ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಸಮೀಕ್ಷೆ, ಇದರ ಉದ್ದೇಶ, ದುರುದ್ದೇಶ ಬೇರೆಯೇ ಇದೆ : ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ಕೇಂದ್ರ ಸರಕಾರ ಜಾತಿಗಣತಿ ಸಮೀಕ್ಷೆ ಮಾಡುವುದಾಗಿ ಘೋಷಣೆ ಮಾಡಿದೆ. ಕೇಂದ್ರ ಸರಕಾರ ಮಾಡಬೇಕಾದರೆ, ರಾಜ್ಯ ಸರಕಾರ ಯಾಕೆ ಜಾತಿಗಣತಿ ಮಾಡಬೇಕು. ತಮ್ಮ ಲಾಭಕ್ಕಾಗಿ ಸರಕಾರ ಜಾತಿಗಣತಿ ಮಾಡಲು ಮುಂದಾಗಿದೆ. ಮತ್ತೊಂದು ಜಾತಿಗಣತಿ ಮಾಡುವ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜಾತಿಗಣತಿಗೆ 180 ಕೋಟಿ ರೂ. ಖರ್ಚು ಮಾಡಿದ್ದೀರಾ. ಮತ್ತೆ ಜಾತಿಗಣತಿ ಮಾಡಿದರೆ ಮತ್ತೆ ಜನರ ತೆರಿಗೆ ಹಣ ಖರ್ಚು ಆಗುತ್ತದೆ. ಎಷ್ಟೇ ಹಣ ಖರ್ಚು ಮಾಡಿದರೂ ಜಾತಿಗಣತಿಯನ್ನು ಸರಿಯಾದ ರೀತಿಯಲ್ಲಿ ಮಾಡುವುದಿಲ್ಲ ಎಂದು ಕಿಡಿಕಾರಿದರು.
ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಘೋಷಣೆ :
ನಿಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಘೋಷಣೆ ಇದು. ಕೆಲ ಸಮುದಾಯಗಳನ್ನು ಮೇಲೆ ಎತ್ತಿ, ಕೆಲವು ಜಾತಿಗಳನ್ನು ಕೆಳಗೆ ತುಳಿಯೋ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಜಾತಿಗಣತಿ ಮಾಡೋದು ಬೇಡ ಎಂದು ಅವರು ಆಗ್ರಹಿಸಿದರು.
ಅಂತಿಮವಾಗಿ ಇಲ್ಲಿ ಯಾರದ್ದು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಆಗ್ತಿಲ್ಲ, ಇಲ್ಲಿ ಆಗ್ತಾ ಇರೋದು ರಾಜಕೀಯ. ನಿಮ್ಮ ರಾಜಕೀಯ ಅಜೆಂಡಾ ಭವಿಷ್ಯದ ದೃಷ್ಟಿಯಿಂದ ಜಾತಿಗಣತಿ ಮಾಡ್ತಾ ಇದ್ದೀರಾ? ಇದು ನಿಜಕ್ಕೂ ಕೂಡಾ ಅನುಮಾನ ಉದ್ಭವ ಆಗಿದೆ. ಇದರ ಹಿಂದಿನ ಉದ್ದೇಶ, ದುರುದ್ದೇಶ ಬೇರೆ ಅನ್ನೊಂದು ಸ್ಪಷ್ಟವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿಗಳ ಜೊತೆ ಚರ್ಚೆ ಮಾಡಲಿ :
ರಾಜ್ಯಕ್ಕೆ ಅನುದಾನ ಕೊರತೆಯಾಗಿದ್ದರೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗಳ ಬಳಿ ಕೂತು ಚರ್ಚೆ ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿಯವರು ಸಲಹೆ ನೀಡಿದರು.