‘SIR’ ಸಿಎಂ ಪ್ರತಿಭಟನೆ ವಿರುದ್ಧ ಎನ್‍ಡಿಎ ಆಕ್ರೋಶ, ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಕಾನೂನುಬಾಹಿರವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಎನ್‍ಡಿಎ ಒಕ್ಕೂಟದ ನಾಯಕರು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಗೆ ಜಂಟಿ ದೂರು ಸಲ್ಲಿಸಿದ್ದಾರೆ.
ಸೋಮವಾರ ಸಂಜೆ ನಗರದ ಅರಮನೆ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಎನ್‍ಡಿಎ ಒಕ್ಕೂಟದ ನಾಯಕರು, ಮತದಾರರ ಪಟ್ಟಿಯಿಂದ ಅನರ್ಹರನ್ನು ಹೊರಗಿಡಲು ಮತ್ತು ಅರ್ಹರಿಗೆ ಸಾಂವಿಧಾನಿಕ ಹಕ್ಕು ಕಲ್ಪಿಸಲು ಎಸ್‍ಐಆರ್ ಪ್ರಕ್ರಿಯೆ ಅತ್ಯಗತ್ಯವಾಗಿದೆ. ಆದರೆ ಕಾಂಗ್ರೆಸ್ ಸರಕಾರ ಮತ್ತು ಆ ಪಕ್ಷದ ಕಾರ್ಯಕರ್ತರು ಈ ಪ್ರಕ್ರಿಯೆಯ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ, ಮತದಾರರ ಪಟ್ಟಿಯ ಅಕ್ರಮಗಳ ವಿರುದ್ಧ ಯಾವುದೇ ನೋಂದಾಯಿತ ಮತದಾರನು ಫಾರ್ಮ್-7 ರ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಆಕ್ಷೇಪಣೆ ಸಲ್ಲಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಮತ್ತು ಹಿತೈಷಿಗಳನ್ನು ಗುರಿಯಾಗಿಸಿಕೊಂಡು ಸರಕಾರವು ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎನ್‍ಡಿಎ ನಾಯಕರು ದೂರಿದ್ದಾರೆ.
ಬೀದರ್ ನ ಭಾಲ್ಕಿ, ಬೆಳಗಾವಿಯ ಮಾರ್ಕೆಟ್ ಏರಿಯಾ, ಬೆಂಗಳೂರಿನ ವೈಯಾಲಿಕಾವಲ್, ಬಳ್ಳಾರಿ ಮತ್ತು ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಗಳಲ್ಲಿ ರಾಜಕೀಯ ಒತ್ತಡದ ಮೇರೆಗೆ ವಂಚನೆ ಮತ್ತು ಬೆದರಿಕೆಯಂತಹ ಗಂಭೀರ ಸ್ವರೂಪದ ಸುಳ್ಳು ಎಫ್‍ಐಆರ್‍ಗಳನ್ನು ದಾಖಲಿಸಲಾಗುತ್ತಿದ್ದು, ಇದು ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಚುನಾವಣಾ ಕಚೇರಿ ಎದುರು ಪ್ರತಿಭಟನೆ: ಹೈಕೋರ್ಟ್ ಆದೇಶ ಉಲ್ಲಂಘನೆ?: ಅ.1ರಂದು ಮುಖ್ಯಮಂತ್ರಿ ಹಾಗೂ ಸಚಿವರ ದಂಡು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಆವರಣದಲ್ಲೆ ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸುವ ಮೂಲಕ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ಕೇವಲ ಫ್ರೀಡಂ ಪಾರ್ಕ್‍ನಲ್ಲಿ ಮಾತ್ರ ಪ್ರತಿಭಟನೆ ನಡೆಸಬೇಕು ಎಂಬ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಎನ್‍ಡಿಎ ನಾಯಕರು ಗಮನ ಸೆಳೆದಿದ್ದಾರೆ.
ನಿಯೋಗದಲ್ಲಿ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ, ಪಿ.ಸಿ. ಮೋಹನ್, ಶಾಸಕರಾದ ಸುರೇಶ್ ಬಾಬು, ಮುನಿರತ್ನ, ಉದಯ್ ಗರುಡಾಚಾರ್, ಟಿ.ಎ.ಶರವಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.