‘ಬರ ಪರಿಸ್ಥಿತಿ’ ರೈತರ ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಸಚಿವ ನರೇಂದ್ರಸ್ವಾಮಿ ಸೂಚನೆ

Update: 2026-08-22 19:04 IST

ಬೆಂಗಳೂರು : ಮಳೆಯ ಅಭಾವದಿಂದಾಗಿ ರಾಜ್ಯದ ರೈತರು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಅಧಿಕಾರಿಗಳು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಸೂಚಿಸಿದ್ದಾರೆ.

ಶನಿವಾರ ನಗರದ ಕೃಷಿ ಭವನದಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ, ಬಿತ್ತನೆ, ಬೆಳೆ ಪರಿಸ್ಥಿತಿ, ನೀರಿನ ಲಭ್ಯತೆ ಹಾಗೂ ಬೆಳೆ ವಿಮೆ ಕುರಿತು ಅಧಿಕಾರಿಗಳ ಜೊತೆ ಸಮಗ್ರವಾಗಿ ಸಮಾಲೋಚನೆ ನಡೆಸಿದ್ದೇನೆ. ಕಡು ಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕಾಗಿರುವುದು ಸರಕಾರ ಮತ್ತು ಇಲಾಖೆಯ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಈಗಿನ ಬರ ಪರಿಸ್ಥಿತಿಯಲ್ಲಿ ಯಾವ ಬೆಳೆಗಳನ್ನು ಬೆಳೆಯುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರಕಾರದಿಂದ ಯಾವ ರೀತಿಯ ನೆರವು ಪಡೆಯಬಹುದು. ಬರ ಇನ್ನಷ್ಟು ತೀವ್ರವಾದರೆ ರೈತರ ಬದುಕನ್ನು ಉಳಿಸುವುದು ಹೇಗೆ ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ ಎಂದು ನರೇಂದ್ರ ಸ್ವಾಮಿ ಹೇಳಿದರು.

ಇಂಥ ಸಂದರ್ಭದಲ್ಲಿ ನಿಮ್ಮ ಅನುಭವವನ್ನು ಬಳಸಿ ರೈತರ ಜೊತೆ ನಿಲ್ಲಬೇಕು. ಅದು ನಮ್ಮೆಲ್ಲರ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ರೈತರು ಮಾತ್ರವಲ್ಲದೆ ಕೃಷಿಯನ್ನೆ ನಂಬಿಕೊಂಡಿರುವ ಕೃಷಿಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಜಾನುವಾರುಗಳ ಸ್ಥಿತಿಗತಿಯನ್ನೂ ಸರಕಾರ ಗಮನಿಸಬೇಕಾಗಿದೆ. ಬೆಳೆ ಇಲ್ಲದ ರೈತನಿಗೆ ಏನು ನೆರವು ನೀಡಬೇಕು, ಮಧ್ಯಂತರ ಪರಿಹಾರ ಹೇಗೆ ಒದಗಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.

ರಸಗೊಬ್ಬರ-ಬೀಜಕ್ಕೆ ಆದ್ಯತೆ: ಬಿತ್ತನೆ, ಬೆಳೆ ಸಾಲ, ಸಾಲಮನ್ನಾ ಸೇರಿದಂತೆ ರೈತರ ಸಂಕಷ್ಟಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಒಣ ಬೇಸಾಯ ಪ್ರದೇಶಗಳ ರೈತರ ಪರಿಸ್ಥಿತಿ ಬಗ್ಗೆ ವಿಶೇಷ ಗಮನ ಹರಿಸಬೇಕು. ಬರದಿಂದಾಗಿ ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಲಭ್ಯತೆಯನ್ನೂ ಖಚಿತಪಡಿಸಬೇಕು. ಬೆಳೆ ಇಲ್ಲದ ರೈತರ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವರಿಗೆ ನೆರವು ನೀಡಲು ಕ್ರಮ ಕೈಗೊಳ್ಳಬೇಕು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವುದು ಸ್ವಾಗತಾರ್ಹ. ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಬೆಳೆ ವಿಮೆ ಪ್ರಮುಖ ರಕ್ಷಣೆಯಾಗಲಿದೆ. ಅಗತ್ಯವಿದ್ದಲ್ಲಿ ರಾಜ್ಯ ಸರಕಾರ ರೈತರ ನೆರವಿಗೆ ಬರಲಿದೆ ಎಂದು ನರೇಂದ್ರ ಸ್ವಾಮಿ ಭರವಸೆ ನೀಡಿದರು.

ನೀರು ಉಳಿಸಿ, ಬೆಳೆ ಹೆಚ್ಚಿಸಿ: ನೀರಿನ ಲಭ್ಯತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ‘ನೀರನ್ನು ಉಳಿಸಿ, ಬೆಳೆಯ ಪ್ರಮಾಣ ಹೆಚ್ಚಿಸುವ’ ‘ಗ್ರೂಪ್ ಫಾರ್ಮಿಂಗ್‌’ ಕೃಷಿ ಪದ್ಧತಿಗೆ ಒತ್ತು ನೀಡಬೇಕಾಗಿದೆ. ಹೆಚ್ಚಿನ ಸಂಖ್ಯೆಯ ರೈತರು ಒಂದೇ ಪ್ರದೇಶದಲ್ಲಿ ಒಟ್ಟಾಗಿ ಒಂದೇ ಬೆಳೆ ಬೆಳೆಯುವ ಮೂಲಕ ಉತ್ಪಾದನೆ, ಮಾರುಕಟ್ಟೆ, ಸಂಗ್ರಹಣೆ ಮತ್ತು ಮಾರಾಟದಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಈ ಕುರಿತು ರೈತರನ್ನು ಮನವೊಲಿಸಿ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದ್ದೇನೆ ಎಂದು ಅವರು ಹೇಳಿದರು.

ನೀರಿನ ಬಳಕೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು, ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಪಡೆಯುವ ಬೆಳೆಗಳನ್ನು ಉತ್ತೇಜಿಸುವುದು ಹಾಗೂ ರೈತರಿಗೆ ಪರ್ಯಾಯ ಬೆಳೆ ಪದ್ಧತಿಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಯೋಜನೆಗಳಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕು. ರೈತರ ಅಗತ್ಯಕ್ಕೆ ಅನುಗುಣವಾಗಿ ವಿನೂತನ ಯೋಜನೆಗಳನ್ನು ರೂಪಿಸಿ ಅವರನ್ನು ತಲುಪಬೇಕು. ಹೊಸ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಕೃಷಿ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಯೋಜನೆ ರೂಪಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯಗಳು ಇಲಾಖೆಗೆ ಮತ್ತು ರೈತರಿಗೆ ಯಾವ ರೀತಿಯಲ್ಲಿ ಸಹಕರಿಸಬಹುದು? ತೀವ್ರ ಬರ ಮತ್ತು ಸಂಕಷ್ಟದ ಸಂದರ್ಭದಲ್ಲಿ ರೈತರನ್ನು ಹೇಗೆ ರಕ್ಷಿಸಬಹುದು ಎನ್ನುವ ಕುರಿತು ಪ್ರತ್ಯೇಕವಾಗಿ ಚರ್ಚೆ ನಡೆಸುವೆ. ತೀವ್ರ ಬರದ ಸಂದರ್ಭದಲ್ಲಿ ಹಾಗೂ ಅತಿ ಸಂಕಷ್ಟದ ಸಮಯದಲ್ಲಿ ರೈತರನ್ನು ಹೇಗೆ ಕಾಪಾಡಬೇಕು? ಪರ್ಯಾಯ ಮತ್ತು ಪರಿಹಾರ ಮಾರ್ಗಗಳು ಏನು ಎನ್ನುವ ಬಗ್ಗೆ ಅಧಿಕಾರಿಗಳು ಆಲೋಚಿಸಬೇಕಿದೆ ಎಂದು ನರೇಂದ್ರ ಸ್ವಾಮಿ ಹೇಳಿದರು.

ಕೇಂದ್ರ ಸಚಿವರ ಭೇಟಿ ಮುನ್ನ ಸಿದ್ಧತೆ: ಕೇಂದ್ರ ಕೃಷಿ ಸಚಿವರು ರಾಜ್ಯಕ್ಕೆ ಭೇಟಿ ನೀಡುವ ಮುನ್ನ ರಾಜ್ಯದ ವಾಸ್ತವ ಪರಿಸ್ಥಿತಿಯ ಕುರಿತು ಅಗತ್ಯ ಮಾಹಿತಿಗಳನ್ನು ಸಿದ್ಧಪಡಿಸಬೇಕು. ಬೆಳೆ ಹಾನಿ, ಮಳೆ ಕೊರತೆ, ಬಿತ್ತನೆ ಪ್ರದೇಶ, ನೀರಿನ ಲಭ್ಯತೆ, ರೈತರು ಮತ್ತು ಕೃಷಿಕಾರ್ಮಿಕರ ಪರಿಸ್ಥಿತಿ ಸೇರಿದಂತೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ನರೇಂದ್ರ ಸ್ವಾಮಿ ಸೂಚಿಸಿದರು.

ತಿಂಗಳ ಬಳಿಕ ಬರ ಘೋಷಣೆ: ರಾಜ್ಯದಲ್ಲಿ ಬರ ಘೋಷಣೆ ಮಾಡುವ ಕುರಿತು ಈಗಲೇ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ತಿಂಗಳ ಅಂತ್ಯದವರೆಗೆ ಮಳೆ ಮತ್ತು ಬೆಳೆ ಪರಿಸ್ಥಿತಿಯನ್ನು ಗಮನಿಸಿ ಬಳಿಕ ಬರ ಘೋಷಣೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ನರೇಂದ್ರಸ್ವಾಮಿ ತಿಳಿಸಿದರು.

ಕಂದಾಯ ಇಲಾಖೆ ಮೂಲಕ ಕೇಂದ್ರ ಸರಕಾರಕ್ಕೆ ಅಗತ್ಯ ದಾಖಲೆಗಳನ್ನು ಕಳುಹಿಸಲಾಗುವುದು. ನಂತರ ಕೇಂದ್ರ ಸರಕಾರ ಬರದ ಅಧ್ಯಯನ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ ನರೇಂದ್ರ ಸ್ವಾಮಿ, ಮೋಡ ಬಿತ್ತನೆ ವಿಚಾರ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ್ದು, ಈ ಕುರಿತು ನೀರಾವರಿ ಇಲಾಖೆ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News