×
Ad

ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಲ್ಲಿ ವಂಚನೆ ಪ್ರಕರಣ: ಕರ್ನಾಟಕ, ಹೊಸದಿಲ್ಲಿ, ಮಹಾರಾಷ್ಟ್ರದ ವಿವಿಧೆಡೆ ಈಡಿ ಶೋಧ

Update: 2025-12-22 19:57 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಹೆಸರಿನಲ್ಲಿ ಸಂಘಟಿತವಾಗಿ ವಂಚನೆ ನಡೆಸುತ್ತಿದ್ದ ಆರೋಪ ಪ್ರಕರಣದಲ್ಲಿ 4ನೇ ಬ್ಲಾಕ್ ಕನ್ಸಲ್ಟೆಂಟ್ಸ್ ಕಂಪೆನಿ ಮತ್ತು ಇದಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ(ಈ.ಡಿ.)ವು ಡಿಸೆಂಬರ್ 18ರಂದು ಶೋಧ ನಡೆಸಿದೆ.

ಕರ್ನಾಟಕ, ಮಹಾರಾಷ್ಟ್ರ ಮತ್ತು ಹೊಸದಿಲ್ಲಿಯಲ್ಲಿರುವ ಆರೋಪಿಗಳು ಮತ್ತು ಅವರ ಸಹಚರರ ನಿವಾಸ ಹಾಗೂ ಕಚೇರಿ ಸಹಿತ ಸುಮಾರು 22 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಈಡಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ವಿದೇಶಿ ಪ್ರಜೆಗಳು, ಭಾರತೀಯ ನಾಗರಿಕರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ತಾವೇ ವಿನ್ಯಾಸಗೊಳಿಸಿದ ವೆಬ್‍ಸೈಟ್‍ಗಳ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭಾಂಶ ನೀಡುವುದಾಗಿ ನಂಬಿಸುತ್ತಿದ್ದರು. ಇದಕ್ಕಾಗಿ ಅನುಮತಿ ಪಡೆಯದಿದ್ದರೂ ಹೆಸರಾಂತ ಕ್ರಿಪ್ಟೋ ತಜ್ಞರು, ಪ್ರಸಿದ್ಧ ವ್ಯಕ್ತಿಗಳ ಫೋಟೋಗಳನ್ನು ಬಳಸಿಕೊಂಡು ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಪ್, ಟೆಲಿಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿ ಜನರನ್ನು ನಂಬಿಸುತ್ತಿದ್ದರು. ನಂಬಿ ಹಣ ಹೂಡಿಕೆ ಮಾಡುವವರಿಗೆ ತ್ವರಿತ ಆದಾಯದ ಭರವಸೆ ನೀಡುತ್ತಿದ್ದ ಆರೋಪಿಗಳು, ಆರಂಭಿಕ ಹಂತದಲ್ಲಿ ಅವರ ನಂಬಿಕೆ ಹೆಚ್ಚಿಸಲು ಕೆಲವು ಲಾಭಾಂಶಗಳನ್ನು ನೀಡುತ್ತಿದ್ದರು ಎಂದು ಈ.ಡಿ. ತಿಳಿಸಿದೆ.

ಹಣವನ್ನು ಸಂಗ್ರಹಿಸಲು ಬಹು ಸಂಖ್ಯೆಯಲ್ಲಿ ಕ್ರಿಪ್ಟೋ ವ್ಯಾಲೆಟ್‍ಗಳು, ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಕಂಪೆನಿಗಳನ್ನು ಸೃಷ್ಟಿಸಿಕೊಂಡಿದ್ದರು. 2015ರಿಂದ ಇದೇ ತಂತ್ರ ಬಳಸುತ್ತಿದ್ದ ಆರೋಪಿಗಳು, ಕ್ರಿಪ್ಟೋ ಕರೆನ್ಸಿ ರೂಪದಲ್ಲಿ ಸಂಗ್ರಹಿಸುವ ಹಣವನ್ನು ನೇರವಾಗಿ ಕ್ರಿಪ್ಟೋ ವಹಿವಾಟುಗಳಲ್ಲಿಯೇ ಬಳಸಿಕೊಂಡು ನಂತರ ನಗದು/ಬ್ಯಾಂಕ್ ಬ್ಯಾಲೆನ್ಸ್ ರೂಪದಲ್ಲಿ ಪರಿವರ್ತಿಸುತ್ತಿದ್ದರು. ಮತ್ತು ಆ ಹಣದಲ್ಲಿ ಭಾರತ ಹಾಗೂ ವಿದೇಶಗಳಲ್ಲಿ ಚರ ಮತ್ತು ಸ್ಥಿರಾಸ್ತಿಗಳನ್ನು ಖರೀದಿಸಿದ್ದರು. ಸದ್ಯ ನಡೆಸಲಾದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಆರೋಪಿಗಳ ಕೆಲವು ಕ್ರಿಪ್ಟೋ ವ್ಯಾಲೆಟ್‍ಗಳು, ಆಸ್ತಿಗಳನ್ನು ಗುರುತಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಈಡಿ ಪ್ರಕಟನೆಯಲ್ಲಿ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News