ರಾಜ್ಯದ ನಾಯಕತ್ವ ಗೊಂದಲ ಹೈಕಮಾಂಡ್ ಸೃಷ್ಟಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ
"ಗೊಂದಲವನ್ನು ಇಲ್ಲಿಯ ನಾಯಕರೇ ಬಗೆಹರಿಸಿಕೊಳ್ಳಬೇಕು"
ಮಲ್ಲಿಕಾರ್ಜುನ ಖರ್ಗೆ | PC : PTI
ಕಲಬುರಗಿ: "ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವದ ಗೊಂದಲ ಹೈಕಮಾಂಡ್ ಸೃಷ್ಟಿಸಿಲ್ಲ, ಗೊಂದಲವೇನೇ ಇದ್ದರೂ ಸ್ಥಳೀಯ ಮಟ್ಟದಲ್ಲೇ ಅದನ್ನು ಬಗೆಹರಿಸಿಕೊಳ್ಳಬೇಕು" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ನಾಯಕತ್ವದ ಗೊಂದಲ ಸ್ಥಳೀಯವಾಗಿಯೇ ಸೃಷ್ಟಿಯಾಗುತ್ತಿದೆ, ಅದನ್ನು ಇಲ್ಲಿಯ ನಾಯಕರೇ ಬಗೆಹರಿಸಿಕೊಳ್ಳಬೇಕು. ಪ್ರತಿಯೊಂದಕ್ಕೂ ಹೈಕಮಾಂಡ್ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿ ಹುದ್ದೆ ಕುರಿತ ಗೊಂದಲಗಳನ್ನು ಬಗೆಹರಿಸುವಂತೆ ಕಾಂಗ್ರೆಸ್ ಮುಖಂಡ ಸುದರ್ಶನ್ ಅವರು ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಬರೆದಿರುವ ಪತ್ರ ನಮ್ಮ ಕೈಗೆ ಸೇರಿಲ್ಲ. ದೆಹಲಿಗೆ ಹೋದ ನಂತರ ಯಾವ ಉದ್ದೇಶಕ್ಕಾಗಿ ಪತ್ರ ಬರೆದಿದ್ದಾರೆ ಎನ್ನುವುದು ಗೊತ್ತಾಗಲಿದೆ, ಅದರಲ್ಲಿ ಏನಿದೆ ಎಂಬುದನ್ನು ನೋಡಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಡಿ. 23ರಂದು ದೆಹಲಿಗೆ ಭೇಟಿ ನೀಡುವ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವರು ದೆಹಲಿಗೆ ಭೇಟಿ ನೀಡುವ ಕುರಿತಾಗಿ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಉತ್ತರಿಸಿದರು.