ಬೆಂಗಳೂರಿನ ಪಿಎಚ್‌ಡಿ ವಿದ್ಯಾರ್ಥಿನಿಯ ಸಿನಿಮೀಯ ಹತ್ಯೆಯನ್ನು ಪೊಲೀಸರು ಭೇದಿಸಿದ್ದು ಹೇಗೆ?
Photo | indianexpress
ಬೆಂಗಳೂರು: ಚಾಣಾಕ್ಷ ಪಿಎಚ್‌ಡಿ ವಿದ್ಯಾರ್ಥಿಯೋರ್ವ ಕ್ರೈಮ್ ಥ್ರಿಲ್ಲರ್ ಚಲನಚಿತ್ರವೊಂದರಿಂದ ಪ್ರೇರಿತಗೊಂಡು ತನ್ನನ್ನು ಪ್ರೀತಿಸುತ್ತಿದ್ದ ಗೆಳತಿಯನ್ನು ನಿರ್ದಯವಾಗಿ ಹತ್ಯೆಗೈದಿದ್ದದ್ದ. ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಯಿತು. ಹೌದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆದಿದ್ದ ಬಿಎಸ್ಸಿ ಪದವೀಧರೆಯೋರ್ವಳ ಹತ್ಯೆ ಪ್ರಕರಣ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿರದಿದ್ದರೂ, ವ್ಯವಸ್ಥಿತವಾಗಿ ನಡೆಸಿದ್ದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದರು.
ವಿಶ್ವವಿದ್ಯಾಲಯದ ಚಿನ್ನದ ಪದಕ ವಿಜೇತನಾಗಿದ್ದ ಆರೋಪಿಯು, ಪೊಲೀಸರಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ತಲೆ ಮರೆಸಿಕೊಳ್ಳಲು ಜಾಣ್ಮೆ ಹಾಗೂ ಸಿನಿಮೀಯ ತಂತ್ರಗಳನ್ನು ಬಳಸಿದ್ದ.
►ಮೃತದೇಹ ಪತ್ತೆ ಮತ್ತು ನಾಪತ್ತೆ ದೂರು
2015ರ ಮೇ 30ರಂದು ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ಗಬ್ಬೂರ್ ಕ್ರಾಸ್ ಬಳಿಯ ಹೊಲವೊಂದರಲ್ಲಿ 20ರ ಹರೆಯದ ಯುವತಿಯೋರ್ವಳ ಅರ್ಧ ಹೂತು ಹಾಕಿದ ಮೃತದೇಹ ಝಾಕೀರ್ ಹುಸೈನ್ ಎಂಬ ರೈತನ ಕಣ್ಣಿಗೆ ಬಿದ್ದಿತ್ತು.
ಯುವತಿಯ ಮೃತದೇಹದ ಮುಖ ಸೇರಿದಂತೆ ದೇಹದ ವಿವಿಧ ಭಾಗಗಳನ್ನು ನಾಯಿಗಳು ತಿಂದು ಹಾಕಿತ್ತು. ಮೃತದೇಹ ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು ಎಂದು ತನಿಖೆಯ ಭಾಗವಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. “ಸಾಮಾನ್ಯವಾಗಿ ರೈತರು ತಮ್ಮ ಹೊಲಗಳಿಗೆ ತೆರಳಲು ಈ ರಸ್ತೆಯನ್ನು ಬಳಸುತ್ತಾರೆ. ಆದರೆ, ಅದು ಬೇಸಿಗೆಯಾಗಿದ್ದರಿಂದ, ಸಾಕಷ್ಟು ಮಂದಿ ಆ ರಸ್ತೆಯನ್ನು ಬಳಸುತ್ತಿರಲಿಲ್ಲ. ಅಲ್ಲದೆ, ಅಲ್ಲಿ ಒಂದೆರಡು ದಿನ ಮಳೆಯೂ ಆಗಿತ್ತು. ಮೃತ ದೇಹದ ಪತ್ತೆಯ ಕುರಿತು ಕಸಬಾಪೇಟ್ ಪೊಲೀಸರು ಮಾಹಿತಿ ಸ್ವೀಕರಿಸುತ್ತಿದ್ದಂತೆಯೆ, ನಾವು ಈ ಮಾಹಿತಿಯನ್ನು ನಗರದ ಇನ್ನಿತರ ಪೊಲೀಸ್ ಠಾಣೆಗಳಿಗೂ ರವಾನಿಸಿದ್ದೆವು” ಎಂದು ಅವರು ಹೇಳಿದರು.
ಹೀಗಿದ್ದೂ, ನಮಗೆ ಯಾವುದೇ ಸುಳಿವು ದೊರೆಯಲಿಲ್ಲ. ಈ ಪ್ರಾಂತ್ಯದಲ್ಲಿ ಯಾರಾದರೂ ನಾಪತ್ತೆಯಾದ ವ್ಯಕ್ತಿಗಳ ಕುರಿತು ದೂರು ಸಲ್ಲಿಸಲು ಬರಬಹುದು ಎಂಬ ನಿರೀಕ್ಷೆಯಲ್ಲಿ ಪೊಲೀಸರು ಮೃತದೇಹವನ್ನು ಸಂರಕ್ಷಿಸಿಟ್ಟಿದ್ದರು. 2015ರ ಜೂನ್ 11ರಂದು ಧಾರವಾಡ ಉಪನಗರ ಪೊಲೀಸರನ್ನು ಸಂಪರ್ಕಿಸಿದ್ದ ವಿಜಯಪುರ ನಿವಾಸಿ ಗಿರಿಮಲ್ಲ ಬಿರಾದಾರ್ ನನ್ನ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ದೂರು ಸಲ್ಲಿಸಿದರು.
ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ ಅರ್ಪಿತಾ ಗಿರಿಮಲ್ಲ(24) 2014ರ ಅಕ್ಟೋಬರ್ 29ರಂದು ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದರು.
ಈ ಕುರಿತು ದೂರನ್ನೇಕೆ ವಿಳಂಬವಾಗಿ ದಾಖಲಿಸಲಾಗಿದೆ ಎಂದು ಪ್ರಶ್ನಿಸಿದಾಗ, ನಮ್ಮ ಕುಟುಂಬವು ಆರಂಭದಲ್ಲಿ ಪೊಲೀಸರನ್ನು ಸಂಪರ್ಕಿಸಲು ಬಯಸಲಿಲ್ಲ ಎಂದು ಗಿರಿಧರ್ ಗಿರಿಮಲ್ಲ ಬಿರಾದಾರ್ ಹೇಳಿದರು.
ಪೊಲೀಸರು ಈಗಾಗಲೇ ಸಂರಕ್ಷಿಸಿಟ್ಟಿದ್ದ ಮೃತ ದೇಹವನ್ನು ಗುರುತಿಸುವಂತೆ ಗಿರಿಧರ್ ಗಿರಿಮಲ್ಲ ಬಿರಾದಾರ್ ಗೆ ಸೂಚಿಸಿದರು. ಅವರು ಮೃತದೇಹದ ಮೈ ಮೇಲಿದ್ದ ಚಿನ್ನದ ಸರದ ಲಾಕೆಟ್, ಉಡುಪನ್ನು ಗುರುತಿಸಿ ಇದು ನನ್ನ ಪುತ್ರಿಯ ಮೃತದೇಹ ಎಂದು ಗುರುತು ಪತ್ತೆ ಹಚ್ಚಿದರು. ತಕ್ಷಣ ಈ ಕುರಿತು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಅರ್ಪಿತಾಳ ಮೃತದೇಹ ದೊರೆತ ಸ್ಥಳದಲ್ಲಾಗಲಿ ಅಥವಾ ಆಕೆ ತನ್ನ ಸ್ನೇಹಿತನೊಂದಿಗೆ ಉಳಿದುಕೊಂಡಿದ್ದ ಕೊಠಡಿಯಲ್ಲಾಗಲಿ ಆಕೆಯ ಮೊಬೈಲ್ ಪೋನ್ ಪತ್ತೆಯಾಗಲಿಲ್ಲ ಎಂದು ಅವರು ಹೇಳಿದರು.
►ತಾರ್ಕಿಕ ಅಂತ್ಯ ತಲುಪಿದ ಪ್ರಕರಣ
ಪ್ರತ್ಯಕ್ಷದರ್ಶಿಗಳು ಅಥವಾ ಯಾವುದೇ ಸುಳಿವಿಲ್ಲದೆ ಕಸಬಾಪೇಟ್ ಪೊಲೀಸರು, ಅರ್ಪಿತಾಳ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಸಹಪಾಠಿಗಳನ್ನು ವಿಚಾರಿಸಲು ಪ್ರಾರಂಭಿಸಿದರು. ಅರ್ಪಿತಾ ತನ್ನ ಮಾಜಿ ಸಹಪಾಠಿಯಾದ ವಿಜಯಪುರದ ನಿವಾಸಿಯೇ ಆದ ಅರುಣ್ ಶಿವಲಿಂಗಪ್ಪ ಪಾಟೀಲ್ ಎಂಬ ಹೆಸರಿನ ವ್ಯಕ್ತಿಗೆ ಪದೇ ಪದೇ ಕರೆ ಮಾಡಿರುವುದನ್ನು ಬಿಟ್ಟರೆ, ಕರೆ ದಾಖಲೆ ತೆಗೆದಾಗಲೂ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ.
ಅರುಣ್ ಶಿವಲಿಂಗಪ್ಪ ಪಾಟೀಲ್(23) ಎಂಬಾತ ಪ್ರತಿಭಾವಂತನಾಗಿದ್ದ. ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದಲ್ಲಿ ಚಿನ್ನದ ಪದಕ ವಿಜೇತನಾಗಿದ್ದ ಹಾಗೂ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕ್ಯಾಂಪಸ್ ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಎಂದು ಅವರು ಹೇಳಿದರು.
ಅರುಣ್ ಶಿವಲಿಂಗಪ್ಪ ಪಾಟೀಲ್‌ನನ್ನು ವಿಚಾರಣೆಗೊಳಪಡಿಸಿದಾಗ, ಆತನ ಉತ್ತರಗಳು ಸಮಾಧಾನಕರವಾಗಿದ್ದವು ಎಂದು ಆಗ ಕಸಬಾಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಮಾರುತಿ ಎಸ್. ಗುಲ್ಲಾರಿ ತಿಳಿಸಿದರು.
“ನನಗೀಗಲೂ ನೆನಪಿದೆ. ನಾವು ಮೊದಲ ಬಾರಿಗೆ ಆತನನ್ನು ವಿಚಾರಣೆಗೆ ಕರೆದಾಗ, 2015ರ ಮೇ 28ರಂದು ನೀನು ಎಲ್ಲಿದ್ದೆ ಎಂದು ನಾವು ಆತನನ್ನು ಪ್ರಶ್ನಿಸಿದೆವು. ಈ ವೇಳೆ ನಾನು ಬೆಂಗಳೂರಿನಲ್ಲಿದ್ದೆ ಎಂದು ಆತ ಹೇಳಿದ್ದಾನೆ. ಮೊಬೈಲ್ ಲೊಕೇಶನ್ ಕೂಡಾ ಅದೇ ಸ್ಥಳವನ್ನು ತೋರಿಸಿತು. ಕಾಲೇಜು ಹಾಜರಾತಿ ದಾಖಲೆಯನ್ನು ಪರಿಶೀಲಿಸಿದಾಗ, ಆತ ತರಗತಿಗೆ ಹಾಜರಾಗಿದ್ದುದು ಕಂಡು ಬಂದಿತು. ಅರ್ಪಿತಾ ನನಗೆ ಆತ್ಮೀಯ ಸ್ನೇಹಿತೆಯಾಗಿದ್ದರೂ, ನಮ್ಮಿಬ್ಬರ ನಡುವೆ ಯಾವುದೇ ಪ್ರೇಮ ಸಂಬಂಧಗಳಿರಲಿಲ್ಲ ಎಂದೂ ಆತ ತಿಳಿಸಿದ. ಆತ ತನ್ನ ಉತ್ತರಗಳಲ್ಲಿ ಸ್ಥಿರವಾಗಿದ್ದ ಹಾಗೂ ಆ ಹಂತದಲ್ಲಿ ನಾವು ಆತನನ್ನು ಸಂಶಯಿಸಲು ಯಾವುದೇ ಕಾರಣ ಅಥವಾ ಸಾಕ್ಷ್ಯಗಳಿರಲಿಲ್ಲ” ಎಂದು ಮಾರುತಿ ಎಸ್. ಗುಲ್ಲಾರಿ ಹೇಳಿದರು.
“ಮೃತದೇಹದಲ್ಲಿ ಚಿನ್ನದ ಸರ ಪತ್ತೆಯಾಗಿದ್ದರಿಂದ ಇದು ಕಳ್ಳತನಕ್ಕಾಗಿ ಮಾಡಿರುವ ಹತ್ಯೆಯಲ್ಲ ಎಂಬುದು ನಮಗೆ ಅರಿವಾಯಿತು. ಆದರೆ, ಆಕೆಯ ಮೊಬೈಲ್ ಫೋನ್ ಸಿಗದ ಕಾರಣ ನಾವು ಅತ್ಯುತ್ತಮ ಸಾಕ್ಷಿಯೊಂದನ್ನು ಕಳೆದುಕೊಂಡಿದ್ದೆವು” ಎಂದು ಅವರು ತಿಳಿಸಿದರು.
ಆದರೆ, ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ಪ್ರಕರಣದ ತನಿಖೆ ಮುಂದುವರಿಸಲು 2015ರ ಆಗಸ್ಟ್ 30ರಂದು ನಡೆದ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣ ಪ್ರಮುಖ ಹಿನ್ನಡೆಯಾಯಿತು ಎಂದು ಅವರು ಹೇಳಿದರು.
“ಕಲಬುರ್ಗಿ ಹತ್ಯೆ ಪ್ರಕರಣ ತುಂಬಾ ಮಹತ್ವದ್ದಾಗಿದ್ದರಿಂದ, ಅದರ ತನಿಖೆಯನ್ನು ನಡೆಸಲು ಎಲ್ಲಾ ಸಂಪನ್ಮೂಲಗಳನ್ನು ಬಳಸಲಾಯಿತು. ಹೀಗಾಗಿ, ಅರ್ಪಿತಾ ಹತ್ಯೆ ಪ್ರಕರಣಕ್ಕೆ ಕೊಂಚ ಮಟ್ಟಿಗೆ ಹಿನ್ನಡೆಯಾಯಿತು. ಸಂಭನೀಯ ಸಾಕ್ಷ್ಯವನ್ನು ಸಂಗ್ರಹಿಸಲು ಪೊಲೀಸರು ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕ್ರೈಮ್ ಥ್ರಿಲ್ಲರ್ ‘ದೃಶ್ಯ’ ಚಲನಚಿತ್ರದಿಂದ ಪ್ರೇರಿತಗೊಂಡು ಹತ್ಯೆ
“ಅರುಣ್ ಶಿವಲಿಂಗಪ್ಪ ಪಾಟೀಲ್ ಪ್ರಕಾರ, ಆತ ಅರ್ಪಿತಾಳ ಒಳ್ಳೆಯ ಸ್ನೇಹಿತನಾಗಿದ್ದ ಹಾಗೂ ಯಾವಾಗಲೂ ಆಕೆಯ ಕರೆ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದ. ಆದರೆ, ಅರುಣ್ ಕರೆಗಳನ್ನು ವಿಶ್ಲೇಷಣೆಗೊಳಪಡಿಸಿದಾಗ, ಅರ್ಪಿತಾಳ ಹತ್ಯೆ ಪ್ರಕರಣ ಬೆಳಕಿಗೆ ಬಂದ 2015ರ ಮೇ 28ರಂದು ಆತ ಆರ್ಪಿತಾಳಿಂದ ಯಾವುದೇ ಕರೆಗಳನ್ನು ಸ್ವೀಕರಿಸಿರಲಿಲ್ಲ ಅಥವಾ ಆಕೆಗೆ ಯಾವುದೇ ಕರೆಯನ್ನಾಗಲಿ, ಆಕೆಯ ಸಂದೇಶಗಳಿಗೆ ಪ್ರತಿಕ್ರಿಯೆಯನ್ನಾಗಲಿ ನೀಡಿಲ್ಲ ಎಂಬ ಸಂಗತಿ ನಮ್ಮ ಗಮನಕ್ಕೆ” ಎಂದು ಮಾರುತಿ ಎಸ್. ಗುಲ್ಲಾರಿ ತಿಳಿಸಿದರು.
“ಅರುಣ್ ಆಕೆಯ ಯಾವುದೇ ಕರೆಯನ್ನು ತಪ್ಪಿಸಿಕೊಳ್ಳದೆ ಇರುತ್ತಿದ್ದುದರಿಂದ, ಇದು ತುಂಬಾ ಕುತೂಹಲಕಾರಿ ಸಂಗತಿಯಾಗಿತ್ತು. ಹೀಗಾಗಿ, ನಾವು ಬೆಂಗಳೂರಿನಲ್ಲಿನ ಅರುಣ್ ಕೊಠಡಿಯನ್ನು ಪರಿಶೀಲಿಸಲು ನಿರ್ಧರಿಸಿದೆವು ಹಾಗೂ ಅದರಿಂದ ಆತ ಆಶ್ಚರ್ಯಚಕಿತನಾದ. ನಾವು ಬೆಂಗಳೂರಿಗೆ ತೆರಳಿ, ಆತನ ಕೊಠಡಿಯ ತಪಾಸಣೆ ನಡೆಸಿದಾಗ, ಆತ ತನಿಖಾ ವಿವರಗಳು ಹಾಗೂ ಪೊಲೀಸರ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ವಿವರಗಳನ್ನೊಳಗೊಂಡ ದಿನಚರಿಯನ್ನು ಬರೆದಿಟ್ಟಿರುವುದು ಕಂಡು ಬಂದಿತು” ಎಂದು ಅವರು ಹೇಳಿದರು.
“ಇದರಿಂದಾಗಿ, ಹತ್ಯೆಯಲ್ಲಿ ಅರುಣ್ ಶಿವಲಿಂಗಪ್ಪ ಪಾಟೀಲ್ ಭಾಗಿಯಾಗಿರುವುದು ಸ್ಪಷ್ಟವಾಯಿತು. ನಂತರ, ಆತನನ್ನು ವಶಕ್ಕೆ ಪಡೆದು, ಬೆರಳಚ್ಚು ಗುರುತು ಹಾಗೂ ಅರ್ಪಿತಾ ಮೃತದೇಹದಿಂದ ಸಂಗ್ರಹಿಸಲಾಗಿದ್ದ ಡಿಎನ್ಎಯನ್ನು ಹೋಲಿಕೆ ಮಾಡಲು ಆತನನ್ನು ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದೆವು” ಎಂದೂ ಅವರು ತಿಳಿಸಿದರು. ಆಗ ಅರುಣ್ ಶಿವಲಿಂಗಪ್ಪ ಪಾಟೀಲ್‌ಗೆ ಪೊಲೀಸರೆದುರು ತಪ್ಪೊಪ್ಪಿಕೊಳ್ಳದೆ ಬೇರೆ ವಿಧಿಯೇ ಇರಲಿಲ್ಲ ಎಂದೂ ಅವರು ಹೇಳಿದರು.
ಇದಾದ ನಂತರ, ಅಕ್ಟೋಬರ್ 18, 2016ರಂದು ಅರುಣ್ ಶಿವಲಿಂಗಪ್ಪ ಪಾಟೀಲ್‌ನ ಬಂಧನದ ಸುದ್ದಿಯನ್ನು ಹುಬ್ಬಳ್ಳಿ-ಧಾರವಾಡದ ಆಗಿನ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಪ್ರಕಟಿಸಿದರು. ಆರೋಪಿ ಅರುಣ್ ಶಿವಲಿಂಗಪ್ಪ ಪಾಟೀಲ್ 2014ರಲ್ಲಿ ಬಿಡುಗಡೆಯಾಗಿದ್ದ ಕನ್ನಡ ಕ್ರೈಮ್ ಥ್ರಿಲ್ಲರ್ ಚಲನಚಿತ್ರ ‘ದೃಶ್ಯ’ದಿಂದ ಪ್ರೇರಿತನಾಗಿದ್ದ ಎಂದು ಅವರು ಈ ವೇಳೆ ಮಾಹಿತಿ ನೀಡಿದ್ದರು.
ಅಪರಾಧವನ್ನು ವಿವರಿಸಿದ್ದ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, “ಅಕ್ಟೋಬರ್ 29ರಂದು ನನ್ನನ್ನು ಧಾರವಾಡದಲ್ಲಿ ಭೇಟಿಯಾಗುವಂತೆ ಅರುಣ್ ಶಿವಲಿಂಗಪ್ಪ ಪಾಟೀಲ್, ಅರ್ಪಿತಾಳಿಗೆ ಕರೆ ಮಾಡಿದ್ದ. ಆತ ಧಾರವಾಡವನ್ನು ತಲುಪಲು ಸರಕಾರಿ ಬಸ್ ನಲ್ಲಿ ಬೆಂಗಳೂರಿನಿಂದ ಪ್ರಯಾಣಿಸಿದ್ದ. ಆತ ಅರ್ಪಿತಾಳಿಗೆ ಕಾಯಿನ್ ಬೂತ್‌ವೊಂದರಿಂದ ಕರೆ ಮಾಡಿದ್ದ. ನಂತರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಹುಬ್ಬಳ್ಳಿಗೆ ಸಮೀಪವಿರುವ ಉನ್ಕಲ್ ಕೆರೆಗೆ ಇಬ್ಬರು ಕೂಡ ತೆರಳಿದ್ದಾರೆ. ಇಬ್ಬರೂ ಅಲ್ಲಿ ಗಂಟೆಗಟ್ಟಲೆ ಕಾಲ ಕಳೆದಿದ್ದರು. ನಂತರ, ಅವರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸನಿಹವಿರುವ ಗಬ್ಬೂರ್ ಕ್ರಾಸ್ ನತ್ತ ಆಟೋರಿಕ್ಷಾವೊಂದರಲ್ಲಿ ತೆರಳಿದ್ದರು. ರಾತ್ರಿ ಸುಮಾರು 7 ಗಂಟೆಗೆ ಅರ್ಪಿತಾ ಧರಿಸಿದ್ದ ದುಪಟ್ಟಾವನ್ನು ಬಳಸಿ ಆರುಣ್ ಶಿವಲಿಂಗಪ್ಪ ಪಾಟೀಲ್ ಆಕೆಯನ್ನು ಹತ್ಯೆಗೈದಿದ್ದ. ನಂತರ ಆಕೆಯ ಮೃತದೇಹವನ್ನು ಹೊಲವೊಂದರಲ್ಲಿ ಹೂತಿದ್ದ ಆತ ಅದೇ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದ” ಎಂದು ತಿಳಿಸಿದ್ದರು.
ಹತ್ಯೆಯನ್ನು ತುಂಬಾ ಯೋಜಿತವಾಗಿ ಮಾಡಿದ್ದ ರಾಣೆ, ಈ ಕುರಿತು ನಡೆಯಲಿರುವ ತನಿಖೆ ಹಾಗೂ ತನಗೆದುರಾಗಬಹುದಾದ ಪ್ರಶ್ನೆಗಳ ಕುರಿತು ಟಿಪ್ಪಣಿಗಳನ್ನು ಮಾಡಿಕೊಂಡಿದ್ದ ಎಂದು ಪಾಂಡುರಂಗ ರಾಣೆ ಹೇಳಿದ್ದರು.
“ತನ್ನ ಮೊಬೈಲ್ ಫೋನ್‌ಅನ್ನು ತನ್ನ ಕೊಠಡಿಯಲ್ಲಿ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದ ಅರುಣ್, ಒಂದು ದಿನ ಮುಂಚಿತವಾಗಿಯೇ ಅಕ್ಟೋಬರ್ 29, 2015ರಂದು ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ್ದ” ಎಂದು ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಮಾರುತಿ ಎಸ್. ಗುಲ್ಲಾರಿ ತಿಳಿಸಿದರು.
ಹತ್ಯೆಗೆ ಕಾರಣವೇನು ಎಂಬ ಪ್ರಶ್ನೆಗೆ, “ಒಂದೇ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದ ಅರುಣ್ ಶಿವಲಿಂಗಪ್ಪ ಪಾಟೀಲ್ ಹಾಗೂ ಅರ್ಪಿತಾಳ ನಡುವೆ ಪ್ರೇಮ ಸಂಬಂಧವಿತ್ತು. ಅರುಣ್ ಶಿವಲಿಂಗಪ್ಪ ಪಾಟೀಲ್ ಪಿಎಚ್‌ಡಿ ವ್ಯಾಸಂಗಕ್ಕೆ ತೆರಳಿದರೆ, ಅರ್ಪಿತಾ ಶಿಕ್ಷಣದಲ್ಲಿ ಹಿಂದುಳಿದಳು. ನನ್ನನ್ನು ವಿವಾಹವಾಗು ಎಂದು ಆತನ ಮೇಲೆ ಒತ್ತಡ ಹೇರಿದ್ದ ಅರ್ಪಿತಾ, ಒಪ್ಪದಿದ್ದರೆ, ಈ ಸಂಗತಿಯನ್ನು ಪೊಲೀಸರು ಹಾಗೂ ನನ್ನ ಕುಟುಂಬದವರಿಗೆ ತಿಳಿಸುವುದಾಗಿಯೂ ಬೆದರಿಕೆ ಒಡ್ಡಿದ್ದಳು” ಎಂದು ಅವರು ಹೇಳಿದರು.
“ಅರುಣ್ ಶಿವಲಿಂಗಪ್ಪ ಪಾಟೀಲ್, ಅರ್ಪಿತಾ ತನ್ನ ಪಾಲಿಗೆ ಅಡ್ಡಿಯಾಗಲಿದ್ದಾಳೆ ಎಂದು ಭಾವಿಸಿದ್ದ. ಆಕೆ ತನ್ನನ್ನು ವಿವಾಹವಾಗುವಂತೆ ಆತನನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ್ದರಿಂದ ಕಿರಿಕಿರಿಗೊಳಗಾದ ಅರುಣ್ ಶಿವಲಿಂಗಪ್ಪ ಪಾಟೀಲ್ ಆಕೆಯನ್ನು ಹತ್ಯೆಗೈಯ್ಯಲು ನಿರ್ಧರಿಸಿದ” ಎಂದು ಅವರು ತಿಳಿಸಿದರು.
ಅರುಣ್ ಶಿವಲಿಂಗಪ್ಪ ಪಾಟೀಲ್‌ನ ತಂದೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದು, ಆತನ ಸಹೋದರ ಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಕರಣದ ಈಗಿನ ಸ್ಥಿತಿಗತಿ
ಪ್ರಕರಣದಲ್ಲಿ ಬಂಧಿತನಾಗಿದ್ದ ಅರುಣ್ ಶಿವಲಿಂಗಪ್ಪ ಪಾಟೀಲ್ ಇದೀಗ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದು, ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಾರುತಿ ಎಸ್. ಗುಲ್ಲಾರಿ, “ನ್ಯಾಯಾಲಯಕ್ಕೆ ಎಲ್ಲಾ ಅಗತ್ಯ ಸಾಕ್ಷಿಗಳನ್ನು ಸಲ್ಲಿಸಲಾಗಿದೆ. ನ್ಯಾಯಾಲಯಕ್ಕೆ ಅರುಣ್ ಶಿವಲಿಂಗಪ್ಪ ಪಾಟೀಲ್ ಹಾಗೂ ಅರ್ಪಿತಾ ಇಬ್ಬರೂ ಧರಿಸುತ್ತಿದ್ದ ಎ & ಎ ಅಕ್ಷರಗಳನ್ನು ಹೊಂದಿದ್ದ ಉಂಗುರಗಳು ಕೂಡ ಸೇರಿವೆ ಎಂದು ಹೇಳಿದರು.
ಸದ್ಯ ಹುಬ್ಬಳ್ಳಿ-ಧಾರವಾಡ ನಗರದ ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರುತಿ ಎಸ್. ಗುಲ್ಲಾರಿ, ಅರುಣ್ ಶಿವಲಿಂಗಪ್ಪ ಪಾಟೀಲ್ ತುಂಬಾ ಪ್ರತಿಭಾವಂತನಾಗಿದ್ದ ಎನ್ನುವುದನ್ನು ಒಪ್ಪಿಕೊಂಡರು. “ಆತ ಅಧ್ಯಯನ ಮಾಡಲು ಹಾಗೂ ಪರಿಸ್ಥಿತಿಯನ್ನು ವಿಶ್ಲೇಷಿಸಲು ಸಾಕಷ್ಟು ಸಮಯವನ್ನು ವಿನಿಯೋಗಿಸಿದ್ದ” ಎಂದು ಹೇಳಿದರು.
“ಅರುಣ್ ಶಿವಲಿಂಗಪ್ಪ ಪಾಟೀಲ್ ತನ್ನ ಬಂಧನದ ನಂತರ, ತನ್ನ ಶಿಕ್ಷಣವನ್ನು ತೊರೆಯಬೇಕಾಯಿತು. ಆತ ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗುತ್ತಿದ್ದಾನೆ” ಎಂದು ಮತ್ತೋರ್ವ ಪೊಲೀಸ್ ಅಧಿಕಾರಿ ತಿಳಿಸಿದರು.
ಸೌಜನ್ಯ: indianexpress.com