ಮುಂಗಾರು ಅಧಿವೇಶನ | ಉಭಯ ಸದನಗಳಲ್ಲಿ ಪ್ರತಿಧ್ವನಿಸಿದ ಸಚಿವ ಕೆ.ಎನ್.ರಾಜಣ್ಣ ವಜಾ ವಿಚಾರ
‘ಸಂಪುಟದಿಂದ ವಜಾಗೊಳಿಸಿದ್ದೇಕೆ ಕಾರಣ ಕೊಡಿ’ : ಪ್ರತಿಪಕ್ಷ ಸದಸ್ಯರಿಂದ ಪಟ್ಟು
ಬೆಂಗಳೂರು, ಆ.12: ‘ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಿರುವ ಕ್ರಮಕ್ಕೆ ಸೂಕ್ತ ಕಾರಣ ನೀಡಬೇಕು’ ಎಂದು ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮಂಗಳವಾರ ವಿಧಾನಸಭೆಯ ಕಲಾಪ ಆರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಕೆ.ಎನ್.ರಾಜಣ್ಣ ಪದಚ್ಯುತಿ ಬಗ್ಗೆ ಕೇಳಿದಾಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ‘ಮಾಧ್ಯಮಗಳಲ್ಲಿ ಬರುವುದನ್ನೆಲ್ಲಾ ಸದನದಲ್ಲಿ ಚರ್ಚೆ ಮಾಡಲಾಗುವುದಿಲ್ಲ. ಈಗಾಗಲೇ ರಾಜ್ಯಪಾಲರು ನಿನ್ನೆ ಮಧ್ಯಾಹ್ನ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸಂಪುಟದಿಂದ ರಾಜಣ್ಣರನ್ನು ವಜಾಗೊಳಿಸಿರುವುದಾಗಿ ಪ್ರಕಟಿಸಿದ್ದಾರೆ ಎಂದರು.
ಬಳಿಕ ಪ್ರತಿಕ್ರಿಯಿಸಿದ ಅಶೋಕ್, ‘ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಸಚಿವರನ್ನು ಸಂಪುಟದಿಂದ ಕೈಬಿಟ್ಟಿರುವ ಬಗ್ಗೆ ನಾವು ಮಾಧ್ಯಮಗಳಿಂದ ತಿಳಿದುಕೊಳ್ಳಬೇಕೆ? ಸದನಕ್ಕೆ ಮಾಹಿತಿ ನೀಡುವುದು ಸರಕಾರದ ಜವಾಬ್ದಾರಿ ಅಲ್ಲವೇ?, ಪ್ರತಿಪಕ್ಷಗಳನ್ನು ಕತ್ತಲಿನಲ್ಲಿಡಲಾಗಿದೆ. ತಕ್ಷಣವೇ ಉತ್ತರ ನೀಡಬೇಕು. ಯಾವ ಕಾರಣಕ್ಕೆ ರಾಜಣ್ಣರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಬಹಿರಂಗೊಳಿಸಬೇಕು ಎಂದು ಪ್ರಶ್ನಿಸಿದರು.
ಆಗ ಸ್ಪೀಕರ್ ಯು.ಟಿ.ಖಾದರ್ ಮಧ್ಯಪ್ರವೇಶಿಸಿ, ‘ಇದು ಆಡಳಿತ ಪಕ್ಷದ ಆಂತರಿಕ ವಿಚಾರ, ಇಲ್ಲಿ ಚರ್ಚೆ ಮಾಡುವುದು ಅನಗತ್ಯ ಎಂದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ಸದಸ್ಯರಾದ ಸುರೇಶ್‍ಕುಮಾರ್, ಸುನೀಲ್ ಕುಮಾರ್ ಸೇರಿದಂತೆ ಹಲವರು, ‘ಇದು ಸರಕಾರಕ್ಕೆ ಸಂಬಂಧಪಟ್ಟ ವಿಚಾರ, ಪಕ್ಷದ ಆಂತರಿಕ ವಿಚಾರವಲ್ಲ’ ಎಂದರು.
ಬಳಿಕ ಆರ್.ಅಶೋಕ್ ಮುಂದುವರೆದು, ‘ರಾಜಣ್ಣ ಅವರ ಬಗ್ಗೆ ಸರಕಾರ ಮೌನವಾಗಿದೆ. ಜತೆಗೆ, ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಅದನ್ನು ಅಂಗೀಕರಿಸಿಲ್ಲ, ಬದಲಾಗಿ ಸಂಪುಟದಿಂದ ವಜಾಗೊಳಿಸಲಾಗಿದೆ. ಸತ್ಯ ಹೇಳಿದ್ದಕ್ಕೆ ಅವರನ್ನು ಬಲಿಪಶು ಮಾಡಲಾಗಿದೆಯೇ?’ ಎಂದು ಪ್ರಶ್ನಿಸಿದರು.
ಇದೇ ವೇಳೆ ಬಿ.ವೈ.ವಿಜಯೇಂದ್ರ ಮಾತನಾಡಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‍ಗಾಂಧಿ ಅವರು ಬೆಂಗಳೂರಿಗೆ ಬಂದು ಮತಗಳ್ಳತನವಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ಇದು ಆಂತರಿಕ ವಿಚಾರ ಅಲ್ಲ, ಸದನಕ್ಕೆ ವಿಷಯ ತಿಳಿಯಬೇಕು ಎಂದು ಆಗ್ರಹಿಸಿದರು.
ಸುರೇಶ್ ಕುಮಾರ್ ಮಾತನಾಡಿ, ಸದನ ನಡೆಯುವಾಗ ಇಂತಹ ಮಹತ್ವದ ಘಟನೆ ಬಗ್ಗೆ ನಾವು ಮಾಧ್ಯಮದಿಂದ ವಿಷಯ ತಿಳಿದುಕೊಳ್ಳುವುದು ಸಮಂಜಸವಲ್ಲ. ಸರಕಾರ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು. ನಂತರ, ವಿಪಕ್ಷಗಳ ಸದಸ್ಯರು ಎದ್ದು ನಿಂತು ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಸ್ಪೀಕರ್ ಸರಕಾರದ ಪರವಾಗಿ ಉತ್ತರ ನೀಡುವಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ್‍ಗೆ ಸೂಚನೆ ನೀಡಿದರು.
ಪ್ರಶ್ನೋತ್ತರ ಕಲಾಪದ ಪೂರ್ಣಗೊಂಡ ಬಳಿಕ ಅಧಿಸೂಚನೆ ಮಂಡಿಸಿದ ಸಚಿವ ಎಚ್.ಕೆ.ಪಾಟೀಲ್, ‘ಈ ರೀತಿಯ ಪ್ರಕರಣದಲ್ಲಿ ಸಂಪುಟದಿಂದ ಹೊರಹೊದವರ ಖುದ್ದಾಗಿ ಸದನದಲ್ಲಿ ಹೇಳಿಕೆ ನೀಡಲು ಅವಕಾಶವಿದ್ದು, ಇದಕ್ಕೆ ಸ್ಪೀಕರ್ ಸೂಚನೆ ಬೇಕಾಗಿದೆ. ಇಲ್ಲದಿದ್ದಲ್ಲಿ ಯಾವ ಪ್ರಕರಣದಲ್ಲೂ ಚರ್ಚೆಗಳಾಗಿಲ್ಲ’ ಎಂದು ಉಲ್ಲೇಖಿಸಿದರು.
ಈ ಹಿಂದೆ 10 ರಿಂದ 12 ಮಂದಿ ಸದಸ್ಯರು ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೆಲವರನ್ನು ಸಂಪುಟದಿಂದ ಕೈಬಿಡಲಾಗಿದೆ, ತೆಗೆದು ಹಾಕಿದ್ದಾರೆ. ಆದರೂ ಇಂತಹ ವಿಚಾರಗಳು ಎಲ್ಲೂ ಚರ್ಚೆಯಾಗಿಲ್ಲ. ಅದರಲ್ಲೂ ಇತ್ತೀಚಿಗೆ ರಾಜ್ಯಸಭೆ ಅಧ್ಯಕ್ಷರೂ ಆದ ಉಪರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ ನೀಡಿದ್ದು, ಅವರ ಬಗ್ಗೆಯೂ ಚರ್ಚೆಯಾಗಿಲ್ಲ ಎಂದು ತಿರುಗೇಟು ನೀಡಿದರು.
ಇದನ್ನು ಒಪ್ಪದ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹಾಗೂ ಆರಗ ಜ್ಞಾನೇಂದ್ರ ಸಚಿವರ ಜೊತೆ ವಾಗ್ವಾದ ನಡೆಸಿದರು. ಇದಕ್ಕೆ ಕಿವಿಗೊಡದೆ ಸ್ಪೀಕರ್ ಯು.ಟಿ.ಖಾದರ್, ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆ ಪ್ರಸ್ತಾವನೆಯನ್ನು ಕೈಗೆತ್ತಿಕೊಂಡರು.
ಡಿಕೆಶಿ ಕೆಮ್ಮಿದರೆ ಅಪಾಯ ಕಾದಿದೆ: ಸುನೀಲ್ ಕುಮಾರ್
‘ನೀವು ಕೆಮ್ಮಿದರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಾಲೆಳೆದ ಪ್ರಸಂಗ ನಡೆಯಿತು.
ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಉತ್ತರ ಕೊಡಲು ಮುಂದಾದ ಡಿ.ಕೆ. ಶಿವಕುಮಾರ್ ಕೆಮ್ಮಿದರು. ಈ ವೇಳೆ ಎದ್ದು ನಿಂತ ಆರಗ ಜ್ಞಾನೇಂದ್ರ ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟರು. ಆರಗ ಮಾತಿಗೆ ನಾವು ‘ಆರ್‍ಕೆ' ಎಲ್ಲ ಕೊಡಲ್ಲ ಎಂದು ಶಿವಕುಮಾರ್ ಉತ್ತರಿಸಿದರು.
ಇದಕ್ಕೆ ‘ನಾನು ಹೇಳಿದ್ದು ಆರ್‍ಕೆ ಅಲ್ಲ, ಆರೈಕೆ’ ಎಂದು ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು. ‘ಓಹೋ ಹೌದಾ, ಎಂದು ಶಿವಕುಮಾರ್ ಹೇಳಿದಾಗ, ಸುನೀಲ್ ಕುಮಾರ್ ಮಧ್ಯಪ್ರವೇಶಿಸಿ ‘ನೀವು ಕೆಮ್ಮಿದರೆ ಯಾರು ಯಾರಿಗೆ ಅಪಾಯ ಕಾದಿದೆಯೋ’ ಎಂದು ಕಿಚಾಯಿಸಿದರು. ಸುನೀಲ್ ಕುಮಾರ್ ಮಾತಿಗೆ ಸದನದಲ್ಲಿ ಸದಸ್ಯರು ನಗುವ ಮೂಲಕ ಪ್ರತಿಕ್ರಿಯಿಸಿದರು.
ಮೇಲ್ಮನೆಯಲ್ಲೂ ಗದ್ದಲ, ಮುಂದೂಡಿಕೆ: ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ವಿಚಾರ ಮೇಲ್ಮನೆಯಲ್ಲೂ ಗದ್ದಲಕ್ಕೆ ಕಾರಣವಾಗಿದ್ದು ಮಾತ್ರವಲ್ಲದೆ, 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ತಿನ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ಕೆ.ಎನ್.ರಾಜಣ್ಣರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಹಿ ಪತ್ರವನ್ನು ಓದುತ್ತೇನೆ ಎಂದರು. ಆಗ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಕ್ಷೇಪಿಸಿದರು.
ಆಗ ಸಭಾಪತಿ ಹೊರಟ್ಟಿ, ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಮಾತನಾಡಿ ಎಂದು ಸೂಚಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಇದು ತುರ್ತು ವಿಷಯವಾಗಿದ್ದು, ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದೇಕೆ? ನಮಗೆ ಉತ್ತರಬೇಕೆಂದರು. ಇದಕ್ಕೆ ವಿಪಕ್ಷ ಸದಸ್ಯರು ಧ್ವನಿಗೂಡಿಸಿದರು.
ವಿಪಕ್ಷ ಸದಸ್ಯರ ನಡೆಯನ್ನು ವಿರೋಧಿಸಿದ ಆಡಳಿತ ಪಕ್ಷದ ಸದಸ್ಯರು, ಕೆ.ಎನ್.ರಾಜಣ್ಣ ಅವರ ಮೇಲೆ ಯಾವತ್ತಿನಿಂದ ಪ್ರೀತಿ ಬಂತು ಎಂದು ವ್ಯಂಗ್ಯವಾಡಿದರು. ಈ ಹಂತದಲ್ಲಿ ಸದನದಲ್ಲಿ ಗದ್ದಲ, ಗಲಾಟೆ ಹಿನ್ನೆಲೆ ಸಭಾಪತಿ ಹೊರಟ್ಟಿ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಬಳಿಕ ಕಲಾಪ ಪ್ರಾರಂಭವಾದ ಮೇಲೆ ಮತ್ತೆ ವಿಷಯ ಪ್ರಸ್ತಾಪ ಮಾಡುವುದಕ್ಕೆ ಛಲವಾದಿ ನಾರಾಯಣಸ್ವಾಮಿ ಮುಂದಾದರು. ಆಗ ಸಭಾಪತಿಗಳು ಪ್ರಶ್ನೋತ್ತರ ಮುಗಿದ ಮೇಲೆ ಸಭಾ ನಾಯಕರಿಂದ ಉತ್ತರ ಕೊಡಿಸುವುದಾಗಿ ತಿಳಿಸಿದರು.