ಪಂಚಾಯತ್ ಚುನಾವಣೆ ಕರಡು ಮೀಸಲು ಸಿದ್ಧ: ಸಚಿವ ಈಶ್ವರ್ ಖಂಡ್ರೆ
ಬೀದರ್: ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಎಲ್ಲ ಅಗತ್ಯ ಕ್ರಮ ವಹಿಸಲಾಗಿದೆ. ಪರಿಷತ್ ಚುನಾವಣೆ ಮಾದರಿ ನೀತಿ ಸಂಹಿತೆ ಇರುವುದರಿಂದ ಚುನಾವಣೆ ಆಯೋಗ ಅನುಮತಿ ನೀಡಿದರೆ ತಕ್ಷಣ ಅಧಿಸೂಚನೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಗ್ರಾಮ ಪಂಚಾಯತಿಗಳ ಮೀಸಲಾತಿ ಪೂರ್ಣಗೊಂಡಿದೆ. ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಮೀಸಲಾತಿ ಪ್ರಕ್ರಿಯೆಯೂ ಮುಗಿದಿದ್ದು, ಕರಡು ಅಧಿಸೂಚನೆ ಹೊರಡಿಸಲು ಸಿದ್ಧವಾಗಿದ್ದೇವೆ. ಆದರೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಕೇಂದ್ರ ಚುನಾವಣೆ ಆಯೋಗದ ಅನುಮತಿ ಕೇಳಲಾಗಿದ್ದು, ಅನುಮತಿ ಸಿಕ್ಕರೆ ತಕ್ಷಣ ಕರಡು ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ಹೇಳಿದರು.
ಕರಡು ಅಧಿಸೂಚನೆ ಪ್ರಕಟವಾದ ಬಳಿಕ ಆಕ್ಷೇಪಣೆ ಸಲ್ಲಿಸಲು ನಿಯಮಾನುಸಾರ ಕಾಲಾವಕಾಶ ನೀಡಿ, ಪ್ರಕ್ರಿಯೆಯ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿ, ಉಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಕೆ ಮಾಡಲಾಗುವುದು. ಬಳಿಕ ರಾಜ್ಯ ಚುನಾವಣೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.