ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಝ್ವಾನ್ ಅರ್ಶದ್
ಬೆಂಗಳೂರು : ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲ ಫಲಾನುಭವಿಗಳು ಕಡ್ಡಾಯವಾಗಿ ಸೆ.30ರೊಳಗೆ ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಐದು ವರ್ಷಗಳ ಬಳಿಕ 2.65ಕೋಟಿ ಕಾರ್ಡುಗಳ ಇಕೆವೈಸಿ ಮಾಡುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಶದ್ ತಿಳಿಸಿದರು.
ಶುಕ್ರವಾರ ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಆಹಾರ ಭವನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಹೊಸದಾಗಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಕೇಂದ್ರ ಸರಕಾರ ನಿರ್ಬಂಧಿಸಿದೆ. ಇಕೆವೈಸಿ ಬಳಿಕ ಎಷ್ಟು ಪ್ರಮಾಣದಲ್ಲಿ ಕಾರ್ಡುಗಳು ಪತ್ತೆಯಾಗುತ್ತವೆ ಎಂಬುದನ್ನು ನೋಡಿಕೊಂಡು, ಹೊಸ ಫಲಾನುಭವಿಗಳಿಗೆ ಅವಕಾಶ ಮಾಡಿಕೊಡುತ್ತೇವೆ. ಬಿಪಿಎಲ್ ಕಾರ್ಡ್ ಪಡೆಯಲು ನಿಗದಿ ಮಾಡಿರುವ ಆದಾಯದ ಮಿತಿಯನ್ನು ಹೆಚ್ಚಳ ಮಾಡಬೇಕೋ, ಬೇಡವೋ ಎಂಬುದರ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಆಹಾರ ಭದ್ರತಾ ಕಾಯ್ದೆಯಡಿ ಗ್ರಾಮೀಣ ಪ್ರದೇಶದ ಶೇ.75 ಹಾಗೂ ನಗರ ಪ್ರದೇಶದ ಶೇ.50ರಷ್ಟು ಮಂದಿ ಫಲಾನುಭವಿಗಳಾಗಬೇಕು. ನಮ್ಮ ರಾಜ್ಯದ ಜನಸಂಖ್ಯೆ ಸುಮಾರು 7 ಕೋಟಿ ಇದ್ದು, ನಾವು 4 ಕೋಟಿ ಮಂದಿಯನ್ನು ತಲುಪಿದ್ದೇವೆ. ಇನ್ನೂ 50 ಲಕ್ಷ ಫಲಾನುಭವಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಬೇಕು ಎಂದು ರಿಝ್ವಾನ್ ಅರ್ಶದ್ ಹೇಳಿದರು.
ಆದಾಯ ತೆರಿಗೆ ಪಾವತಿಸಿರುವ, ಜಿಎಸ್‍ಟಿ ಪಾವತಿಸಿರುವ ಹಾಗೂ ಕಳೆದ 12 ತಿಂಗಳಿನಿಂದ ಪಡಿತರ ಪಡೆಯದವರನ್ನು ಗುರುತಿಸಿ, ಕೇಂದ್ರ ಸರಕಾರವೆ 7 ಲಕ್ಷ ಕಾರ್ಡುಗಳ ಪಟ್ಟಿ ಕಳುಹಿಸಿ, ಪರಿಷ್ಕರಣೆ ಮಾಡುವಂತೆ ತಿಳಿಸಿದೆ. ಇದರಿಂದಾಗಿ, ಸಾಕಷ್ಟು ಪ್ರಮಾಣದಲ್ಲಿ ಕಾರ್ಡುಗಳು ರದ್ದಾಗಲಿವೆ. ಆದುದರಿಂದ, ತಾತ್ಕಾಲಿಕವಾಗಿ ಪಡಿತರ ಚೀಟಿಗಳ ಪರಿಷ್ಕರಣೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದೇನೆ. ತಾಂತ್ರಿಕ ಕಾರಣಗಳಿಂದ ರದ್ದಾಗಿರುವ ಕಾರ್ಡುಗಳನ್ನು ಮರುಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಅದರಂತೆ, ಎಲ್ಲ ಗೋದಾಮುಗಳಲ್ಲಿ ಸಿಸಿಟಿವಿ ಅಳವಡಿಕೆ, ಪಡಿತರ ಸರಬರಾಜು ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ, ಗೋದಾಮು ಮತ್ತು ಸಾಗಾಟ ನಿರ್ವಹಣೆಗೆ ಕಂಮಾಡ್ ಅಂಡ್ ಕಂಟ್ರೋಲ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ. ಇದರಿಂದ ಕಳ್ಳಸಾಗಾಟ, ಕಾಳಸಂತೆಯಲ್ಲಿ ಮಾರಾಟ ತಡೆಗಟ್ಟಲು ಅನುಕೂಲ ಆಗಲಿದೆ ಎಂದು ರಿಝ್ವಾನ್ ಅರ್ಶದ್ ಹೇಳಿದರು.
ಇಂದಿರಾ ಕಿಟ್ ಮಹತ್ವದ ಯೋಜನೆ: ಆಂಧ್ರ, ತಮಿಳುನಾಡು ಸೇರಿದಂತೆ ಹಲವೆಡೆ ವಿವಿಧ ಸಂದರ್ಭಗಳಲ್ಲಿ ಆಹಾರ ಕಿಟ್‍ಗಳನ್ನು ನೀಡಿರಬಹುದು. ಆದರೆ, ಪ್ರತಿ ತಿಂಗಳು ಆಹಾರ ಕಿಟ್ ನೀಡಲು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಒಂದು ವರ್ಷದಿಂದ ತಯಾರಿ ಮಾಡಿ ಈಗ ಒಂದು ಹಂತಕ್ಕೆ ಬಂದಿದೆ. ಮುಖ್ಯಮಂತ್ರಿ ಹಾಗೂ ಸಂಪುಟ ಸಭೆಯಲ್ಲಿ ಚರ್ಚಿಸಿ ಇಂದಿರಾ ಕಿಟ್ ಕಾರ್ಯಕ್ರಮ ಜಾರಿ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಯು.ಟಿ.ಖಾದರ್ ಸಮರ್ಥ ನಾಯಕ: ‘ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಯು.ಟಿ.ಖಾದರ್ ಹಿರಿಯ, ಸಮರ್ಥ ನಾಯಕ. ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಅವರು ಉತ್ತಮ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿದೆ’ ಎಂದು ಪ್ರಶ್ನೆಯೊಂದಕ್ಕೆ ರಿಝ್ವಾನ್ ಅರ್ಶದ್ ಉತ್ತರಿಸಿದರು.