ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶ : ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಸೆ.5: ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ಅನುಭವದ ಆಧಾರದ ಮೇಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅನೇಕ ದೇಶಗಳು ಇವಿಎಂ ಬಳಸಿ ಪುನಃ ಬ್ಯಾಲೆಟ್ ಕಾಗದ ಮೂಲಕ ಚುನಾವಣೆ ನಡೆಸಿರುವ ನಿರ್ದೇಶನ ಇದೆ. ಹೀಗಾಗಿ, ರಾಜ್ಯದಲ್ಲಿಯೂ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶ ಎಂದರು.
ಧರ್ಮಸ್ಥಳ ಪ್ರಕರಣವನ್ನು ಎನ್‍ಐಎ ತನಿಖೆಗೆ ವಹಿಸಬೇಕೆಂದು ಕೆಲ ಸ್ವಾಮೀಜಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರಕಾರ ಈಗಾಗಲೇ ಎಸ್‍ಐಟಿ ರಚನೆ ಮಾಡಿದ್ದು, ತನಿಖೆ ಮುಂದುವರೆದಿದೆ. ಜತೆಗೆ, ಅವರೂ ಪೊಲೀಸ್‌ನವರೇ ಅಲ್ಲವೇ ಎಂದು ಪ್ರಶ್ನೆ ಮಾಡಿದರು.