ಬೆಂಗಳೂರು: ರಾಜ್ಯ ಸರಕಾರದ ವೈಫಲ್ಯವನ್ನು ಜನರಿಗೆ ತಿಳಿಸಲು ಬಿಜೆಪಿ ವತಿಯಿಂದ ಸೆ.1ರಿಂದ 10ರ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಯಚೂರಿನಿಂದ ಆರಂಭವಾಗಲಿರುವ ಪಾದಯಾತ್ರೆ ಬಳ್ಳಾರಿಯಲ್ಲಿ ಅಂತ್ಯಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ನಿರ್ಲಕ್ಷ್ಯ, ರೈತರ ಸಂಕಷ್ಟ, ಉದ್ಯೋಗಾವಕಾಶ ಸೃಷ್ಟಿಯಲ್ಲಿನ ವೈಫಲ್ಯ, ಮೀಸಲಾತಿ ಜಾರಿ, ಉತ್ತರ ಕರ್ನಾಟಕದ ಸಮಸ್ಯೆ, ಹೊಸ ನೇಮಕಾತಿ ಬಗ್ಗೆ ಸಿಎಂ ನಿರ್ಲಕ್ಷ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸಿ ಸರಕಾರದ ಬಂಡವಾಳ ಬಯಲು ಮಾಡಲು ಪಾದಯಾತ್ರೆ ನಡೆಸಲಾಗುವುದು ಎಂದರು.

ಕಾಂಗ್ರೆಸ್ ಸರಕಾರ ಭ್ರಷ್ಟಚಾರದಲ್ಲೇ ಮುಳುಗಿದೆ. ಇವರ ಬಣ್ಣವನ್ನು ಬೀದಿಗೆಳೆಯಲು ಬಿಜೆಪಿ ತೀರ್ಮಾನಿಸಿದೆ. ಸೆ.1ರಂದು ರಾಯಚೂರಿನಿಂದ ಪಾದಯಾತ್ರೆ ಆರಂಭವಾಗಲಿದೆ. ಬಳ್ಳಾರಿಯಲ್ಲಿ ಸಮಾರೋಪ ನಡೆಯಲಿದೆ. ಸುಮಾರು 200ಕಿ.ಮೀ ಪಾದಯಾತ್ರೆ ಸಾಗಲಿದೆ. ಉದ್ಘಾಟನೆ ಮತ್ತು ಸರೋಪಕ್ಕೆ ಕೇಂದ್ರ ಸಚಿವರು ಆಗಮಿಸಲಿದ್ದಾರೆ ಎಂದರು.

ಜೆಡಿಎಸ್ ಬೆಂಬಲ:

ಇದು ಬಿಜೆಪಿ ಪಾದಯಾತ್ರೆ. ಇದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬೆಂಬಲ ನೀಡಲಿದ್ದಾರೆ ಎಂದ ಅವರು, ಸತ್ಯವನ್ನು ಎದುರಿಸಲಾಗ ಸರಕಾರ ಅಧಿವೇಶನ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಅಲ್ಲದೆ, ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ಬಿಡದೆ ಅನ್ಯಾಯ ಮಾಡಿದೆ. ಕಲಾಪದ ಅವಧಿಯನ್ನು ಕಡಿತ ಮಾಡಿ ಸರಕಾರ ಪಲಾಯನ ಮಾಡಿದೆ ಎಂದು ದೂರಿದರು.

ಅಧಿವೇಶನ ಆರಂಭಕ್ಕೂ ಮುನ್ನವೇ ಪತ್ರಿಕಾಗೋಷ್ಠಿ ಮಾಡಿ ವಾಲ್ಮೀಕಿ ನಿಗಮ ಹಗರಣದ ಆರೋಪಿ, ನಾಗೇಂದ್ರರನ್ನು ಸಂಪುಟದಿಂದ ಕೈಬಿಡಿ. ಅಧಿವೇಶನದಲ್ಲಿ ಜನರ ಸಮಸ್ಯೆ ಚರ್ಚೆಗೆ ಅವಕಾಶ ನೀಡಿ ಎಂದು ಹೇಳಿದ್ದೆವು. ಆದರೆ ಹಾಗೆ ಮಾಡದೆ ಸರಕಾರ ಅಧಿವೇಶನ ಮೊಟಕು ಮಾಡಿ ಓಡಿ ಹೋಗಿದೆ ಎಂದು ಅವರು ಟೀಕಿಸಿದರು.

ಸಮಯ ವ್ಯರ್ಥ:

ಅಧಿವೇಶನದಲ್ಲಿ ರಾಜ್ಯದ ಸಮಸ್ಯೆಗಳಿಗೆ ಅವಕಾಶ ನೀಡದೆ ಸರಕಾರ ಸಮಯ ವ್ಯರ್ಥ ಮಾಡಿದೆ. ಇತ್ತೀಚೆಗೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನ ನೀಡುತ್ತಿಲ್ಲ. ಕಲ್ಯಾಣ ಯೋಜನೆ ನೀಡುತ್ತಿಲ್ಲ. ಈ ಎಲ್ಲವೂಗಳ ಕುರಿತ ಚರ್ಚೆಗೆ ಸರಕಾರ ಅವಕಾಶ ನೀಡಲಿಲ್ಲ ಎಂದು ದೂರಿದರು.

ಈ ವೇಳೆ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕ ಡಾ.ಸಿ.ಎನ್. ಅಶ್ವಥನಾರಾಯಣ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ಧನ ರೆಡ್ಡಿ, ರಾಜುಗೌಡ, ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ಪ್ರಭುಚೌಹಾಣ್, ಡಾ.ಶೈಲೇಂದ್ರ ಬೆಲ್ದಾಳೆ, ಮಾನಪ್ಪ ಡಿ.ವಜ್ಜಲ್, ಡಾ.ಎಸ್. ಶಿವರಾಜ್ ಪಾಟೀಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor