ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟಿಲ್ಲ: ಸಚಿವ ಎಂ.ಬಿ.ಪಾಟೀಲ್

Update: 2026-07-26 18:32 IST

ಬೆಂಗಳೂರು : ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ನಾನೂ ಯಾವುದೇ ಬೇಡಿಕೆ ಇಟ್ಟಿಲ್ಲ. ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ ಎನ್ನಲಾದ ಚರ್ಚೆಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನಿರಾಕರಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಇನ್ನೊ ಎರಡು-ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಸಾಧ್ಯತೆಗಳಿವೆ. ಈ ವೇಳೆ ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ತಾವು ಮನವಿ ಮಾಡಿದ್ದೇನೆ ಎಂದರು.

ಸಚಿವರಾಗುವ ಪೈಪೋಟಿಯಲ್ಲಿ ಯಾರೆಲ್ಲಾ ಇದ್ದಾರೆಂಬುದು ನನಗೆ ಗೊತ್ತಿಲ್ಲ. ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನ ಇರುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ವಿಜಯಪುರ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸಿಗುವುದು ಅಗತ್ಯ ಇದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ರಾಜ್ಯದಲ್ಲಿ ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡುವುದು ಕೇಂದ್ರದ ಹೊಣೆಗಾರಿಕೆ. ಮಾನದಂಡಗಳ ಅನುಸಾರ ಆಗಸ್ಟ್ ತಿಂಗಳ ವರೆಗೂ ಬರ ಪೀಡಿತ ತಾಲೂಕುಗಳನ್ನು ಗುರುತಿಸಲಾಗುವುದಿಲ್ಲ. ಆದರೆ, ಅನಂತರ ನಷ್ಟದ ಅಂದಾಜು ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ನಷ್ಟವನ್ನು ಭರಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಧಾನಿ ಮೋದಿ ನೀಟ್ ಹಗರಣ ಬೆಳಕಿಗೆ ಬಂದ 24 ಗಂಟೆಯ ಒಳಗಾಗಿ ಸಚಿವರ ರಾಜೀನಾಮೆ ಪಡೆಯಬೇಕಿತ್ತು. ಆದರೆ, ಪ್ರತಿಭಟನೆ ತೀವ್ರವಾದ ಬಳಿಕ ಅನಿವಾರ್ಯವಾಗಿ ರಾಜೀನಾಮೆ ಪಡೆದಿದ್ದಾರೆ. ‘ಒಳ್ಳೆಯ ದಿನ ಬರುತ್ತದೆ’ ಎಂದು ನಂಬಿಸಿ ಮಾಡಿದ ವಂಚನೆಗಳಿಗೆ ಜನ ಇನ್ನು ಕಿವಿಗೊಡುವುದಿಲ್ಲ. ಮೋದಿಯ ಯುಗ ಅಂತ್ಯವಾಗುತ್ತಾ ಬರುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಧರ್ಮೇಂದ್ರ ಪ್ರಧಾನ್ ಬಳಿಕ ಎಥೆನಾಲ್ ನೀತಿಯ ಹಗರಣದ ವಿರುದ್ಧ ಹೋರಾಟ ನಡೆಯಲಿದೆ. ಇ-20ಯ ಕುರಿತು ವೈಜ್ಞಾನಿಕ ಪರೀಕ್ಷೆ ನಡೆದಿಲ್ಲ, ಬೇರೆ ಬೇರೆ ದೇಶಗಳಲ್ಲಾದ ನೀತಿಗಳ ಅಧ್ಯಯನ ಮಾಡಿಲ್ಲ. ಬಿಜೆಪಿ ಆಡಳಿತ ಅದ್ವಾನದಿಂದ ಕೂಡಿದೆ ಎಂದು ದೂರಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News