ಉದ್ಯಾನಗಳ ರಕ್ಷಣೆಗೆ ಅಭಿಯಾನ: ವಿಧೇಯಕ ಹಿಂಪಡೆಯಲು ಆರ್.ಅಶೋಕ್ ಒತ್ತಾಯ
"ಉದ್ಯಾನನಗರಿಯ ಉದ್ಯಾನಗಳನ್ನು ನಾಶ ಮಾಡಿದರೆ ದಿಲ್ಲಿಯಂತೆ ಮಾಲಿನ್ಯ ನಗರವಾಗುತ್ತದೆ"
ಬೆಂಗಳೂರು : ರಿಯಲ್ ಎಸ್ಟೇಟ್ ಮಾಫಿಯಾದ ತಾಳಕ್ಕೆ ತಕ್ಕಂತೆ ಕುಣಿಯುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಯಾನಗಳ ಭೂಮಿ ಕಬಳಿಕೆಗೆ ‘ಸರಕಾರಿ ಉದ್ಯಾನವನಗಳ(ಸಂರಕ್ಷಣೆ) (ತಿದ್ದುಪಡಿ) ವಿಧೇಯಕ’ದ ಮೂಲಕ ಅವಕಾಶ ನೀಡಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ವತಿಯಿಂದ ಸೆ.5 ಮತ್ತು 6ರಂದು ಪ್ರತಿಭಟನೆ, ಸಹಿ ಸಂಗ್ರಹ ಅಭಿಯಾನ ನಡೆಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಹಾಗೂ ಪ್ರತಿಪಕ್ಷ ಸೇರಿದಂತೆ ಎಲ್ಲರೂ ಉದ್ಯಾನವನಗಳನ್ನು ರಕ್ಷಿಸಬೇಕು. ಆದರೆ, ಇದೀಗ ಉದ್ಯಾನವನಗಳ ಶೇ.5ರಷ್ಟು ಭೂಮಿ ಎಂದು ಹೇಳಿ ಮುಂದೆ ಅದನ್ನು ಶೇ.50ರಷ್ಟಕ್ಕೆ ಹೆಚ್ಚಿಸಬಹುದು. ಕೆಂಪೇಗೌಡರು ಕಟ್ಟಿದ ಉದ್ಯಾನನಗರಿಯ ಉದ್ಯಾನಗಳನ್ನು ನಾಶ ಮಾಡಿದರೆ ದಿಲ್ಲಿಯಂತೆ ಮಾಲಿನ್ಯ ನಗರವಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿಂದೆ ಕಾಂಗ್ರೆಸ್ ಸರಕಾರ ಪಾರ್ಕ್, ಕ್ರೀಡಾಂಗಣದಲ್ಲಿ ಅನ್ಯ ಉದ್ದೇಶಕ್ಕಾಗಿ ಬಳಸಬಹುದು ಎಂದು ಕಾನೂನು ತಂದಿತ್ತು. ನಂತರ ಹೋರಾಟ ನಡೆದು ಅದನ್ನು ಹಿಂಪಡೆಯಲಾಯಿತು. ಇದೀಗ ಮತ್ತೆ ಅದೇ ಕಾನೂನು ಬರುತ್ತಿದೆ. ಸಿಎಂ ಈ ವಿಧೇಯಕವನ್ನು ವಾಪಸ್ ಪಡೆಯುವುದಿಲ್ಲ, ಚರ್ಚೆಗೆ ಅವಕಾಶ ನೀಡುತ್ತೇವೆ ಎಂದು ಸರಕಾರ ಹೇಳಿದೆ. ಚರ್ಚೆ ಬೇಕಿಲ್ಲ, ಮಸೂದೆ ಅನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಸುರಂಗ ರಸ್ತೆ ಯೋಜನೆಯಲ್ಲಿ ಪಾರ್ಕಿಂಗ್ ಅಗತ್ಯವಿಲ್ಲ. ಮಾಲ್ ನಿರ್ಮಿಸಲು ಲಾಲ್‍ಬಾಗ್ ಜಾಗವನ್ನು ಬಳಸಲು ನಿರ್ಧರಿಸಿದ್ದಾರೆ. ಯೋಜನೆ ಗುತ್ತಿಗೆ ಪಡೆದಿರುವ ಗೌತಮ್ ಅದಾನಿಯನ್ನು ಮನೆಗೆ ಕರೆಸಿ ತಿಂಡಿ ತಿನ್ನಿಸಿ ಕಳುಹಿಸಿದ್ದಾರೆ. ದಿಲ್ಲಿಯಲ್ಲಿ ರಾಹುಲ್ ಗಾಂಧಿ ಅದೇ ಅದಾನಿಯನ್ನು ಟೀಕೆ ಮಾಡುತ್ತಾರೆ. ಉದ್ಯಾನವನಗಳ ರಕ್ಷಣೆ ಮತ್ತು ಸುರಂಗ ರಸ್ತೆ ಯೋಜನೆ ವಿರೋಧಿಸಿ ಸೆ.5 ಮತ್ತು 6ರಂದು ಪ್ರತಿಭಟನೆ, ಸಹಿ ಸಂಗ್ರಹ ಅಭಿಯಾನ ನಡೆಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಚಿವರ ರಾಜೀನಾಮೆ: ಕೆಆರ್‌ಐಡಿಎಲ್‍ನಲ್ಲಿ ಶೇ.7ರಷ್ಟು ಲಂಚ ಪಡೆಯುತ್ತಿರುವ ಇಬ್ಬರು ಸಚಿವರನ್ನು ಕೂಡಲೇ ವಜಾ ಮಾಡಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಯಾರಾದರೂ ಲಂಚ ಪಡೆದರೆ ನನಗೆ ಕರೆ ಮಾಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದೀಗ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಪತ್ರ ಬರೆದು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಶಾಸಕರೇ ಮಾಡಿರುವ ಆರೋಪ ಪ್ರಮುಖ ಸಾಕ್ಷ್ಯ ಎಂದರು.
ಈಗಾಗಲೇ ಒಬ್ಬ ಸಚಿವ ಭ್ರಷ್ಟಾಚಾರದಿಂದಾಗಿ ರಾಜೀನಾಮೆ ನೀಡಿದ್ದಾರೆ. ಆದರೂ ಇಬ್ಬರು ಸಚಿವರಿಗೆ ಭಯವಿಲ್ಲ. ಶೇ.7ರಷ್ಟು ಕಮಿಷನ್ ಹಣ ರಾಹುಲ್ ಗಾಂಧಿಗೂ ತಲುಪುತ್ತದೆ. ಕರ್ನಾಟಕ ಎಂದರೆ ಇತರೆ ರಾಜ್ಯಗಳಿಗೆ ಮಾದರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಂದರೆ ಶೇ.7ರಷ್ಟು ಕಮಿಶನ್ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅಶೋಕ್ ಟೀಕಿಸಿದರು.