ಮುಂಗಾರು ಅಧಿವೇಶನ |ಕಾಲ್ತುಳಿತ ದುರಂತ; ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯ
ಬೆಂಗಳೂರು, ಆ.12: ಆರ್‌ಸಿಬಿ ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡರು. ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು. ಅಲ್ಲದೇ, ಈ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಆರ್ ಸಿಬಿ ತಂಡದವರು ಭಾರತಕ್ಕಾಗಿ ಆಡಿದ್ರಾ? ಕರ್ನಾಟಕದ ಪರವಾಗಿ ಆಡಿದ್ರಾ? ಆರ್ ಸಿಬಿ ತಂಡದಲ್ಲಿ ಕನ್ನಡಿಗರು ಎಷ್ಟು ಜನ ಇದ್ದರು? ಅವರು ಕ್ರಿಕೆಟ್ ಆಡಿದ್ದು ಹಣಕ್ಕಾಗಿ. ಅವರನ್ನು ಸ್ವಾಗತಿಸಲು ಉಪ ಮುಖ್ಯಮಂತ್ರಿ ರಾಯಲ್ ಚಾಲೆಂಜ್ ವಿಸ್ಕಿಯ ಬಾವುಟ ಹಿಡಿದುಕೊಂಡು ಮೆರವಣಿಗೆ ಹೋಗಿದ್ದು ಸರಿಯೇ? ಎಂದು ಪ್ರಶ್ನಿಸಿದರು.
ವಿದೇಶದ ಮದ್ಯದ ಕಂಪನಿ ಒಡೆತನದ ತಂಡಕ್ಕೆ ರಾಜ್ಯ ಸರಕಾರದ ಪರವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡುವ ಅವಶ್ಯಕತೆ ಏನಿತ್ತು? ಆರ್‌ಸಿಬಿ ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಾಗ ತಡರಾತ್ರಿವರೆಗೆ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಮಾರನೆ ದಿನವೆ ತರಾತುರಿಯಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದ್ದು ಏಕೆ? ಯಾರ ಒತ್ತಡಕ್ಕೆ ಮಣಿದು ಆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ಅಶೋಕ್ ಕೇಳಿದರು.
ಸ್ವತಃ ಮುಖ್ಯಮಂತ್ರಿ ಟ್ವೀಟ್ ಮಾಡಿ ಜನರನ್ನು ವಿಧಾನಸೌಧದ ಬಳಿ ಬರುವಂತೆ ಆಹ್ವಾನ ನೀಡಿದರು. ಕ್ರಿಕೆಟ್ ಆಟಗಾರರನ್ನು ನೋಡಲು, ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಎಷ್ಟು ಜನ ಬರಬಹುದು ಎಂದು ಗುಪ್ತಚರ ಇಲಾಖೆಗೆ ಗೊತ್ತಿರಲಿಲ್ಲವೇ? ರಾಜ್ಯದಲ್ಲಿ ಗುಪ್ತಚರ ಇಲಾಖೆ ಬದುಕಿದೆಯೋ?, ಸತ್ತಿದೆಯೋ ಅಥವಾ ಕೋಮದಲ್ಲಿದೆಯಾ? ಎಂದು ಅವರು ಕಿಡಿಗಾರಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಉಂಟಾಗಿ ಜನ ಸತ್ತಿರುವ ವಿಚಾರ ಮುಖ್ಯಮಂತ್ರಿಗೆ ಎರಡು ಗಂಟೆಗಳ ಬಳಿಕ ಗೊತ್ತಾಗುತ್ತದೆ ಎಂದರೆ ಏನು ಹೇಳಬೇಕು. ವಿಧಾನಸೌಧದ ಬಳಿ ಕಾರ್ಯಕ್ರಮ ಆರಂಭವಾಗುವ ಮುಂಚೆಯೆ ಕಾಲ್ತುಳಿತ ಉಂಟಾಗಿ ಸಾವು ಸಂಭವಿಸಿತ್ತು. ಆದರೂ, ಕಾರ್ಯಕ್ರಮ ರದ್ದು ಮಾಡದಿದ್ದು ಏಕೆ? ಎಂದು ಅಶೋಕ್ ಕೇಳಿದರು.
ಕ್ರೀಡಾಂಗಣದ ಬಳಿ ಅಂದು ಭದ್ರತೆಗಾಗಿ 1800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು ಎಂದು ಸರಕಾರ ಹೇಳಿಕೊಂಡಿದೆ. ಆದರೆ, ನ್ಯಾ.ಕುನ್ಹಾ ಆಯೋಗದ ವರದಿಯಲ್ಲಿ ಕೇವಲ 515 ಮಂದಿಯನ್ನು ಮಾತ್ರ ಕ್ರೀಡಾಂಗಣದ ಬಳಿ ನಿಯೋಜಿಸಿದ್ದನ್ನು ತಿಳಿಸಲಾಗಿದೆ. ಅದರಲ್ಲೂ ಕೇವಲ 197 ಜನ ಬಂದೋಬಸ್ತ್ ರಿಜಿಸ್ಟ್ರಾರ್‍ನಲ್ಲಿ ಸಹಿ ಮಾಡಿದ್ದಾರೆ ಎಂದು ಅಶೋಕ್ ಉಲ್ಲೇಖಿಸಿದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕೇವಲ 25-30 ಮಂದಿ ಆಸೀನರಾಗುವಂತೆ ವೇದಿಕೆ ನಿರ್ಮಾಣಕ್ಕೆ ಸೂಚಿಸಲಾಗಿತ್ತು. ಆದರೆ, ಅಲ್ಲಿ ಸುಮಾರು 300 ಮಂದಿ ಇದ್ದರು. ಕ್ರಿಕೆಟ್ ಆಟಗಾರರು ಆಗಮಿಸುವುದಕ್ಕೆ ಮುಂಚೆ, ರಾಜ್ಯಪಾಲ, ಮುಖ್ಯಮಂತ್ರಿಯನ್ನು ಅಲ್ಲಿಗೆ ಬರುವಂತೆ ಮಾಡಿ ಶಿಷ್ಠಾಚಾರವನ್ನು ಸಂಪೂರ್ಣ ಉಲ್ಲಂಘಿಸಲಾಗಿತ್ತು. ಇದು ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗೆ ಅವಮಾನ ಮಾಡಿದಂತೆ ಎಂದು ಅಶೋಕ್ ಹೇಳಿದರು.
ಕ್ರೀಡಾಂಗಣದ ಎಲ್ಲ ಬಾಗಿಲುಗಳನ್ನು ಮಧ್ಯಾಹ್ನವೇ ತೆರೆದಿಟ್ಟಿದ್ದರೆ ಅಲ್ಲಿ ನೂಕುನುಗ್ಗಲು ಆಗುತ್ತಿರಲಿಲ್ಲ. ಲಾಠಿಚಾರ್ಜ್ ಮಾಡಿದ್ದರಿಂದ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದರಿಂದ ಕಾಲ್ತುಳಿತ ಸಂಭವಿಸಿತು. ಜನ ನಿರೀಕ್ಷೆಗೂ ಮೀರಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದರೂ ವಿಧಾನಸೌಧದ ಮೆಟ್ಟಿಲುಗಳ ಮೇಲಿನ ಕಾರ್ಯಕ್ರಮ ಮುಗಿಯುವವರೆಗೆ ಕ್ರೀಡಾಂಗಣದ ಗೇಟ್‍ಗಳನ್ನು ತೆರೆಯದಂತೆ ವಾಕಿಟಾಕಿಯಲ್ಲಿ ಡಿಸಿಪಿಯೊಬ್ಬರೂ ಸೂಚನೆ ನೀಡುತ್ತಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಾ? ಎಂದು ಅವರು ತಿಳಿಸಿದರು.
ಸದನ ಸಮಿತಿ ರಚನೆ ಮಾಡಿ: ‘ಕಪ್ಪು ನಮ್ದು, ತಪ್ಪು ನಮ್ಮದ್ದಲ್ಲ’ ಎಂಬ ಧೋರಣೆ ಬಿಟ್ಟು, ಈ ಸರಕಾರಕ್ಕೆ ಹೃದಯ, ಸಂವೇದನೆ ಇದ್ದರೆ ಮೃತರ ಕುಟುಂಬಗಳ ಬಳಿ ಕ್ಷಮೆ ಯಾಚಿಸಬೇಕು. ಅಲ್ಲದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ನಿಯಮಾವಳಿಗಳನ್ನು ರೂಪಿಸಲು ಸದನ ಸಮಿತಿಯನ್ನು ರಚನೆ ಮಾಡಬೇಕು. ಇದು ಕೇವಲ ನಮ್ಮ ರಾಜ್ಯಕ್ಕೆ ಅಲ್ಲ, ಇಡೀ ದೇಶಕ್ಕೆ ಮಾದರಿಯಾಗಬೇಕು ಎಂದು ಅಶೋಕ್ ಹೇಳಿದರು.
ಟ್ವೀಟ್ ಮಾಡಿದ್ದು ಬಿಜೆಪಿಯಲ್ಲವೇ?: ‘ಆರ್‌ಸಿಬಿ ವಿಜಯೋತ್ಸವದ ವೇಳೆ ತೆರೆದ ವಾಹನದಲ್ಲಿ ಮೆರವಣಿಗೆಗೆ ಅವಕಾಶ ನೀಡದ ಗೃಹ ಸಚಿವ ನಡೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದು ನಿಮ್ಮದೇ ಪಕ್ಷವಲ್ಲವೇ?. ಅದನ್ನು ಯಾಕೆ ಹಾಗೇ ಬಿಡುತ್ತೀರಿ? ಹಲವು ವರ್ಷಗಳ ಅಭಿಮಾನಿಗಳ ಕನಸನ್ನು ಆರ್‌ಸಿಬಿ ಈ ವರ್ಷ ನನಸು ಮಾಡಿದೆ. ಆದರೆ ತೆರೆದ ಬಸ್‍ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಡಾ.ಪರಮೇಶ್ವರ್ ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಸಾಬೀತುಪಡಿಸಿದ್ದಾರೆ. ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೇಶ್ವರ್’ ಎಂದು ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿತ್ತು. ಆ ಬಗ್ಗೆಯೂ ನೀವು ಹೇಳಬೇಕಲ್ಲವೇ?’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಆಸ್ಥಾನ ನ್ಯಾಯಾಧೀಶರು: ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಹಾಗೂ ನ್ಯಾ.ಮೈಕಲ್ ಡಿ.ಕುನ್ಹಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಗೆ ಆಸ್ಥಾನ ನ್ಯಾಯಾಧೀಶರಂತೆ. ಯಾವುದೆ ವರದಿ ಪಡೆಯಬೇಕಾದರೂ ಮುಖ್ಯಮಂತ್ರಿ ಇವರಿಬ್ಬರನ್ನೆ ಆಯ್ಕೆ ಮಾಡುತ್ತಾರೆ. ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಸರಕಾರದಿಂದ ಆಗಿರುವ ಲೋಪಗಳ ಮಾಹಿತಿಯೂ ನ್ಯಾ.ಕುನ್ಹಾ ವರದಿಯಿಂದಲೆ ಸಿಕ್ಕಿದೆ.
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ