Mangaluru | ಗಲ್ಫ್ ಉದ್ಯೋಗಾಕಾಂಕ್ಷಿಗಳಿಗೂ ತಟ್ಟಿದ IndiGo ಬಿಕ್ಕಟ್ಟು; ಕೊನೆ ಕ್ಷಣದಲ್ಲಿ ಸಂದರ್ಶನಗಳು Mumbaiಗೆ ಶಿಫ್ಟ್!
Photo: PTI
ಮಂಗಳೂರು: DGCAಯು ಪೈಲಟ್ ಗಳಿಗೆ ವಿಶ್ರಾಂತಿ ನೀತಿಯನ್ನು ಒಂದು ವರ್ಷಗಳ ಕಾಲ ಮುಂದೂಡಿದ್ದ ಇಂಡಿಗೊ, ಹೊಸದಾಗಿ ಮಾರ್ಗಸೂಚಿಯನ್ನು ಅಳವಡಿಸಿಕೊಂಡ ಬಳಿಕ ಸುಮಾರು 2000 ವಿಮಾನಗಳ ಹಾರಾಟದಲ್ಲಿ ಒಮ್ಮೆಲೇ ವ್ಯತ್ಯಯವುಂಟಾಗಿದೆ. ದೇಶೀಯ ವಾಯುಯಾನ ಮಾರುಕಟ್ಟೆಯಲ್ಲಿ ಶೇ.65 ವಿಮಾನಗಳನ್ನು ಹೊಂದಿರುವ ಇಂಡಿಗೊ ಬಿಕ್ಕಟ್ಟು ಇಂಡಿಯಾಕ್ಕೆ ಪೆಟ್ಟುಕೊಟ್ಟಿದೆ. ಈ ಸಮಸ್ಯೆ ಮಂಗಳೂರಿನ ಗಲ್ಫ್ ಉದ್ಯೋಗಾಕಾಂಕ್ಷಿಗಳನ್ನೂ ಬಿಟ್ಟಿಲ್ಲ.
ಮಂಗಳೂರು ವಿಮಾನ ನಿಲ್ದಾಣದಿಂದ ಗರಿಷ್ಠ ಪ್ರಮಾಣದಲ್ಲಿ ಇಂಡಿಗೊ ವಿಮಾನಗಳು ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಈ ಪೈಕಿ ದೈನಂದಿನ ಹಾರಾಟದ ಅಂಕಿ ಅಂಶಗಳು ಬೇರೆ ಬೇರೆಯಿದೆ. ಬೆಂಗಳೂರು, ದಿಲ್ಲಿ, ಮುಂಬೈ, ಪಾಟ್ನಾ, ಹೈದರಾಬಾದ್, ಪುಣೆ, ಜೈಪುರ, ಕೋಲ್ಕತಾ, ವಿಶಾಖಪಟ್ಟಣಂಗೆ ಇಲ್ಲಿಂದ ನೇರ ಅಥವಾ ಕನೆಕ್ಟಿಂಗ್ ವಿಮಾನಗಳಿವೆ. ಆದರೆ ಇಂಡಿಗೊ ಸಂಸ್ಥೆಯ ಆಂತರಿಕ ಎಡವಟ್ಟಿನಿಂದ ಹಾರಾಟದಲ್ಲಿ ವ್ಯತ್ಯಯವುಂಟಾಗಿ ಈ ವಿಮಾನಗಳು ಪೈಲಟ್ ಗಳಿಲ್ಲದೇ ನಿಲ್ದಾಣದಲ್ಲೇ ನಿಂತಿವೆ. ಹಾರಾಡಲು ಚಡಪಡಿಸುತ್ತಿವೆ. ಇದರಿಂದ ಉದ್ಯಮಿಗಳಿಗೆ, ನಿತ್ಯ ದೇಶದ ವಿವಿಧ ಭಾಗಗಳಿಗೆ ಸಂಚರಿಸಿ ನಗರಕ್ಕೆ ವಾಪಾಸ್ಸಾಗುವವರಿಗೆ ತೊಂದರೆಯಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿ.8ರಿಂದ 11ರ ತನಕ ದಿನನಿತ್ಯ 8 ಇಂಡಿಗೊ ವಿಮಾನಗಳ ಯಾನ ರದ್ದುಪಡಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕರಾವಳಿ ಭಾಗದಲ್ಲಿ ಉದ್ಯೋಗ ಅರಸಿಕೊಂಡು ಗಲ್ಫ್ ಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಉದ್ಯೋಗ ದೊರಕಿಸಿಕೊಡುವ ಏಜೆನ್ಸಿಗಳ ಮೂಲಕ ಗಲ್ಫ್ ಗೆ ಹೋಗುವವರಿಗೆ ಈಗೀಗ ಸಿಗುತ್ತಿರುವ ಸಂಬಳವೂ ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಸಂಬಳವಿರುವ ಕೆಲಸಗಳ ಅವಕಾಶಗಳು ಬಂದಾಗ, ಕೊನೇ ಕ್ಷಣದಲ್ಲಿ ಇಂಟರ್ವ್ಯೂವ್ ಮಾಡುವ ಸ್ಥಳವನ್ನು ಬದಲಾಯಿಸಲಾಗಿದೆ. ಮಂಗಳೂರಿನ ಬದಲು ಮುಂಬೈಗೆ ಸಂದರ್ಶನಕ್ಕೆ ಬನ್ನಿ ಎಂದು ಕೇವಲ ಎರಡು ದಿನದ ಸಮಯಾವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಕಷ್ಟ”, ಎಂದು ಗಲ್ಫ್ ಉದ್ಯೋಗಾಕಾಂಕ್ಷಿ ತುಂಬೆಯ ಇಮ್ರಾನ್ ಹೇಳಿದರು.
ಇಂಡಿಗೊ ವಿಮಾನದ ಹಾರಾಟ ಸಮಸ್ಯೆ ಪ್ರಾರಂಭವಾಗಿ ಒಂದು ವಾರವಾಗುತ್ತಾ ಬಂತು. ಕೊನೇ ಕ್ಷಣದಲ್ಲಿ ಉದ್ಯೋಗ ಸಂದರ್ಶನ ಏರ್ಪಡಿಸುವ ಏಜನ್ಸಿಗಳು ಸ್ಥಳ ಬದಲಾವಣೆ ಮಾಡಿದರೆ ನಾವು ಹೋಗುವುದು ಹೇಗೆ? ಈ ಹಂತದಲ್ಲಿ ವಿಮಾನಗಳ ಟಿಕೆಟ್ ದರವೂ ದುಬಾರಿ, ರೈಲು – ಬಸ್ ಟಿಕೆಟ್ ಸಿಗುವುದು ಕಷ್ಟ. ಇದೊಂದು ರೀತಿ ಅತಂತ್ರ ಪರಿಸ್ಥಿತಿ ಎಂದರು ಬೆಳ್ತಂಗಡಿ ನಿವಾಸಿ ಫೈಝಲ್.
ಇಂಡಿಗೊ ವಿಮಾನ ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದಾಗಿ ನಮ್ಮ ಸಂಸ್ಥೆಯ ವ್ಯವಸ್ಥಾಪಕರೊಬ್ಬರು ತುಂಬಾ ಕಷ್ಟ ಪಟ್ಟರು. ಮೂರು ದಿನಗಳ ಹಿಂದೆ ಅವರು ದಿಲ್ಲಿಯಲ್ಲಿ ಉದ್ಯೋಗಾಕಾಂಕ್ಷಿಗಳ ಸಂದರ್ಶನ ಮಾಡಲು ಹಾಜರಾಗಿದ್ದರು. ಮರುದಿನ ಮುಂಬೈನಲ್ಲಿ ಇನ್ನೊಂದು ಸಂದರ್ಶನವನ್ನು ಅವರು ಮಾಡಬೇಕಿತ್ತು. ಏರ್ಪೋರ್ಟ್ ಗೆ ಬಂದರೆ ವಿಮಾನ ರದ್ದಾಗಿತ್ತು. ಕೊನೇ ಕ್ಷಣದಲ್ಲಿ ಅವರು ರೈಲು ಏರಿ ಮುಂಬೈ ತಲುಪಿದರು ಎಂದು ಮಂಗಳೂರಿನ ಸುಹಾನಾ ಟ್ರಾವೆಲ್ಸ್ ನ ಗಾಲಿಯಾನ ಮಾಹಿತಿ ಹಂಚಿಕೊಂಡರು.
ನಮ್ಮ ಸಂಸ್ಥೆ ಏರ್ಪಡಿಸಬೇಕಾಗಿದ್ದ ಸಂದರ್ಶನಗಳನ್ನು ನಾವು ರದ್ದು ಪಡಿಸುವ ಹಾಗಿರಲಿಲ್ಲ. ನಿಗದಿಯಂತೆ ನಾವು ಮಾಡಬೇಕಾಯಿತು. ಆದರೆ ನಿರೀಕ್ಷಿತ ಮಟ್ಟದ ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಲಿಲ್ಲ. ವಿಮಾನ ಸಂಚಾರದ ವ್ಯತ್ಯಯದಿಂದಾಗಿ ನಮಗೆ ಸಮಸ್ಯೆಯಾಯಿತು ಎಂದು ಅವರು ಹೇಳಿದರು.
ಆದರೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಲ್ಲಿ ಕಚೇರಿ ಹೊಂದಿರುವ ಆಸ್ ಮ್ಯಾಕ್ಸ್ ಟ್ರಾವೆಲ್ ಏಜನ್ಸಿಗೆ ಹಾರಾಟ ನಡೆಸದ ಇಂಡಿಗೊ ಉದ್ಯೋಗಾಕಾಂಕ್ಷಿಗಳ ಸಂದರ್ಶನಕ್ಕೆ ಅಡ್ಡಿಪಡಿಸಿದೆ. ಡಿ.9ಕ್ಕೆ ಸಂಸ್ಥೆಯು ಮಂಗಳೂರಿನಲ್ಲಿ ಸಂದರ್ಶನವೊಂದನ್ನು ಏರ್ಪಡಿಸಿತ್ತು. ಆದರೆ ಇಂಡಿಗೊ ವಿಮಾನಗಳ ರದ್ದತಿಯಿಂದ ಸಂದರ್ಶನ ಮಾಡಬೇಕಾದ ಗಲ್ಫ್ ಕಂಪೆನಿಯ ಪ್ರತಿನಿಧಿ ಇಂಡಿಗೊದಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಟಿಕೆಟ್ ರದ್ದಾದ ಕಾರಣ ಅವರೀಗ ಮಂಗಳೂರಿಗೆ ಬರುತ್ತಿಲ್ಲ ಎಂದು ತಿಳಿಸಿದ್ದಾರೆ. ದಾರಿ ಕಾರಣದ ಏಜನ್ಸಿ ಆಯ್ದ ಉದ್ಯೋಗಾಕಾಂಕ್ಷಿಗಳಿಗೆ ಮುಂಬೈಗೆ ಬರುವಂತೆ ಕೊನೆ ಕ್ಷಣದಲ್ಲಿ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಮುಂಬೈಗೆ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ಮಾಹಿತಿ ನೀಡಿದರು.