ಸದನದಲ್ಲಿ ‘ಏಯ್ ಮಿಸ್ಟರ್, ನಿನ್ನ ಹೆಸರೇನು..!’ ಎಂದು ಪ್ರಶ್ನಿಸಿದ ಡಿಸಿಎಂ ಡಿಕೆಶಿ
‘ನನ್ನ ಹೆಸರನ್ನು ನೀವು ಮರೆತು ಹೋಗಿರುವುದಕ್ಕೆ ಧನ್ಯವಾದಗಳುʼ ಎಂದ ಮುನಿರತ್ನ
ಮುನಿರತ್ನ/ಡಿ.ಕೆ.ಶಿವಕುಮಾರ್
ಬೆಂಗಳೂರು, ಆ. 19 : ‘ಏಯ್..! ಮಿಸ್ಟರ್ ನಿನ್ನ ಹೆಸರೇನು’ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಪ್ರಶ್ನಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಳೇ ಪ್ರಕರಣಗಳ ಕುರಿತು ಪ್ರಸ್ತಾಪ ಮಾಡಿ ತಿರುಗೇಟು ನೀಡಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಮಂಗಳವಾರ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಡಿ.ಕೆ.ಶಿವಕುಮಾರ್, ‘ಬೆಂಗಳೂರಿನ ಶಾಸಕರಿಗೆ ಬೇಡ ಎಂದರೆ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಹಿಂಪಡೆಯಲು ನಾನು ಸಿದ್ಧನಿದ್ದೇನೆ. ಈ ಬಗ್ಗೆ ಸುದೀರ್ಘ ಚರ್ಚೆಯಾಗಲಿ, ಎಲ್ಲರಿಗೂ ಮಾತನಾಡಲು ಅವಕಾಶ ನೀಡಲಾಗುವುದು’ ಎಂದರು.
ಇದೇ ವೇಳೆ ಬಿಜೆಪಿ ಶಾಸಕ ಮುನಿರತ್ನ ಮಧ್ಯಪ್ರವೇಶಿಸಲು ಯತ್ನಿಸಿದಾಗ, ‘ಏಯ್..! ಮಿಸ್ಟರ್ ನಿನ್ನ ಹೆಸರೇನು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಆಗ ಮುನಿರತ್ನ ಎದ್ದುನಿಂತು ‘ನನ್ನ ಹೆಸರನ್ನು ನೀವು ಮರೆತು ಹೋಗಿರುವುದಕ್ಕೆ ಧನ್ಯವಾದಗಳು’ ಎಂದು ವ್ಯಂಗ್ಯವಾಡಿದರು.
ಬಳಿಕ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ‘ಮುನಿರತ್ನ ಅವರೇ ನಿಮಗೂ ಚರ್ಚೆ ಮಾಡಲು ಅವಕಾಶ ನೀಡುತ್ತೇವೆ. ನಿಮ್ಮನ್ನು ತಯಾರು ಮಾಡಿದ್ದು ನಾವೇ. ನಿಮ್ಮ ಮಾತನ್ನೂ ಆಲಿಸುತ್ತೇವೆ. ನೀನು ತನಿಖೆ ಮಾಡಲು ಎಲ್ಲೇಲ್ಲೋ ಸುತ್ತುತ್ತಿದ್ದೀಯಾ, ಹೀಗಾಗಿ ನಿನ್ನ ಹೆಸರು ಮರೆತಿದ್ದೇವೆ. ನಿನ್ನ ಬಗ್ಗೆಯೂ ನಾವು ತನಿಖೆ ಮಾಡಬೇಕಿದೆ’ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಮುನಿರತ್ನ ‘ನನ್ನ ಮೇಲಿನ ಪ್ರಕರಣಗಳು ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣಗಳನ್ನು ಸೇರಿಸಿ ಸಿಬಿಐ ತನಿಖೆಯಾಗಲಿ ಅಥವಾ ಅದಕ್ಕಿಂತಲೂ ದೊಡ್ಡಮಟ್ಟದ ತನಿಖೆ ಇದ್ದರೆ ಅದನ್ನು ಮಾಡಿ’ ಎಂದು ತಿರುಗೇಟು ನೀಡಿದರು. ಇದು ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.