×
Ad

ಬ್ರಹ್ಮ ರಾಕ್ಷಸನಂತಿರುವ ಆರೆಸ್ಸೆಸ್‌ ವಿರುದ್ಧ ಹೋರಾಟ ಅನಿವಾರ್ಯ: ಸಾಹಿತಿ ಕುಂ.ವೀರಭದ್ರಪ್ಪ

11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

Update: 2025-12-21 21:33 IST

ರಾಯಚೂರು, ಡಿ.21: ಸಂವಿಧಾನವನ್ನು ಮೂಲೆಗುಂಪು ಮಾಡುವ ಹುನ್ನಾರ ಮಾಡಲಾಗುತ್ತಿದೆ. ಮನುವಾದಿಗಳು ಸಂವಿಧಾನವನ್ನು ಒಪ್ಪುವುದಿಲ್ಲ. ಇವರು ಅಸ್ತಿತ್ವದಲ್ಲಿದ್ದರೆ ಯಾರೂ ಕೂಡ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಸಾಮಾಜಿಕ, ರಾಜಕೀಯ ಹೊಣೆಗಾರಿಕೆ ದಲಿತ ಸಾಹಿತಿಗಳ ಮೇಲಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ರಾಯಚೂರು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಬಹಳ ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ. ದೇಶದಲ್ಲಿ ಲೇಖಕರ ಮೇಲೆ ದೈಹಿಕ ಹಲ್ಲೆಗಳು ನಡೆಯುತ್ತಿವೆ. ಮಹಿಳೆಯರ ಮಾನಭಂಗವಾಗುತ್ತಿದೆ, ಪ್ರಶ್ನೆ ಮಾಡುವವರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಮಗೆ ಕಮಲ ಮುಖ್ಯವಲ್ಲ, ಕಮಲದ ಕೆಳಗೆ ಇರುವ ಬ್ರಹ್ಮ ರಾಕ್ಷಸನಂತಿರುವ ಆರೆಸ್ಸೆಸ್‌ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಆರೆಸ್ಸೆಸ್‌ ಬಹಳ ಅಪಾಯಕಾರಿಯಾಗಿರುವಂತಹದ್ದು, ಅದರ ವಿರುದ್ಧ ನಾವು ಹೋರಾಡಬೇಕಿದೆ ಎಂದು ಕರೆ ನೀಡಿದರು.

ಸರ್ಕಾರ ಎಷ್ಟೋ ಪ್ರಶಸ್ತಿಗಳನ್ನು ಕೊಡುತ್ತಿದ್ದು, ಹಲವು ಪ್ರಾಧಿಕಾರಗಳನ್ನು ಮಾಡುತ್ತಿದ್ದು, ಅದರಲ್ಲಿ ಶೇ.30ರಷ್ಟು ದಲಿತರಿಗೆ ಮೀಸಲಿಡಬೇಕು. ಪ್ರಾಧಿಕಾರದಲ್ಲಿ ಕನಿಷ್ಠ ಇಬ್ಬರು ದಲಿತ ಸದಸ್ಯರಿರಬೇಕು. ಅಕಾಡೆಮಿಗಳಲ್ಲಿ ದಲಿತರು ಸದಸ್ಯರಾಗಿರಬೇಕು. ಸರ್ಕಾರ ಕೊಡುವ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಶೇ.30ರಷ್ಟು ದಲಿತರಿಗೆ ಮೀಸಲಿರಬೇಕು. ಅರ್ಹತೆಯ ಪ್ರಶ್ನೆಯಲ್ಲ. ಈ ನೆಲದ ನೋವುಗಳಿಗೆ ಸ್ಪಂದಿಸಿ ಅವುಗಳನ್ನು ಬರಹ ರೂಪಕ್ಕೆ ತಂದಿರುವ ಸಾಹಿತಿಗಳ ಬರವಣಿಗೆ ಬಹಳ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದರು.

ವ್ಯವಸ್ಥೆಗೆ ಉಪದ್ರವನ್ನು ಕೊಡುವ ಹಾಗೂ ಪ್ರಶ್ನಿಸುವಂತಹ ಎಲ್ಲರೂ ಕೂಡ ಶ್ರೇಷ್ಠ ಕೊಡುಗೆ ನೀಡುತ್ತಿದ್ದಾರೆ. ಈ ನೆಲದ ಮೂಲ ವಾರಸುದಾರರೆಂದರೆ ದಲಿತ ಸಾಹಿತಿಗಳು, ದಲಿತರಾಗಿದ್ದಾರೆ. ತಳ ಸಮುದಾಯಗಳ ಆಶಯಗಳನ್ನು ಸಾಂಕ್ರಾಮಿಕಗೊಳಿಸುವ ಕೆಲಸ ಮಾಡಬೇಕು. ವರ್ತಮಾನ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸ್ಥಿತಿ ಇದೆ ಎಂದು ತಿಳಿಸಿದರು.

ದಲಿತರು ಯಾವುದಾದರೂ ಕುರ್ಚಿಯಲ್ಲಿ ಕೂತು ಎದ್ದು ಬಂದರೆ ಅದನ್ನು ಪಾದೋದಕಗಳಿಂದ ಶುಚಿಗೊಳಿಸುವ ಕೆಲಸ ನಡೆಯುತ್ತಿದೆ. ಇದು ಬಹಳ ಅಪಾಯಕಾರಿ ಮನಸ್ಥಿತಿ, ಮತ್ತು ಉಸಿರುಗಟ್ಟುವ ಸ್ಥಿತಿಯಾಗಿದೆ. ವ್ಯವಸ್ಥೆಯನ್ನು ಸರಿಪಡಿಸದೇ ಇದ್ದಲ್ಲಿ ಮುಂದಿನ ಹತ್ತು ವರ್ಷದಲ್ಲಿ ಸಂವಿಧಾನ ನಮ್ಮ ಕೈಯಲ್ಲಿ ಇರುವುದಿಲ್ಲ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ, ರಾಷ್ಟ್ರೀಯ ಪ್ರಶಸ್ತಿನ ಪುರಸ್ಕೃತರಾದ ಬಾಬು ಭಂಡಾರಿಗಲ್, ಡಾ.ಪದ್ಮಿನಿ ನಾಗರಾಜು, ಡಾ.ಚನ್ನಬಸಪ್ಪ ಮಲ್ಕಂದಿನ್ನಿ, ಡಾ.ಕೆ.ಪಿ.ಮಹಾದೇವ, ಡಾ.ಅಮರೇಶ ಯತಗಲ್, ಡಾ.ಜೆ.ಪಿ ದೊಡಮನಿ, ಡಾ.ಸೂರ್ಯಕಾಂತ ಸುಜ್ಯಾತ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮೇಳನದ ಎರಡನೇ ದಿನದ ಸಮಾರೋಪ ಸಮಾರಂಭದಲ್ಲಿ ಐದು ನಿರ್ಣಯಗಳನ್ನು ಮಂಡಿಸಲಾಗಿದ್ದು, ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲಿ ನಡೆಸಲು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಉಪಾಧ್ಯಕ್ಷ ಡಾ.ವೈ.ಎಂ ಭಜಂತ್ರಿ, ಕಾರ್ಯದರ್ಶಿ ಡಾ.ಸುಭಾಷ್ ಹೊದ್ಲೂರು, ಖಜಾಂಚಿ ಡಾ.ಎಚ್ ಬಿ ಕೋಲ್ಕರ್ ಅವರು ತೀರ್ಮಾನಕ್ಕೆ ಸಹಿ ಹಾಕಿದರು.

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ 5 ನಿರ್ಣಯಗಳು :

► ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು

► ದಲಿತ ಸಾಹಿತ್ಯ ಪರಿಷತ್ ಗೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು

► ಮೀಸಲಾತಿ ಅನ್ವಯ ಆಗುವ ಕಡೆ ಒಳ ಮೀಸಲಾತಿ ಜಾರಿಯಾಗಬೇಕು

► ಅಂಬೇಡ್ಕರ್ ಧಾರವಾಹಿ ಮರು ಪ್ರಸಾರ ಆಗಬೇಕು

► ಕೇಂದ್ರ ಸರ್ಕಾರ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News