ನೂರು ಕೇಸ್ ದಾಖಲಿಸಿದರೂ ರಾಹುಲ್ ಗಾಂಧಿ ಹೆದರಲ್ಲ : ಸಿಎಂ ಡಿ.ಕೆ.ಶಿವಕುಮಾರ್
"ಬೇರೆಯವರಂತೆ ರಾಹುಲ್ ಗಾಂಧಿ ಮುಚ್ಚಳಿಕೆ ಬರೆದುಕೊಡಲ್ಲ, ಕ್ಷಮೆ ಕೇಳಲ್ಲ"
ಬೆಂಗಳೂರು: “ರಾಹುಲ್ ಗಾಂಧಿ ಹುಟ್ಟು ಹೋರಾಟಗಾರ, ಹೋರಾಟಗಾರನಾಗಿ ಬದುಕುತ್ತಿದ್ದು, ಹೋರಾಟಗಾರನಾಗಿಯೇ ಸಾಯುತ್ತಾರೆ. ಇಂತಹ ನೂರು ಕೇಸ್ ದಾಖಲಿಸಿದರೂ ರಾಹುಲ್ ಗಾಂಧಿ ಅವರು ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಬೇರೆಯವರಂತೆ ರಾಹುಲ್ ಗಾಂಧಿ ಅವರು ಮುಚ್ಚಳಿಕೆ ಬರೆದುಕೊಡಲ್ಲ, ಕ್ಷಮೆ ಕೇಳಲ್ಲ” ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಾಖಂಡ್‌ನಲ್ಲಿ ದುರುದ್ದೇಶಪೂರಿತ ಎಫ್ ಐಆರ್ ದಾಖಲಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.
“ಈ ದೇಶ ಎತ್ತ ಸಾಗುತ್ತಿದೆ ಎಂದು ಜನರಿಗೆ ಮನದಟ್ಟು ಮಾಡಿಕೊಡುವುದು ನಮ್ಮ ಕರ್ತವ್ಯ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಈ ದೇಶಕ್ಕೆ ಯಾರಿಂದ, ಯಾರಿಗಾಗಿ ಸ್ವಾತಂತ್ರ್ಯ ತಂದುಕೊಡಲಾಗಿದೆ? ಸ್ವತಂತ್ರ ಬಂದ ಬಳಿಕ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರವಾಗಿ ಮಾಡಲು ನಾವು ಹಾಕಿರುವ ಭದ್ರ ಬುನಾದಿಯನ್ನು ಜನರಿಗೆ ತಿಳಿಸಬೇಕಾದ ಅವಾರ್ಯತೆ ಬಂದಿದೆ” ಎಂದರು.
“ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಗಾಂಧಿ ಕುಟುಂಬ ದೇಶ ಹಾಗೂ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಾಗಿಡಲು ತ್ಯಾಗ ಬಲಿದಾನ ಮಾಡಿದೆ. ಈ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ತಂದಿದ್ದು ಯಾರು? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮುನ್ನಡೆಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯ ಯಾವುದಾದರೂ ನಾಯಕರು ದೇಶದ ಇತಿಹಾಸದ ಚರಿತ್ರೆಯಲ್ಲಿ ಭಾಗಿಯಾಗಿದ್ದಾರಾ? ಆ ಮೂಲಕ ದೇಶದ ಸ್ವಾತಂತ್ರ್ಯ, ಸಮಗ್ರತೆ, ಶಾಂತಿ ತರುವ ಕೊಡುಗೆಯಲ್ಲಿ ಪಾಲು ಹೊಂದಿದ್ದಾರಾ?” ಎಂದು ಪ್ರಶ್ನಿಸಿದರು.
“ಯುವಕರು ಪ್ರತಿಭಟನೆ ಮಾಡಿದರು. ಅವರ ಮೇಲೆ ಪೆಲೆಟ್ ಗನ್ ದಾಳಿ ಮಾಡಿದಿರಿ, ಅವರ ಮೇಲೆ ನಡೆದ ದಾಳಿ ಬಗ್ಗೆ ಕೇಳಿದಾಗ ಕೇಂದ್ರ ಸರ್ಕಾರಕ್ಕೆ ಉತ್ತರ ನೀಡಲು ಆಗಲಿಲ್ಲ. ಸುಪ್ರೀಂ ಕೋರ್ಟ್ ಈ ಕೃತ್ಯಕ್ಕೆ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ನಮ್ಮ ತಪ್ಪನ್ನು ಯಾರಾದರೂ ಎತ್ತಿ ತೋರಿಸಿದರೆ ನಾವು ಅದನ್ನು ತಿದ್ದುಕೊಳ್ಳಬೇಕು. ಈ ವಿಚಾರವಾಗಿ ಚರ್ಚೆ ಮಾಡಲಾಗದೇ ಇಂತಹ ಅಮಾನವೀಯವಾಗಿ ನಡೆದುಕೊಂಡಿದ್ದೀರಿ. ಇದು ಈ ರಾಜ್ಯದ ವಿಚಾರವಲ್ಲ. ಇಡೀ ಪ್ರಪಂಚದ ಮಾನವೀಯತೆ ವಿಚಾರವಾಗಿದೆ. ಮಹಾತ್ಮ ಗಾಂಧಿ ಅವರನ್ನು ಇಡೀ ಪ್ರಪಂಚ ಗೌರವಿಸುತ್ತದೆ. ನಮ್ಮ ಸಂವಿಧಾನವನ್ನು ಬೇರೆ ದೇಶಗಳು ಪ್ರಶಂಸಿಸಿವೆ” ಎಂದು ಹೇಳಿದರು.
“ಬಿಜೆಪಿ ಎಲ್ಲರ ಧ್ವನಿ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಅವರಿಗೆ ಕೊನೆಗಾಲ ಸಮೀಪಿಸುತ್ತಿದೆ. 2028ರಲ್ಲಿ ಕರ್ನಾಟಕದಲ್ಲಿ ಹಾಗೂ 2029ರಲ್ಲಿ ದೇಶದಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜನರೇ ನಮ್ಮ ಆಡಳಿತ, ಕಾರ್ಯಕ್ರಮ ಮೆಚ್ಚಿದ್ದಾರೆ. ಇದನ್ನು ಸಹಿಸಲು ಬಿಜೆಪಿಯವರಿಂದ ಸಾಧ್ಯವಾಗುತ್ತಿಲ್ಲ. ನಾವು ಭಾರತ ಜೋಡೋ ಯಾತ್ರೆ ಮಾಡಿದ್ದೇ ಸಮಾಜದ ಎಲ್ಲಾ ವರ್ಗದ ಜನ ಒಗ್ಗಟ್ಟಾಗಿ ಸಾಗಬೇಕು ಎಂಬ ಸಂದೇಶ ಸಾರಲು. ನಾವು ಹುಟ್ಟುವಾಗ ಇಂತಹುದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ” ಎಂದು ಹೇಳಿದರು.
“ನಾವು ಮೇಕೆದಾಟು ಪಾದಯಾತ್ರೆ ಮಾಡಿದಾಗ ನೀವು ನಮ್ಮ ಮೇಲೆ ಕೇಸ್ ದಾಖಲಿಸಿದಿರಿ. ರಾಹುಲ್ ಗಾಂಧಿ ಅವರ ಮೇಲೆ ಹಾಕಿರುವ ಪ್ರಕರಣದಲ್ಲೂ ನಿಮಗೆ ಛೀಮಾರಿ ಸಿಗಲಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನೀವು ಎಷ್ಟು ಕಿರುಕುಳ ನೀಡಿದಿರಿ. ಅದಕ್ಕೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ನಾವು ಹೆದರಿದ್ದೇವೆಯೇ? ನಿಮ್ಮ ಕೊನೆಯ ದಿನಗಳು ಆರಂಭವಾಗಿದೆ. ನೀವು ರಾಜ್ಯದಲ್ಲಿ ಈಗ ಪ್ರಾಯಶ್ಚಿತ ಯಾತ್ರೆ ಮಾಡುತ್ತಿದ್ದೀರಿ. ನಿಮಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಯಾತ್ರೆ ಮಾಡಲಿದೆ. ನಾವು ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ, ನಿಮಗೆ ತಕ್ಕ ಉತ್ತರ ನೀಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ. ರಾಜ್ಯದಲ್ಲಿ ನೀವು ಮಾಡಿರುವ ಅನ್ಯಾಯ ಮುಚ್ಚಿಕೊಳ್ಳಲು ನೀವು ಪಾದಯಾತ್ರೆ ಮಾಡುತ್ತಿದ್ದೀರಿ” ಎಂದು ಹರಿಹಾಯ್ದರು.