ಪಕ್ಷ ಸಂಘಟನೆಗೆ ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ : ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನಾಳೆಯಿಂದ (ಜೂನ್ 16) ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಸೋಮವಾರ ತುಮಕೂರು ಜಿಲ್ಲೆಯಿಂದ ಅಧಿಕೃತವಾಗಿ ಪ್ರವಾಸ ಆರಂಭ ಮಾಡುತ್ತೇನೆ. ಎಲ್ಲಾ ಹಿರಿಯ ಮುಖಂಡರು ಸಹಕಾರ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಜೆಡಿಎಸ್ ಪಕ್ಷ ಸಂಘಟಿಸುವ ಉದ್ದೇಶದಿಂದ ‘ಜನರೊಂದಿಗೆ ಜೆಡಿಎಸ್’, 50 ಲಕ್ಷ ಮಂದಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರವಿವಾರ ಇಲ್ಲಿನ ಜೆಪಿ ಭವನದಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಪಕ್ಷವನ್ನು ಜನರ ಬಳಿಗೆ ಕರೆದೊಯ್ಯುವ ಉದ್ದೇಶದಿಂದ ಹಿರಿಯರು ಸೇರಿ ಪಕ್ಷದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ʼಜನರೊಂದಿಗೆ ಜನತಾದಳʼ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿಯೇ ರಾಜ್ಯ ಪಕ್ಷ ಸಂಘಟನಾ ರಾಜ್ಯ ಪ್ರವಾಸ ಮತ್ತು ಮಿಸ್ ಕಾಲ್ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಇಂದಿನಿಂದ ಅಧಿಕೃತವಾಗಿ ಮಿಸ್ಡ್ ಕಾಲ್ ಅಭಿಯಾನದ ಮೂಲಕ ಸದಸ್ಯತ್ವ ನೋಂದಣಿ ಆರಂಭ ಮಾಡಿದ್ದೇವೆ. ರಾಜ್ಯ ಪ್ರವಾಸದ ವೇಳೆ ಪ್ರತಿ ಕಾರ್ಯಕರ್ತರನ್ನು ಭೇಟಿ ಮಾಡಿ. ಪಕ್ಷಕ್ಕಾಗಿ ದುಡಿಯುವ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಕನಿಷ್ಠ ಐವತ್ತು ಲಕ್ಷ ಜನ ಸದಸ್ಯರಾಗಬೇಕು ಎಂಬ ಗುರಿ ಇಟ್ಟುಕೊಂಡು ಹೋಗೋಣ. ಮತ್ತೆ ಈ ಪಕ್ಷವನ್ನು ತಳ ಮಟ್ಟದಿಂದ ಪುಟಿದೇಳುವಂತೆ ಮಾಡಬೇಕು ಎಂಬ ನಿಟ್ಟಿನಲ್ಲಿ ಆ.16ರವರೆಗೆ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ. ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದರು.
ಒಬ್ಬ ರೈತನ ಮಗ ದೇಶದ ಉನ್ನತ ಹುದ್ದೆ ಅಲಂಕರಿಸಿದರು. ದೇವೇಗೌಡರನ್ನು ಈಶ್ವರನ ಪುತ್ರ ಎಂದೇ ಹೇಳಬಹುದು. ರಾಜ್ಯದ ಬಗ್ಗೆ ಅವರಿಗೆ ಇದ್ದ ಬದ್ದತೆ ನೋಡಿದರೆ ಹಲವು ಜನರಿಗೆ ಮಾರ್ಗದರ್ಶನ ಆಗುವಂತದ್ದು ಎಂದರು. ನನ್ನ ಒಳಗೆ ಆತಂಕವಿದೆ, ಎಲ್ಲರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಾನು ಪಕ್ಷದ ಸಂಘಟನೆಗೆ ಮೊದಲು ಹಾಜರಾತಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
58 ದಿನಗಳ ಕಾಲ ನಿಮ್ಮ ಜೊತೆ ನಿರಂತರವಾಗಿ ಹೆಜ್ಜೆ ಹಾಕುತ್ತೇನೆ :
ನಾಳೆಯಿಂದ ಬಹುತೇಕ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡುತ್ತೇನೆ. ಇವತ್ತು ಬಹಳ ಉತ್ಸಾಹದಿಂದ ಪಕ್ಷ ಕಟ್ಟೋಕ್ಕೆ ಎಲ್ಲರೂ ಬಂದಿದ್ದಾರೆ. 58 ದಿನಗಳ ಕಾಲ ನಿಮ್ಮ ಜೊತೆ ನಿರಂತರವಾಗಿ ಹೆಜ್ಜೆ ಹಾಕುತ್ತೇನೆ.ನಾನು ನಿಮ್ಮ ಜೊತೆ ಇರುತ್ತೇನೆ. ಒಂದು ಕಡೆ ಪಕ್ಷ ಸಂಘಟನೆ ಆದರೆ ಮತ್ತೊಂದು ಕಡೆ ಸರಕಾರದ ವೈಫಲ್ಯ ತೆರದಿಡಲು ಬರುತ್ತಿದ್ದೇನೆ ಎಂದರು.
ಭ್ರಷ್ಟ ಸರಕಾರ ರಾಜ್ಯದಿಂದ ತೊಲಗಬೇಕು :
ರೈತ ವರ್ಗಕ್ಕೆ ಕುಮಾರಣ್ಣ ಕೊಟ್ಟ ಕೊಡುಗೆ ಹೇಳಲು ಆಗದು. 25 ಸಾವಿರ ಕೋಟಿ ಯೋಜನೆಯನ್ನು ರೈತಾಪಿ ವರ್ಗಕ್ಕೆ ನೀಡಿದ್ದಾರೆ. ಪಂಚರತ್ನ ಯೋಜನೆ ಕನಸು ನನಸು ಆಗಬೇಕು. ಈ ಭ್ರಷ್ಟ ಸರಕಾರ ರಾಜ್ಯದಿಂದ ತೊಲಗಬೇಕು ಎಂದು ವಿರುದ್ಧ ಕಿಡಿಕಾರಿದರು.