×
Ad

ಜಮೀನು ಡಿನೋಟಿಫೈ ಮಾಡಿ ಬಿಎಸ್‍ವೈಯವರಂತೆ ಜೈಲಿಗೆ ಹೋಗಲು ಸಿದ್ದನಿಲ್ಲ: ಡಿ.ಕೆ. ಶಿವಕುಮಾರ್

"ಕುಮಾರಸ್ವಾಮಿ ಧರ್ಮಪತ್ನಿ, ಮಗ ಸೇರಿದಂತೆ ಶೇ.70ರಷ್ಟು ಮಂದಿ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ"

Update: 2025-09-04 21:37 IST

Photo:X/@DKShivakumar

ಬೆಂಗಳೂರು: ‘ಬಿಡದಿ ಟೌನ್‍ಶಿಪ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ. ಇದನ್ನು ನಾನು ಡಿನೋಟಿಫಿಕೇಷನ್ ಮಾಡಿ ಯಡಿಯೂರಪ್ಪನವರಂತೆ ಜೈಲಿಗೆ ಹೋಗಲು ನಾನು ತಯಾರಿಲ್ಲ. ಕಾನೂನು ಚೌಕಟ್ಟಿನಲ್ಲಿ ರೈತರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಭೂಸ್ವಾಧೀನ ವಿರೋಧಿಸಿ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ಹೊರಗಡೆಯಿಂದ ಬಂದವನಲ್ಲ. ನಾನು ನಿಮ್ಮ ಜಿಲ್ಲೆಯವನೇ. ಬಿಡದಿ ಕೈಗಾರಿಕಾ ಪ್ರದೇಶ ಮಾಡಿದಾಗ ಯಾವ ಸರಕಾರ ಅಧಿಕಾರದಲ್ಲಿತ್ತು ಎಂಬುದು ರೈತರಿಗೆ ತಿಳಿದಿದೆ" ಎಂದರು.

ನಿಮಗೆ ಉತ್ತಮ ಪರಿಹಾರ ನೀಡಲು ಸುಮಾರು 10ಸಾವಿರ ಕೋಟಿ ರೂ.ಸಾಲ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಮ್ಮ ಒಂದು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಸ್ವಾಧೀನವಾಗಿರುವ ಭೂಮಿಯನ್ನು ಕಾನೂನು ಚೌಕಟ್ಟು ಮೀರಿ ಕೈಬಿಡುವ ಹಂತದಲ್ಲಿ ನಾನಿಲ್ಲ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಧರ್ಮಪತ್ನಿಯವರು ಹಾಗೂ ಮಗ ಸೇರಿದಂತೆ ಶೇ.70ರಷ್ಟು ಮಂದಿ ಪರಿಹಾರ ನೀಡಿ ಎಂದು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೇ.30ರಷ್ಟು ಮಂದಿ ಮಾತ್ರ ಒಪ್ಪಿಗೆ ನೀಡಿಲ್ಲ. ಆದರೆ ನಾನು ನಿಮ್ಮ ಪರವಾಗಿ ಏನು ತೀರ್ಮಾನ ತೆಗೆದುಕೊಳ್ಳಬೇಕು. ಯಾವ ರೀತಿ ಸಹಾಯ ಮಾಡಬೇಕು ಎಂದು ಚರ್ಚೆ ನಡೆಸುತ್ತೇನೆ ಎಂದು ಅವರು ತಿಳಿಸಿದರು.

ನಾನು ಕೇವಲ ಬಿಡದಿ ಪ್ರದೇಶಕ್ಕೆ ಮಾತ್ರ ವಿಶೇಷವಾಗಿ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಸಾಧ್ಯವಿಲ್ಲ. ತೀರ್ಮಾನ ತೆಗೆದುಕೊಂಡರೆ ಇಡೀ ರಾಜ್ಯದ ಎಲ್ಲ ಭೂ ಸ್ವಾಧೀನಗಳ ಮೇಲೆ ಪರಿಣಾಮ ಬೀರಲಿದೆ. ಈ ಪ್ರದೇಶವನ್ನು ಕೈ ಬಿಡಬೇಕು ಎನ್ನುವ ಒತ್ತಡವೂ ಇತ್ತು. ಆದರೆ ಕಾನೂನಿನ ಚೌಕಟ್ಟಿನಲ್ಲಿ ಡಿನೋಟಿಫಿಕೇಷನ್ ಮಾಡಲು ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ಬಂದಿವೆ ಎಂದರು.

ಈ ವೇಳೆ ಶಾಸಕ ಬಾಲಕೃಷ್ಣ ರೈತರ ಪರವಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮಾತನಾಡಿದ ಶಿವಕುಮಾರ್, ಬಾಲಕೃಷ್ಣ ನಿಮ್ಮ ಪರವಾಗಿ ಎಷ್ಟು ಹೋರಾಟ ಮಾಡಿದ್ದಾರೆಂಬುದು ನನಗೆ ತಿಳಿದಿದೆ. ನನ್ನ ಹಿಂದೆ ಬಿದ್ದು ರೈತರ ಪರವಾಗಿ ಮಾತನಾಡಿದ್ದಾರೆ. ನಿಮ್ಮ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹಿಂದೆ ಸಹಿ ಹಾಕಿದವರು ನಿಮ್ಮ ಪರವಾಗಿದ್ದಾರಾ? ಎಂದು ಪ್ರಶ್ನಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ 1ಕೋಟಿ ರೂ.ಪರಿಹಾರ ನಿಗದಿ ಮಾಡಿದವರು ನಿಮ್ಮ ಪರವಾಗಿದ್ದಾರಾ?. ಅವರು ಯಾರೂ ನಿಮ್ಮ ಪರವಾಗಿಲ್ಲ. ರೈತರಿಗೆ ಉತ್ತಮ ಪರಿಹಾರ ದೊರೆಯಬೇಕು ಎಂದು ಹೋರಾಟ ಮಾಡುತ್ತಿರುವ ಶಾಸಕ ಬಾಲಕೃಷ್ಣ ನಿಮ್ಮ ಪರವಾಗಿದ್ದಾರೆ. ನಿಮ್ಮ ಪರವಾಗಿ ಇವರಷ್ಟು ಹೋರಾಟವನ್ನು ಬೇರೆ ಯಾರೂ ಮಾಡಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News