ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‍ಶಿಪ್ ಯೋಜನೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ ಆಗ್ರಹ
ಬೆಂಗಳೂರು, ಸೆ.27: ರಾಜ್ಯ ಕಾಂಗ್ರೆಸ್ ಸರಕಾರ ಬಿಡದಿಯಲ್ಲಿ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್(ಸಮಗ್ರ ನಗರ) ಯೋಜನೆಯನ್ನು ಕೈ ಬಿಡುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಶನಿವಾರ ನಗರದಲ್ಲಿರುವ ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ನಾಳೆಯಿಂದ ಬೃಹತ್ ಹೋರಾಟ ಮಾಡುತ್ತೇವೆ. ಈ ಯೋಜನೆ ಕೈಬಿಡುವವರೆಗೂ, ರೈತರ ಬೆನ್ನೆಲುಬು ಆಗಿ ನಿಲ್ಲುತ್ತೇವೆ. ಇದು ಯಾವ ಹಂತಕ್ಕೆ ಹೋದರೂ ನಾವು ಇರುತ್ತೇವೆ ಎಂದು ಹೇಳಿದರು.
ಜೆಡಿಎಸ್ ಪಕ್ಷ ರೈತರ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಕಳೆದ ಹಲವಾರು ತಿಂಗಳಿಂದ ಬಿಡದಿ ಭಾಗದ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ರಾಜ್ಯ ಸರಕಾರ ರೈತರ ವಿಶ್ವಾಸಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ. ಅವರಲ್ಲಿ ಆಕ್ರೋಶ ಹೆಚ್ಚು ಮಾಡೋ ಕೆಲಸ ಮಾಡುತ್ತಿದೆ ಎಂದು ಅವರು ಕಿಡಿಗಾರಿದರು.
ರೈತರ ವಿಚಾರದಲ್ಲಿ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಇದೇ ರೀತಿ ಇತ್ತು. ಅಲ್ಲಿ ರೈತರು ಒಂದು ಸಾವಿರ ದಿನಗಳ ಕಾಲ ಹೋರಾಟ ಮಾಡಿದ್ದಾರೆ. ಅದೇ ರೀತಿ ಜೆಡಿಎಸ್ ಪಕ್ಷ ಸರಕಾರದ ವಿರುದ್ಧ ಹೋರಾಟ ನಡೆಸಲಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಜೆಡಿಎಸ್ ಹೋಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇನ್ನು ಪ್ರತಿಭಟನೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ನಮ್ಮ ಜೊತೆ ರೈತ ಹೋರಾಟಗಾರರು ಇರುತ್ತಾರೆ. ಸಾಕಷ್ಟು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡಿದೆ. ಅದನ್ನ ನಿಮ್ಮ ಮುಂದೆ ಇಡುತ್ತೇವೆ ಎಂದು ಅವರು ಹೇಳಿದರು.
ಮೊದಲ ಈ 900 ಎಕರೆಯಲ್ಲಿ ಪ್ರಾಯೋಗಿಕ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಮಾಡಿ ತೋರಿಸಿ. ಕೆಐಎಡಿಬಿ ಭೂಮಿಯಲ್ಲಿ ತೋರಿಸಿ. ಆಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ. ಜಿಬಿಡಿಗೆ ಯಾವುದೇ ಅನುಭವ ಇಲ್ಲ. ನಿಮಗೆ ಸಿಬ್ಬಂದಿ ಇದ್ದಾರೆ, ಹಣಕಾಸು ಮೂಲ ಇದೀಯಾ? ಇದೆಲ್ಲರ ಕೊರತೆ ಕಾಣಿಸುತ್ತಿದೆ. ಸರಕಾರ ಇದಕ್ಕೆ ಉತ್ತರ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ರೈತರಿಗೆ ಪರಿಹಾರದ ಬಗ್ಗೆ ಡಿ.ಕೆ.ಶಿವಕುಮಾರ್ ಇಲ್ಲಿಯವರೆಗೂ ಸಭೆ ಮಾಡಿಲ್ಲ. ಆದರೆ, ರೈತರ ಮುಂದೆ ತೊಡೆ ತಟ್ಟಿದ್ದಾರೆ. ನನ್ನ ತಡೆಯಿರಿ ಎಂದು ಸವಾಲು ಹಾಕಿರುವುದನ್ನು ನಾವು ನೋಡಿದ್ದೇವೆ. ರೈತರ ಜಮೀನು ಮಾರಾಟ ಮಾಡದಂತೆ ಆದೇಶ ಮಾಡಿದ್ದೀರಾ.? ಅವರ ಮಕ್ಕಳ ಜೀವನಕ್ಕೆ ಏನು ಮಾಡಬೇಕು. ತರಾತುರಿಯಲ್ಲಿ ಟೌನ್ ಶಿಪ್ ಯೋಜನೆ ಜಾರಿ ಮಾಡುತ್ತಿರುವ ಹಿಂದಿನ ಉದ್ದೇಶವೇನು? ಎಂದು ಅವರು ಪ್ರಶ್ನಿಸಿದರು.
ಶೇ.80ರಷ್ಟು ರೈತರು ಈ ಭೂಸ್ವಾಧೀನ ಪ್ರಕ್ರಿಯೆಗೆ ಪ್ರಬಲವಾದ ವಿರೋಧ ಮಾಡಿದ್ದಾರೆ. ಆದುದರಿಂದ, ಈ ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ರೈತರ ಮೇಲೆ ದೌರ್ಜನ್ಯ ಮಾಡುತ್ತಿರುವ ಜಿಬಿಎ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಮಾಡಿರುವ ಯೋಜನಾ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಆಗ್ರಹಿಸಿದರು.