×
Ad

ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರಸ್ತಾಪ : ತನಿಖಾ ವರದಿ ಬಿಡುಗಡೆಗೊಳಿಸಲು ಬಿಜೆಪಿ ಒತ್ತಾಯ

ಎಸ್ಐಟಿ ತನಿಖೆಯ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ : ಡಾ.ಜಿ.ಪರಮೇಶ್ವರ್

Update: 2025-08-12 14:10 IST

ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ಅನಾಮಿಕನ ಹೇಳಿಕೆ ಆಧಾರಿಸಿ ನಡೆಸುತ್ತಿರುವ ಎಸ್ಐಟಿ ತನಿಖೆಯ ವರದಿಯನ್ನು ಬಿಡುಗಡೆಗೊಳಿಸಬೇಕೆನ್ನುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಮಧ್ಯಂತರ ವರದಿ ನೀಡಲು ಸರಕಾರ ನಿರಾಕರಿಸಿದೆ.

ಶೂನ್ಯ ವೇಳೆ ಕಲಾಪದಲ್ಲಿ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಪ್ರಸ್ತಾಪಿಸಿ, ಧರ್ಮ ಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ್ದ. ಆತನ ದೂರಿನನ್ವಯ ಸರಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ಆದರೆ, ತನಿಖೆ ಏನಾಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಮತ್ತೊಂದೆಡೆ, ಧರ್ಮಸ್ಥಳ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ಧಾರ್ಮಿಕ ಭಾವನೆಗಳನ್ನು ಗುರಿಯಾಗಿಸಿಕೊಂಡು ಘಾಸಿಗೊಳಿಸಲಾಗುತ್ತಿದೆ. ಇಂತಹ ಚಟುವಟಿಕೆಗಳನ್ನು ನಡೆಸುತ್ತಿರುವವರನ್ನು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸುರೇಶ್ ಕುಮಾರ್, ಅರಗ ಜ್ಞಾನೇಂದ್ರ ಸೇರಿದಂತೆ ಇತರೆ ಬಿಜೆಪಿ ಸದಸ್ಯರು, ಎಸ್ಐಟಿ ಯಾವ ರೀತಿ ತನಿಖೆ ನಡೆಸುತ್ತಿದೆ. ಈಗಾಗಲೇ ಯಾವ ಸಾಕ್ಷ್ಯ, ಮಾಹಿಲೆ ಕಲೆಹಾಕಿದೆ ಎನ್ನುವುದು ಸಾರ್ವಜನಿಕಗೊಳಿಸಬೇಕು. ಇಲ್ಲಿಯವರೆಗೆ ಊಹಾಪೋಹಗಳನ್ನು ಹುಟ್ಟುಹಾಕಿ ಧಾರ್ಮಿಕ ಭಾವನೆಗಳನ್ನು ಹಾಳು ಮಾಡಲಾಗುತ್ತಿದೆ. ಜೊತೆಗೆ, ಆ ಅನಾಮಿಕ ಯಾರು ಎಲ್ಲಿಂದ ಬಂದ ಎನ್ನುವುದು ಗೊತ್ತಾಗಬೇಕು. ಒಂದು ವೇಳೆ ತನಿಖೆ ಪೂರ್ಣಗೊಂಡ ಬಳಿಕ ಆತ ಮಾನಸಿಕ ರೋಗಿ ಎಂದು ಹೇಳಿ ಬಿಟ್ಟು ಕಳುಹಿಸಿದರೆ ಯಾರು ಜವಾಬ್ದಾರಿ ಎಂದು ಸರಕಾರಕ್ಕೆ ಪ್ರಶ್ನಿಸಿದರು.

ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರಿಸಿ, ಈ ಪ್ರಕರಣ ಗಂಭೀರ ಇರುವ ಕಾರಣ ಸತ್ಯಾ ಸತ್ಯಾತೆ ಹೊರಬೀಳಲು ಎಸ್ ಐಟಿ ತನಿಖೆ ನಡೆಸಲಾಗುತ್ತಿದೆ. ಆದರೆ, ತನಿಖೆಯ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಚಿವರ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ರಾಜ್ಯ ಸರಕಾರ ಎಂಟು ದಿನಗಳ ತನಿಖೆಯ ಮಧ್ಯಂತರ ವರದಿಯನ್ನು ಬಿಡುಗಡೆಗೊಳಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ, ಮಧ್ಯಂತರ ವರದಿಯೂ ಸಾಧ್ಯವಿಲ್ಲ ಎಂದು ಪರಮೇಶ್ವರ್ ಉತ್ತರಿಸಿದರು.

ಆನಂತರ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯೂ ಆದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾವು ಎಡ-ಬಲ ಎನ್ನುವುದು ಇಲ್ಲ. ನಮಗೆ ಎಲ್ಲರೂ ಬೇಕು. ಈ ಪ್ರಕರಣದಲ್ಲಿ ಯಾರನ್ನು ಸಿಲುಕಿಸುವ ಉದ್ದೇಶ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News