ಧರ್ಮಸ್ಥಳ ಪ್ರಕರಣ; ಸ್ಥಳೀಯರಿಬ್ಬರು ಗುರುತಿಸಿರುವ ಸ್ಥಳಗಳಲ್ಲಿ ಉತ್ಖನನಕ್ಕೆ ಕೋರಿದ ಅರ್ಜಿ ಸಂಬಂಧ ಎಸ್‌ಐಟಿಗೆ ನೋಟಿಸ್
ಸಾಂದರ್ಭಿಕ ಚಿತ್ರ
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸ್ಥಳೀಯ ನಿವಾಸಿಗಳಿಬ್ಬರು ಗುರುತಿಸಿರುವ ಜಾಗಗಳಲ್ಲಿ ಸ್ಥಳ ಪರಿಶೀಲನೆ ಹಾಗೂ ಶವಗಳ ಉತ್ಖನನ ನಡೆಸಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಎಸ್‌ಐಟಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ಧರ್ಮಸ್ಥಳ ಗ್ರಾಮದ ಪಾಂಡುರಂಗ ಗೌಡ ಹಾಗೂ ತುಕಾರಾಂ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಧರ್ಮಸ್ಥಳ ಸಾಮೂಹಿಕ ಅಂತ್ಯ ಸಂಸ್ಕಾರ ಆರೋಪ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ ಅವರಿಗೆ ಸೂಚಿಸಿ, ವಿಚಾರಣೆಯನ್ನು ಗುರುವಾರಕ್ಕೆ (ಸೆಪ್ಟೆಂಬರ್ 18) ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ದೀಪಕ್ ಖೋಸ್ಲಾ ವಾದ ಮಂಡಿಸಿ, ಅರ್ಜಿದಾರರು ತಾವು ಗುರುತಿಸಿರುವ ವಿವಿಧ ಸ್ಥಳಗಳಲ್ಲಿ ಶೀಘ್ರ ಪರಿಶೀಲನೆ ಹಾಗೂ ಉತ್ಖನನ ನಡೆಸುವಂತೆ ಆಗಸ್ಟ್ 6 ಮತ್ತು 29ರಂದು ಎಸ್‌ಐಟಿಗೆ ಮನವಿ ಸಲ್ಲಿಸಿದ್ದಾರೆ. ಅರ್ಜಿದಾರರು ಗುರುತಿಸಿರುವ ಜಾಗಗಳಲ್ಲಿ ಮೃತದೇಹಗಳ ಕೆಲ ಭಾಗಗಳು ಪ್ರಾಣಿಗಳು ಹಾಗೂ ಮನುಷ್ಯರಿಗೆ ಗೋಚರಿಸುವಂತಿದ್ದು, ಶೀಘ್ರ ಸ್ಥಳ ಪರಿಶೀಲನೆ ನಡೆಸುವ ಅಗತ್ಯವಿದೆ. ಒಂದು ವೇಳೆ ಮಾಹಿತಿ ಸುಳ್ಳಾಗಿದ್ದರೆ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದೂ ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ, ಈ ನಿಟ್ಟಿನಲ್ಲಿ ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿದರು.
ಅರ್ಜಿಯಲ್ಲೇನಿದೆ?:
ಪಾಂಡುರಂಗ ಗೌಡ ಹಾಗೂ ತುಕಾರಾಂ ಗೌಡ ಅವರು ಸಲ್ಲಿಸಿರುವ ಮನವಿ ಪರಿಗಣಿಸಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಎಸ್‌ಐಟಿಗೆ ನಿರ್ದೇಶಿಸಬೇಕು. ಅರ್ಜಿದಾರರು ತೋರಿಸುವ ಸ್ಥಳಗಳಲ್ಲಿ ಉತ್ಖನನಕ್ಕೆ ಅನುವಾಗುವಂತೆ ಅರ್ಜಿದಾರರಿಗೆ ಜತೆಯಾಗಿ ರಿಜಿಸ್ಟ್ರಾರ್ (ನ್ಯಾಯಾಂಗ) ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಂತಹ ಕೋರ್ಟ್ ಕಮಿಷನರ್ ಒಬ್ಬರನ್ನು ನೇಮಕ ಮಾಡಬೇಕು ಹಾಗೂ ಈ ಕುರಿತ ತಥ್ಯಪೂರ್ಣವಾದ ವಾಸ್ತವಿಕ ವರದಿಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ಆದೇಶಿಸಬೇಕು. ಇದಲ್ಲದೆ, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಂತ್ಯಸಂಸ್ಕಾರಗಳಿಗೆ ಸಂಬಂಧಿಸಿದಂತೆ ಸಮಗ್ರ ಹಾಗೂ ವಸ್ತುನಿಷ್ಠ ತನಿಖೆ ನಡೆದಿದೆ ಎಂಬುದನ್ನು ಖಾತ್ರಿಪಡಿಸಲು ತನಿಖೆಯ ಪ್ರಗತಿ ವರದಿಯನ್ನು ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್‌ಐಟಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.