‘ಹಾಸನ ಜಿಲ್ಲೆ ಹೃದಯಾಘಾತ ಪ್ರಕರಣಗಳ ಹೆಚ್ಚಳ’: ವಿಧಾನಸಭೆಯಲ್ಲಿ ಪ್ರತಿಧ್ವನಿ
ಬೆಂಗಳೂರು, ಆ. 14: ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿದ್ದ ಹಠಾತ್ ಹೃದಯಾಘಾತದ ಸಾವು ಪ್ರಕರಣಗಳು ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿತು. ಈ ಸಾವು ಪ್ರಕರಣಗಳ ತಡೆಗಟ್ಟಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‍ನ ಹಿರಿಯ ಸದಸ್ಯ ಎಚ್.ಡಿ.ರೇವಣ್ಣ ಪರವಾಗಿ ಜೆಡಿಎಸ್ ಸದಸ್ಯ ಎ.ಮಂಜು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಾಸನ ಜಿಲ್ಲೆ ಹೃದಯಘಾತದಿಂದ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ರವೀಂದ್ರನಾಥ್ ನೇತೃತ್ವದ ಸಮಿತಿ ವರದಿ ಪಡೆಯಲಾಗಿದೆ.
‘ಸದರಿ ವರದಿಯ ಪ್ರಕಾರ ಹೃದಯಾಘಾತ ಪ್ರಕರಣಗಳಲ್ಲಿ ಶೇ.75ಕ್ಕಿಂತ ಹೆಚ್ಚು ಜನರು ಒಂದಕ್ಕಿಂತ ಹೆಚ್ಚು ಹೃದಯದ ಅಪಾಯಕಾರಿ ಅಂಶ ಹೊಂದಿರುತ್ತಾರೆ. ಅದರಲ್ಲಿ ಮುಖ್ಯವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗದೆ ಇರುವುದು, (ಜೀವನ ಶೈಲಿ ಬದಲಾವಣೆ) ಅನಾರೋಗ್ಯಕರ ಆಹಾರ ಪದ್ದತಿ, ಮಾನಸಿಕ ಒತ್ತಡ, ಬೊಜ್ಜುತನ, ಮದ್ಯಪಾನ, ಮಧುಮೇಹ, ಧೂಮಪಾನ, ಅಧಿಕ ರಕ್ತದೊತ್ತಡ, ಹೃದ್ರೋಗದ ಕುಟುಂಬದ ಹಿನ್ನೆಲೆ ಹೊಂದಿರುತ್ತಾರೆ ಎಂದರು.
ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಪೈಕಿ ಬಹುತೇಕರು ಕ್ಯಾಬ್ ಚಾಲಕರಾಗಿದ್ದಾರೆ. ಹೀಗಾಗಿ ಚಾಲಕರ ಸಂಘಟನೆಯೊಂದಿಗೆ ಚರ್ಚಿಸಿ ನಿಯಮಿತ ಪ್ರತ್ಯೇಕ ಪರೀಕ್ಷೆಗೆ ಕ್ರಮ ವಹಿಸಲಾಗಿದೆ. ಅಲ್ಲದೆ, ಹೃದಯಾಘಾತ ತಡೆಗಟ್ಟಲು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಲು ಸಲಹೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಹೃದಯಾಘಾತ ಪ್ರಕರಣಗಳ ಹಿನ್ನೆಲೆಯಲ್ಲಿ ನಾನೂ ಹಾಸನಕ್ಕೆ ಭೇಟಿ ನೀಡಿದ್ದೆ. 75ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ತಜ್ಞರ ವರದಿಯಲ್ಲಿ ಹಾಸನ ಜಿಲ್ಲೆ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಹೇಳಿದೆ. ಹೀಗಾಗಿ ಸರಕಾರ ಹೃದ್ರೋಗ ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಕೋರಿದರು.
ಇದೇ ವಿಚಾರಕ್ಕೆ ಮಾತನಾಡಿದ ಬಿಜೆಪಿ ಸದಸ್ಯ ಸುರೇಶ್‍ಕುಮಾರ್, ಚಿಕ್ಕಮಕ್ಕಳಿಗೆ ಹೃದಯಾಘಾತ ಆಗುತ್ತಿರುವುದು ಆತಂಕಕಾರಿ. ಶಾಲಾ ಹಂತದಲ್ಲಿ ಮಕ್ಕಳಿಗೆ ನಿಗದಿತ ತಪಾಸಣೆ ನಡೆಸಿ, ಪ್ರಾಥಮಿಕ ಚಿಕಿತ್ಸೆಯ ತರಬೇತಿ ನೀಡುವ ಮೂಲಕ ಸಂಭವನೀಯ ಹೃದಯಾಘಾತ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.