ಮತದಾರರನ್ನು ಮತದಾನದ ಹಕ್ಕಿಗಾಗಿ ಭಿಕ್ಷೆ ಬೇಡುವಂತೆ ಮಾಡಬೇಡಿ : ಪ್ರಕಾಶ್ ರಾಜ್ ಆಕ್ರೋಶ
"SIR ಪ್ರಕ್ರಿಯೆಯನ್ನು ಕನಿಷ್ಠ ಒಂದು ವರ್ಷಕ್ಕೆ ವಿಸ್ತರಿಸಬೇಕು"
ಬೆಂಗಳೂರು : ಚುನಾವಣಾ ಆಯೋಗದ ಅಧಿಕಾರಿಗಳೇ, ‘ನಮ್ಮ ಮತ ಹಕ್ಕನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳ ಹಿಂದೆ ಯಾಕೆ ಅಲೆದಾಡುವಂತೆ ಮಾಡುತ್ತಿದ್ದೀರಿ? ನಮ್ಮ ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ’ ಎಂದು ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಇಡೀ ದೇಶದ ಜನರಿಂದ ಪರೀಕ್ಷೆ ಬರೆಸುತ್ತಿದೆಯೇ? ರಾಜ್ಯದಲ್ಲಿರುವ 5.54 ಕೋಟಿ ಮತದಾರರ ಮಾಹಿತಿಯನ್ನು ಒಂದು ತಿಂಗಳಿನಲ್ಲಿ ಪಡೆದುಕೊಳ್ಳಲು ಸಾಧ್ಯವೇ? ಯಾಕೆ ಬಿಎಲ್‍ಒಗಳ ಮೇಲೆ ಒತ್ತಡ ಹೇರುತ್ತೀರಿ? ಎಂದು ಪ್ರಶ್ನಿಸಿದರು.
ನಾಗರಹೊಳೆ, ಬಂಡೀಪುರದ ಗಡಿ ಭಾಗಗಳಲ್ಲಿ ಆರು ತಿಂಗಳುಗಳ ಕಾಲ ಕೇರಳ ಕಡೆಗೆ ವಲಸೆ ಹೋಗುತ್ತಾರೆ. ಉತ್ತರ ಕರ್ನಾಟಕದ ರೈತರು, ದಿನಗೂಲಿ ನೌಕರರು ಕೆಲಸ ಹುಡುಕಿಕೊಂಡು ಗೋವಾ, ಮಹಾರಾಷ್ಟ್ರ ಸೇರಿದಂತೆ ಇನ್ನಿತರೆ ರಾಜ್ಯಗಳಿಗೆ ಗುಳೆ ತೆರಳುತ್ತಾರೆ. ಈ ಜನಗಳಿಗೆ ಎಸ್‍ಐಆರ್ ಕುರಿತು ಯಾವುದೇ ಮಾಹಿತಿ ನೀಡದೇ, ಮನೆಗೆ ಭೇಟಿ ನೀಡಿದಾಗ ಅವರು ಲಭ್ಯವಿಲ್ಲ ಎಂಬ ಕಾರಣಕ್ಕೆ ಮತಪಟ್ಟಿಯಿಂದ ಹೆಸರು ಡಿಲೀಟ್ ಮಾಡುವುದು ಸರಿಯೇ? ಮನೆ ಸ್ಥಳಾಂತರಿಸಿದವರು ದೋಷಿಗಳಲ್ಲ ಎಂದು ಪ್ರಕಾಶ್ ರಾಜ್ ಹೇಳಿದರು.
ಸರಕಾರ ನಡೆಯುತ್ತಿರುವುದು ಜನರು ಕಟ್ಟುವ ತೆರಿಗೆಯಿಂದ. ಈ ತೆರಿಗೆಯ ಮೂಲಕ ಪೊಲೀಸ್, ಕಂದಾಯ, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಸಂಬಳ ಪಡೆದುಕೊಂಡು ಸರಕಾರವನ್ನು ನಡೆಸುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರುಗಳು ಮತದಾರನ ಬಳಿ ಐದು ವರ್ಷಕ್ಕೊಮ್ಮೆ ಹೋಗಿ, ಮತ ನೀಡಿ ಎಂದು ಬೇಡಿಕೊಳ್ಳುತ್ತಾರೆ. ಯಾರ ದುಡ್ಡಿನಿಂದ ಈ ದೇಶ ನಡೆಯುತ್ತಿದಿಯೋ ಅಂತಹ ಮತದಾರರು ಈಗ ನಿಮ್ಮ ಮುಂದೆ ಬಂದು ನಿಲ್ಲುವಂತೆ ಮಾಡುತ್ತೀರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೋಟು ಅಮಾನ್ಯೀಕರಣ ಮಾಡಿ ದೇಶದ ಜನರನ್ನು ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಿರಿ, ಕೋವಿಡ್ ಸಂದರ್ಭದಲ್ಲಿಯೂ ಜನರಿಗೆ ಸಾಕಷ್ಟು ತೊಂದರೆ ನೀಡಿದ್ದಿರಿ, ಈಗ ಮತ್ತೆ ಎಸ್‍ಐಆರ್ ಮೂಲಕ ಜನರ ಮತಹಕ್ಕನ್ನು ಡಿಲೀಟ್ ಮಾಡಿ ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತಿದ್ದೀರಿ? ಇದರ ಹಿಂದಿರುವ ರಾಜಕೀಯ ಏನು? ಇದರಿಂದ ನಿಮಗೆ ಏನು ಸಂತೋಷವಿದೆ? ಕರ್ನಾಟಕದಲ್ಲಿ ಇನ್ನು ಎರಡು ವರ್ಷಗಳ ಕಾಲ ಚುನಾವಣೆಗಳು ಇಲ್ಲ. ಹಾಗಾಗಿ ಈ ಪ್ರಕ್ರಿಯೆಯನ್ನು ಕನಿಷ್ಠ ಒಂದು ವರ್ಷಕ್ಕೆ ವಿಸ್ತರಿಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು.
ರಾಜ್ಯದಲ್ಲಿ ಎಸ್‍ಐಆರ್ ಪ್ರಕ್ರಿಯೆ ಪ್ರಾರಂಭವಾಗುತ್ತದೆಂದು ಆರು ತಿಂಗಳ ಮುಂಚೆಯೇ ಎಲ್ಲ ಮತದಾರರಿಗೂ ಯಾಕೆ ಮಾಹಿತಿ ನೀಡಿಲ್ಲ. ಏಕಾಏಕಿ ಎಸ್‍ಐಆರ್ ತಂದು ಜನರ ಮತಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಒಂದು ಮತಕ್ಷೇತ್ರದಿಂದ ಮತ್ತೊಂದು ಮತಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದಾರೆಯೇ ಹೊರತು ಅವರ್ಯಾರು ಜ್ಯುಪಿಟರ್, ಮಾರ್ಸ್ ಗ್ರಹಗಳಿಗೆ ಹೋಗಿಲ್ಲ. ಮತಹಕ್ಕನ್ನು ಡಿಲೀಟ್ ಮಾಡುವುದಕ್ಕಿಂತ ಮೊದಲು ಮತದಾರರಿಗೆ ನೊಟೀಸ್ ನೀಡಬೇಕು. ಸ್ಥಳಾಂತರಗೊಂಡವರಿಗೆ ನಮೂನೆ-8 ಕೊಡಬೇಕೇ ಹೊರತು, ನಮೂನೆ-6 ಅಲ್ಲ ಎಂದು ಅವರು ತರಾಟೆ ತೆಗೆದುಕೊಂಡರು.
ಚುನಾವಣಾ ಆಯೋಗವು ರಾಜ್ಯದ ಪ್ರತಿಯೊಬ್ಬ ಅಂಚಿನಲ್ಲಿರುವ ಮತದಾರನಿಗೂ ಎಸ್‍ಐಆರ್ ಕುರಿತು ಅರಿವು ಮೂಡಿಸಬೇಕು. ಈಗಾಗಲೇ ಸ್ಥಳಾಂತರ, ಗೈರು ಎಂದು ನಮೂದಿಸಿ ಡಿಲೀಟ್ ಮಾಡಿರುವ ಮತದಾರರೆಲ್ಲರನ್ನೂ ಮತಪಟ್ಟಿಗೆ ಸೇರ್ಪಡೆಗೊಳಿಸಿಕೊಳ್ಳಬೇಕು. ಚುನಾವಣಾ ಆಯೋಗ ನಮಗೆ ಸರಿಯಾದ ಉತ್ತರ ಕೊಡದಿದ್ದರೆ, ರಾಜ್ಯಾದ್ಯಂತ ಹೋರಾಟಗಳನ್ನು ತೀವ್ರಗೊಳಿಸುವುದರ ಜೊತೆಗೆ ನ್ಯಾಯಾಂಗ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಪ್ರಕಾಶ್ ರಾಜ್ ಎಚ್ಚರಿಕೆ ನೀಡಿದರು.
ಎದ್ದೇಳು ಕರ್ನಾಟಕದ ಪದಾಧಿಕಾರಿ ನೂರ್ ಶ್ರೀಧರ್ ಮಾತನಾಡಿ, ಬಾಡಿಗೆ ಮನೆ ಬದಲಾಯಿಸುವುದು, ಬದುಕಿಗಾಗಿ ಬೇರೆ ಊರಿಗೆ, ಮದುವೆಯಾಗಿ ಗಂಡನ ಮನೆಗೆ ಹೋಗುವುದು ಅಪರಾಧವೇ? ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಬದಲು, ವಿಳಾಸ ಬದಲಾವಣೆಗೆ ಫಾರಂ-8 ಕೊಡುವ ಸೌಜನ್ಯವನ್ನೂ ಆಯೋಗ ತೋರಿಲ್ಲ. ಈಗ ಮತ್ತೆ ಹೊಸದಾಗಿ ಫಾರಂ-6ನಲ್ಲಿ ಅರ್ಜಿ ಸಲ್ಲಿಸಿ ಎನ್ನುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಈ ವೇಳೆಯಲ್ಲಿ ಎಸ್‍ಐಆರ್ ಪ್ರಕ್ರಿಯೆಯಲ್ಲಿ ತೊಂದರೆಗೆ ಒಳಗಾದ ವಿವಿಧ ಕ್ಷೇತ್ರದ ಮತದಾರರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟರು.
ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕದ ತಾರಾ ರಾವ್, ನನ್ನ ಮತ ನನ್ನ ಹಕ್ಕು ತಂಡದ ಐಶ್ವರ್ಯ, ಮಧು ಭೂಷಣ್, ಮುಸ್ಲಿಮ್ ಮುತ್ತಹಿದ ಮಹಾಝ್‍ನ ಮುಹಮ್ಮದ್ ಯೂಸುಫ್ ಕನ್ನಿ, ಎಸ್‍ಐಆರ್ ನಲ್ಲಿ ತೊಂದರೆಗೊಳಗಾದ ರಾಧಾ, ರಂಜಿತ್, ತನ್ವೀರ್ ಅಹ್ಮದ್ ಉಪಸ್ಥಿತರಿದ್ದರು.
ಚುನಾವಣಾ ಆಯೋಗದ ಮುಂದಿಟ್ಟ ಪ್ರಮುಖ ಹಕ್ಕೊತ್ತಾಯಗಳು:
* ರಾಜ್ಯದ ಮತದಾರರ ಪಟ್ಟಿಯನ್ನು ಮರುರೂಪಿಸುವ ಈ ಪ್ರಕ್ರಿಯೆಯನ್ನು ಇಷ್ಟೊಂದು ದುಡುಕಿನಲ್ಲಿ ಮಾಡಬಾರದು. ಪೂರ್ಣ ಒಂದು ವರ್ಷದ ಕಾಲಾವಕಾಶ ನೀಡಿ, ವ್ಯವಧಾನದಿಂದ ಪ್ರಕ್ರಿಯೆ ನಡೆಸಬೇಕು.
* ಬಿಎಲ್‍ಒಗಳು ಹೋದಾಗ ಮನೆಯಲ್ಲಿ ಇಲ್ಲದವರ ಹೆಸರುಗಳನ್ನು ತಕ್ಷಣವೇ ಡಿಲೀಟ್ ಮಾಡಬಾರದು. ದುಡಿಮೆಗಾಗಿ ಅಲೆಯುವ ಜನರ ಜೊತೆ ಮಾನವೀಯತೆಯಿಂದ ನಡೆದುಕೊಂಡು, ಅವರಿಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಬೇಕು.
* ಸ್ಥಳಾಂತರಗೊಂಡವರನ್ನು ಅಥವಾ ಮನೆಯಲ್ಲಿ ಸಿಗದವರನ್ನು ಯಾವುದೇ ಕಾರಣಕ್ಕೂ 'ಡಿಲೀಟ್' ಪಟ್ಟಿಗೆ ಸೇರಿಸಬಾರದು. ಅವರು ಪ್ರಸ್ತುತ ಇರುವ ಸ್ಥಳಗಳಲ್ಲೇ ಗಣತಿ ನಮೂನೆ-8 ನೀಡುವ ವ್ಯವಸ್ಥೆಯಾಗಬೇಕು.
* ಹೊಸ ಮತದಾರರಿಗೆ ನಮೂನೆ-6 ಹಾಗೂ ಸ್ಥಳಾಂತರಗೊಂಡವರಿಗೆ ನಮೂನೆ-8 ನೀಡಿ ಪ್ರತಿಯೊಬ್ಬರನ್ನೂ ಪಟ್ಟಿಯಲ್ಲಿ ಒಳಗೊಳ್ಳಲು ಮತ್ತೆ ಮನೆಮನೆ ಗಣತಿ ನಡೆಸಬೇಕು.
* ಕರಡು ಪಟ್ಟಿ ಪ್ರಕಟವಾದ ನಂತರ ಪ್ರತಿಯೊಂದು ಬೂತ್ ಪ್ರದೇಶದಲ್ಲೂ ಮ್ಯಾನ್ಯುಯಲ್ ನಿಯಮದಂತೆ ಸಾರ್ವಜನಿಕ ಪರಿಶೀಲನಾ ಸಭೆ ನಡೆಸಿ, ಬಿಟ್ಟುಹೋದವರನ್ನು ಪಟ್ಟಿಗೆ ಸೇರಿಸಬೇಕು.
* ತಾರ್ಕಿಕ ವ್ಯತ್ಯಾಸ ತಂತ್ರಜ್ಞಾನದ ಕುರಿತು ಆಯೋಗ ಸ್ಪಷ್ಟನೆ ನೀಡಬೇಕು ಮತ್ತು ಇದನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.