸರಕಾರ ಒಪ್ಪಿಗೆ ಕೊಟ್ಟರೆ ತಕ್ಷಣ ಈ ಎಲ್ಲಾ ನೀರಾವರಿ ಯೋಜನೆಗಳನ್ನು ಆರಂಭಿಸಲು ನಮ್ಮ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ರವಿವಾರ ಸುವರ್ಣ ವಿಧಾನಸೌಧದ ಆವರಣದಲ್ಲಿ ಕೃಷಿ ಇಲಾಖೆಯ ಸಹಾಯಧನದ ಅಡಿಯಲ್ಲಿ ಸುಮಾರು 400 ಕೋಟಿ ರೂ.ವೆಚ್ಚದ ಕೃಷಿ ಯಂತ್ರ ಮತ್ತು ಸಲಕರಣೆಗಳನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.

ನೀರಾವರಿ ಯೋಜನೆಗಳಿಗೆ ನಮ್ಮ ಸರಕಾರ 23 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಕೇಂದ್ರ ಸರಕಾರ ಬಜೆಟ್‍ನಲ್ಲಿ ಘೋಷಿಸಿತ್ತು. ಆದರೆ, ಇವತ್ತಿನವರೆಗೂ ಒಂದು ಪೈಸೆಯನ್ನೂ ಕೊಟ್ಟಿಲ್ಲ ಎಂದು ಅವರು ಹೇಳಿದರು.

ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು. ಸಾಮಾನ್ಯ ವರ್ಗದ ಕೃಷಿಕರಿಗೆ ಶೇ.40ರಷ್ಟು, ಪರಿಶಿಷ್ಠ ಸಮಾಜದ ಕೃಷಿಕರಿಗೆ ಶೇ.50ರಷ್ಟು ರಿಯಾಯ್ತಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದ್ದೇವೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಯಂತ್ರಗಳ ಮೇಲಿನ ಅವಲಂಭನೆ ಹೆಚ್ಚಾಗಿದೆ. ಹೀಗಾಗಿ ರಿಯಾಯ್ತಿ ಬೆಲೆಯಲ್ಲಿ ಕೃಷಿಯಂತ್ರಗಳ ವಿತರಣೆ ಸರಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೃಷಿ ಭಾಗ್ಯವನ್ನು ಒಣಕೃಷಿ ಬೆಳೆಗಾರರಿಗೆ ಜಾರಿಗೆ ತಂದಿದ್ದೇವೆ. ಕಳೆದ ವರ್ಷ 25 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡ ಮಾಡಿಸಿದ್ದೇವೆ. ಈ ವರ್ಷ ಇದು ಇನ್ನೂ ಹೆಚ್ಚಾಗುತ್ತದೆ. ಕೃಷಿಹೊಂಡ ಬಹಳ ಉಪಯುಕ್ತ ಯೋಜನೆಯಾಗಿದೆ ಎಂದು ತಜ್ಞರು ವರದಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದ್ದೇವೆ. ನಮ್ಮ ಸರಕಾರ ಬಂದ ಮೇಲೆ ಆಹಾರ ಉತ್ಪಾದಕರಾದ ನಿಮ್ಮ ಕಾರಣದಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ಕೊಡಲು ಪ್ರಾರಂಭ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಶಾಸಕರಾದ ಆಸಿಫ್ ಸೇಠ್, ಅಭಯ್ ಪಾಟೀಲ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News