ಬೀದಿ ಬದಿ ವ್ಯಾಪಾರ ತೆರವುಗೊಳಿಸುವಂತೆ ಸುಪ್ರಿಂ ಕೋರ್ಟ್ ಆದೇಶ ಮಾಡಿಲ್ಲ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸ್ಪಷ್ಟನೆ
Photo credit: PTI
ಬೆಂಗಳೂರು: ಯಾವುದೇ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಲು ಸುಪ್ರಿಂ ಕೋರ್ಟ್ ಆದೇಶಿಸಿಲ್ಲ. ಬೀದಿ ಬದಿ ವ್ಯಾಪಾರಸ್ಥರ ಬದುಕುವ ಹಕ್ಕು ಮತ್ತು ಹಿತರಕ್ಷಣಾ ಕಾಯ್ದೆಯ ನಿಯಮವನ್ನು ರಾಜ್ಯ ಸರಕಾರ ಪಾಲಿಸಬೇಕು. ಆ ಕಾಯ್ದೆಯ ವಿರುದ್ಧ ಯಾವುದೇ ವ್ಯಾಪಾರಸ್ಥರನ್ನು ಅಕ್ರಮವಾಗಿ ತೆರವುಗೊಳಿಸುವಂತಿಲ್ಲ. ಏಕಾಏಕಿ ವ್ಯಾಪಾರಸ್ಥರನ್ನು ತೆರವುಗೊಳಿಸಿ ಎಂಬ ವ್ಯಾಖ್ಯಾನವನ್ನು ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಮಾಡಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ರಾಜ್ಯ ಸರ್ಕಾರಕ್ಕೆ ಹೇಳಿದೆ.
ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಇತರರ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹೂಡಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ಕೋರಿದ ಅರ್ಜಿಯ ವಿಚಾರಣೆ ಇಂದು ನಡೆಯಿತು.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಪಾಲಿಸುವ ಸಲುವಾಗಿ ಮಂಗಳೂರು ಟೌನ್ ಹಾಲ್ ಸಮೀಪದ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ನಡೆಸುತ್ತಿತ್ತು. ಈ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಇತರ ಪದಾಧಿಕಾರಿಗಳು ತಡೆದಿದ್ದರು. ಹಾಗಾಗಿ ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತ (ಪ್ರಭಾರ)ರಾದ ಭಾರತಿಯವರು, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಪ್ರಶ್ನಿಸಿ ಬಿ.ಕೆ. ಇಮ್ತಿಯಾಝ್ ಪರ ಹಿರಿಯ ವಕೀಲ ಎಸ್ ಬಾಲನ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಎಸ್ ಬಾಲನ್ ಅವರು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ "ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಬಿ.ಕೆ. ಇಮ್ತಿಯಾಝ್ ಮತ್ತು ಇತರರು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇಡೀ ಘಟನೆ ವಿಡಿಯೋದಲ್ಲಿ ದಾಖಲಾಗಿದೆ. ಆ ವಿಡಿಯೋದಲ್ಲಿ ಇಮ್ತಿಯಾಝ್ ಅವರು ಕೇವಲ ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸದೆ ತೆರವು ಕಾರ್ಯಾಚರಣೆ ಮುಂದುವರಿಸಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿರುವುದು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಂಡೇ ಬಜಾರ್‌ನ ಬೀದಿ ವ್ಯಾಪಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇಡೀ ದೂರಿನಲ್ಲಿ ಎಲ್ಲೂ ಕೂಡಾ ಹಲ್ಲೆಗೆ ಒಳಗಾದ ವ್ಯಕ್ತಿಯ ಗುರುತು, ಹಲ್ಲೆಯ ಸ್ವರೂಪ ಅಥವಾ ಯಾವುದೇ ಗಾಯ ಸಂಭವಿಸಿರುವ ಕುರಿತು ಯಾವುದೇ ವಿವರಗಳಿಲ್ಲ. ಆದ್ದರಿಂದ, ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 132 ಮತ್ತು 115(2)ರ ಮೂಲಭೂತ ಅಂಶಗಳು ಇಲ್ಲಿ ಅನ್ವಯವಾಗುವುದಿಲ್ಲ" ಎಂದು ವಿವರಿಸಿದ್ದಾರೆ.
"ಮಹಾನಗರ ಪಾಲಿಕೆಯು ಸಂಡೇ ಬಜಾರ್‌ನ ಬೀದಿ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳಿಗೆ ಯಾವುದೇ ನೋಟಿಸ್ ನೀಡದೆ ಅಥವಾ ವಿಚಾರಣೆಗೆ ಅವಕಾಶ ನೀಡದೆ ತೆರವು ಮತ್ತು ಧ್ವಂಸ ಕಾರ್ಯಾಚರಣೆ ನಡೆಸಿದೆ. ಈ ಕ್ರಮವು ನೈಸರ್ಗಿಕ ನ್ಯಾಯದ ತತ್ವಗಳಿಗೆ ಹಾಗೂ Street Vendors (Protection of Livelihood and Regulation of Street Vending) Act, 2014 ಅಡಿಯಲ್ಲಿ ನಿಗದಿಪಡಿಸಿರುವ ಕಾನೂನುಬದ್ಧ ಪ್ರಕ್ರಿಯೆಗೆ ವಿರುದ್ಧವಾಗಿದೆ" ಎಂದು ಬಾಲನ್ ವಿವರಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ "ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ, ಯಾವ ತೀರ್ಪಿನ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿಲ್ಲ. ನಮಗೆ ತಿಳಿದಿರುವ ಪ್ರಕಾರ, ಅಧಿಕಾರಿಗಳು Maniyar Iliyaz v. P. Ayyappan & Others, Civil Appeal Nos. 4665-4666 of 2025 ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಆಧಾರವಾಗಿಸಿಕೊಂಡಿದ್ದಾರೆ. ಈ ತೀರ್ಪು ಪಾದಚಾರಿಗಳ ಹಕ್ಕನ್ನು ರಕ್ಷಿಸುವುದಕ್ಕೆ ಸಂಬಂಧಿಸಿದ್ದು, ರಾಜ್ಯ ಮತ್ತು ಸ್ಥಳೀಯ ಪ್ರಾಧಿಕಾರಗಳು ಸೂಕ್ತ ಪಾದಚಾರಿ ಮೂಲಸೌಕರ್ಯವನ್ನು ಒದಗಿಸಿ ನಿರ್ವಹಿಸಬೇಕು ಎಂದು ನಿರ್ದೇಶಿಸುತ್ತದೆ. ಈ ತೀರ್ಪು ಬೀದಿ ವ್ಯಾಪಾರಿಗಳು ಅಥವಾ ವಾರದ ಮಾರುಕಟ್ಟೆಗಳನ್ನು ತೆರವುಗೊಳಿಸುವಂತೆ ನಿರ್ದೇಶಿಸುವುದಿಲ್ಲ. ಅಲ್ಲದೆ, Street Vendors Act, 2014 ಅಡಿಯಲ್ಲಿ ನಿಗದಿಪಡಿಸಿರುವ ಕಾನೂನುಬದ್ಧ ಪ್ರಕ್ರಿಯೆಯಿಂದ ವಿನಾಯಿತಿಯನ್ನೂ ನೀಡುವುದಿಲ್ಲ. ಆದ್ದರಿಂದ, ಸಂಡೇ ಬಜಾರ್‌ನ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮೇಲ್ಕಂಡ ತೀರ್ಪಿನ ಮೇಲೆ ಅವಲಂಬಿಸಿರುವುದು ಸಂಪೂರ್ಣವಾಗಿ ತಪ್ಪು ವ್ಯಾಖ್ಯಾನವಾಗಿದೆ" ಎಂದು ಹಿರಿಯ ವಕೀಲ ಎಸ್ ಬಾಲನ್ ಅರ್ಜಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
"Street Vendors (Protection of Livelihood and Regulation of Street Vending) Act, 2014 ಜಾರಿಯಲ್ಲಿದ್ದು, ಬೀದಿ ವ್ಯಾಪಾರಿಗಳ ಹಕ್ಕುಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಇಂದಿಗೂ ಅನ್ವಯಿಸುತ್ತದೆ. ಯಾವುದೇ ಬೀದಿ ವ್ಯಾಪಾರಿಯನ್ನು ತೆರವುಗೊಳಿಸುವ ಅಥವಾ ಸ್ಥಳಾಂತರಿಸುವ ಮೊದಲು ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಮೇಲ್ಕಂಡ ತೀರ್ಪನ್ನು ಆಧಾರವಾಗಿಸಿಕೊಂಡು ಪ್ರತಿವಾದಿ ಅಧಿಕಾರಿಗಳು ಈ ಕಾನೂನುಬದ್ಧ ರಕ್ಷಣೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಂಡೇ ಬಜಾರ್ ವಾರಕ್ಕೆ ಕೇವಲ ಒಂದು ದಿನ ನಡೆಯುವ ವಾರದ ಮಾರುಕಟ್ಟೆಯಾಗಿದೆ. ಇಲ್ಲಿ ಶಾಶ್ವತ ಕಟ್ಟಡಗಳು ಅಥವಾ ಶಾಶ್ವತ ಅತಿಕ್ರಮಣಗಳು ಇರುವುದಿಲ್ಲ. ಇಂತಹ ತಾತ್ಕಾಲಿಕ ವ್ಯಾಪಾರ ಚಟುವಟಿಕೆಯನ್ನು ಶಾಶ್ವತ ಅಕ್ರಮ ಅತಿಕ್ರಮಣವೆಂದು ಪರಿಗಣಿಸುವುದು Street Vendors Act, 2014ರ ಉದ್ದೇಶ ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದೆ " ಎಂದು ಎಸ್ ಬಾಲನ್ ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.
"ಬಿ.ಕೆ. ಇಮ್ತಿಯಾಝ್ ಅವರು ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಮಹಾನಗರ ಪಾಲಿಕೆಯ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಈಗಾಗಲೇ ಪೂರ್ಣಗೊಳಿಸಿದ್ದರು. ಹಾಗಾಗಿ ಅಡ್ಡಿಪಡಿಸುವ ಪ್ರಶ್ನೆಯೇ ಇರುವುದಿಲ್ಲ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.
"ಬಿ ಕೆ ಇಮ್ತಿಯಾಜ್ ಅವರು ದಕ್ಷಿಣ ಕನ್ನಡ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾಗಿದ್ದು, ಬೀದಿ ವ್ಯಾಪಾರಿಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ರಚಿಸಲಾದ ನೋಂದಾಯಿತ ಸಂಘಟನೆಯಾಗಿದೆ. ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನು ಅನುಸರಿಸದೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡುವ ಉದ್ದೇಶದಿಂದ ಹಾಗೂ ಸಂಘದ ಪ್ರತಿನಿಧಿಗಳಾಗಿ ಅವರು ಸ್ಥಳದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವಿಪರ್ಯಾಸ ಎಂದರೆ, ಬಿ.ಕೆ. ಇಮ್ತಿಯಾಝ್ ವಿರುದ್ದ ಎಫ್ಐಆರ್ ದಾಖಲಿಸಿದ ಬಳಿಕ ಮಹಾನಗರ ಪಾಲಿಕೆಯು ದಕ್ಷಿಣ ಕನ್ನಡ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘವನ್ನು ಸಭೆಗೆ ಆಹ್ವಾನಿಸಿ ನೋಟಿಸ್ ನೀಡಿದೆ. ಈ ಸಭೆಯ ಉದ್ದೇಶ ಬೀದಿ ವ್ಯಾಪಾರಿಗಳ ಅಹವಾಲುಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸುವುದಾಗಿತ್ತು. ಹೀಗಾಗಿ, ಮಹಾನಗರ ಪಾಲಿಕೆಯೇ ಅರ್ಜಿದಾರರ ಸಂಘವನ್ನು ಬೀದಿ ವ್ಯಾಪಾರಿಗಳ ಪ್ರತಿನಿಧಿ ಸಂಸ್ಥೆಯಾಗಿ ಗುರುತಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಬೀದಿ ವ್ಯಾಪಾರಿಗಳ ಪರವಾಗಿ ಅವರ ಸಮಸ್ಯೆಗಳನ್ನು ಹಾಗೂ ಅಹವಾಲುಗಳನ್ನು ಮುಂದಿಟ್ಟ ಅದೇ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೃತ್ಯಗಳ ಆರೋಪ ಮಾಡಿರುವುದು ಕ್ರಿಮಿನಲ್ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ" ಎಂದು ಹಿರಿಯ ವಕೀಲ ಎಸ್ ಬಾಲನ್ ಅವರು ಅರ್ಜಿಯಲ್ಲಿ ವಾದಿಸಿದ್ದಾರೆ.
ವಕೀಲೆ ರಕ್ಷಿತಾ ಸಿಂಗ್ ವಾದ ಆಲಿಸಿದ ಹೈಕೋರ್ಟ್ "ಸುಪ್ರಿಂ ಕೋರ್ಟ್ ಆದೇಶ ಇರುವುದು ಕೇವಲ ರಸ್ತೆಗಳ ಜೊತೆಗೆ ಸೂಕ್ತ ಪುಟ್ ಪಾತ್ ಇರಬೇಕು ಎಂದು ಮಾತ್ರ. ಸುಪ್ರಿಂ ಕೋರ್ಟ್ ಯಾವತ್ತೂ ಕೂಡಾ ಬೀದಿ ಬದಿ ವ್ಯಾಪಾರಸ್ಥರ ಹಿತರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸಿಲ್ಲ. ಹಾಗಾಗಿ ಬೀದಿ ಬದಿ ವ್ಯಾಪಾರಸ್ಥರಿಗೆ ಬೀದಿಯಲ್ಲಿ ವ್ಯಾಪಾರ ಮಾಡುವ ಹಕ್ಕು ಇದೆ. ಆ ಸಂಬಂಧ ಪುನರ್ವಸತಿಯ ಎಲ್ಲಾ ವ್ಯವಸ್ಥೆ, ಕಾನೂನು ಪಾಲಿಸಿ ಮಾತ್ರ ತೆರವು ಮಾಡಬೇಕು. ಈಗ ಮಾಡಿರುವುದು ಸರಿಯಲ್ಲ" ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ರಾಜ್ಯ ಸರ್ಕಾರಕ್ಕೆ ಸೂಚಿಸಿದರು.