×
Ad

ಸಿಎಂ ಸಿದ್ದರಾಮಯ್ಯ ಪೋಸ್ಟ್ ನ ತಪ್ಪು ಅನುವಾದ: ಕ್ಷಮೆಯಾಚಿಸಿದ ಮೆಟಾ

Update: 2025-07-18 14:53 IST

ಹೊಸದಿಲ್ಲಿ: ಮೆಟಾ ವೇದಿಕೆಯಲ್ಲಿ ತಮ್ಮ ಪೋಸ್ಟ್ ಅನ್ನು ಸ್ವಯಂಚಾಲಿತ ತಂತ್ರಜ್ಞಾನ ಬಳಸಿ ತಪ್ಪು ಕನ್ನಡ ಅನುವಾದ ಮಾಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ನಲ್ಲಿ ಕಳವಳ ವ್ಯಕ್ತಪಡಿಸಿದ ಬೆನ್ನಿಗೇ, ತಂತ್ರಜ್ಞಾನ ದೈತ್ಯ ಸಂಸ್ಥೆ ಮೆಟಾ, ತನ್ನ ಪ್ರಮಾದಕ್ಕಾಗಿ ಕ್ಷಮೆ ಕೋರಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಾಮಂತ್ರಿ ಸಿದ್ದರಾಮಯ್ಯ, “ಮೆಟಾದ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ನನ್ನ ಪೋಸ್ಟ್ ನ ತಪ್ಪು ಕನ್ನಡ ಅನುವಾದವು ವಾಸ್ತವಗಳನ್ನು ವಿರೂಪಗೊಳಿಸುತ್ತದೆ ಹಾಗೂ ಬಳಕೆದಾರರನ್ನು ತಪ್ಪು ದಾರಿಗೆಳೆಯುತ್ತದೆ” ಎಂದು ಆಕ್ಷೇಪಿಸಿದ್ದರು.

ಈ ಆಕ್ಷೇಪಕ್ಕೆ ತ್ವರಿತವಾಗಿ ಸ್ಪಂದಿಸಿರುವ ಮೆಟಾ ಸಂಸ್ಥೆಯ ವಕ್ತಾರರು, “ಕೆಲ ಕಾಲ ಅಸಮರ್ಪಕ ಕನ್ನಡ ಅನುವಾದಕ್ಕೆ ಕಾರಣವಾಗಿದ್ದ ಈ ಸಮಸ್ಯೆಯನ್ನು ನಾವು ಸರಿಪಡಿಸಿದ್ದೇವೆ. ಹೀಗಾಗಿದ್ದಕ್ಕೆ ನಾವು ಕ್ಷಮೆ ಕೋರುತ್ತೇವೆ” ಎಂದು ವಿಷಾದಿಸಿದ್ದಾರೆ.

“ಅಧಿಕೃತ ಸಂವಹನಗಳನ್ನು ನಿಭಾಯಿಸುವಾಗ, ಸಾಮಾಜಿಕ ಮಾಧ್ಯಮ ವೇದಿಕೆಗಳು ಹೊಣೆಗಾರಿಕೆಯಿಂದ ವರ್ತಿಸಬೇಕು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಅನುವಾದಗಳು ಪದೇ ಪದೇ ತಪ್ಪಾಗಿರುತ್ತವೆ ಎಂಬುದರ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿರಬೇಕು” ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪೋಸ್ಟ್ ನಲ್ಲಿ ಕರೆ ನೀಡಿದ್ದರು.

ಈ ಸಂಬಂಧ ಜುಲೈ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಮೆಟಾ ಸಂಸ್ಥೆಗೆ ಅಧಿಕೃತ ಪತ್ರ ರವಾನಿಸಿದ್ದ ಅವರ ಮಾಧ್ಯಮ ಸಲಹೆಗಾರ ವಿ.ಪ್ರಭಾಕರ್, ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಸ್ವಯಂಚಾಲಿತ ಕನ್ನಡ ಅನುವಾದದಲ್ಲಿ ಕಂಡು ಬಂದಿದ್ದ ದೋಷಗಳ ಕುರಿತು ಕಳವಳ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News