ಯತ್ನಾಳ್, ಸಿ.ಟಿ.ರವಿ ರೀತಿ ಮಾತನಾಡುವುದು ಬಿಡಿ; ಆರೆಸ್ಸೆಸ್ ಮುಖ್ಯಸ್ಥ ಭಾಗವತ್‍ಗೆ ಶಾಸಕ ಪ್ರದೀಪ್ ಈಶ್ವರ್ ಸಲಹೆ
ಬೆಂಗಳೂರು : ಜಾತಿ, ಧರ್ಮ ಎಂದು ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ, ಆರ್.ಅಶೋಕ್ ಅವರಂತೆ ಮಾತನಾಡುವುದು ಬಿಟ್ಟು ದೇಶದ ಸಮಸ್ಯೆಯ ಬಗ್ಗೆ ಮಾತನಾಡಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮುಂದಾಗಲಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಲಹೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್, ಆರ್.ಅಶೋಕ್, ಸಿ.ಟಿ.ರವಿ ಅವರಿಗಂತೂ ಬುದ್ದಿ ಇಲ್ಲ. ನೀವು ಆದರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತೀರಿ ಎಂದುಕೊಂಡಿದ್ದೆ. ಆದರೆ ನೀವು ಸಹ ಹಿಂದೂ ರಾಷ್ಟ್ರದ ಬಗ್ಗೆ ಮಾತಾಡಿದ್ದೀರಿ ಎಂದು ಟೀಕಿಸಿದರು.
ಭಾರತ ದೇಶವು ಹಸಿವು ಸೂಚ್ಯಂಕದಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದೆ ಎನ್ನುವುದು ಮೊದಲು ನೋಡಿ. ಭಾರತ ಹಸಿವಿನಿಂದ ನರುಳುತ್ತಿರುವ ಬಗ್ಗೆ ಮಾತನಾಡಿ. ನಿರುದ್ಯೋಗ ಜಾಸ್ತಿ ಆಗುತ್ತಿದೆ, ಆಂತರಿಕ ಭದ್ರತೆ, ನಾವು ಪಾಕಿಸ್ತಾನವನ್ನು ಹೇಗೆ ಸದೆಬಡಿಬೇಕು ಎನ್ನುವುದರ ಬಗ್ಗೆ ಮಾತನಾಡಿ ಎಂದು ನಾನು ಮೋಹನ್ ಭಾಗವತ್‍ಗೆ ಸಲಹೆ ನೀಡುತ್ತೇನೆ ಎಂದರು.
ಮೋಹನ್ ಭಾಗವತ್ ಅಂದರೆ ಪೂಜ್ಯನಿಯ ಭಾವನೆ ಇತ್ತು. ಬೆಂಗಳೂರಿಗೆ ಬಂದು ಹಿಂದೂರಾಷ್ಟ್ರ ಬಗ್ಗೆ ಹೇಳಿಕೆ ನೀಡಿದ್ದೀರಿ. ಇನ್ನೊಂದೆಡೆ, ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ಬಣ್ಣಿಸಿದ್ದೀರಿ. ಹಾಗಾದರೆ, ಅವರು ಮುಸ್ಲಿಮ್ ಧರ್ಮದಲ್ಲಿ ಹುಟ್ಟಿದ್ದು. ದೇಶ ಭಕ್ತರು ಹಿಂದೂ, ಮುಸ್ಲಿಮ್, ಕ್ರೈಸ್ತ, ಪಾರ್ಸಿ ಧರ್ಮದಲ್ಲೂ ಇದ್ದಾರೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ನೋಂದಣಿ ಕುರಿತು ದಾಖಲೆ ಕೇಳಿದ್ದಾರೆ. ಆದರೆ, ಇದಕ್ಕೆ ಸಮಪರ್ಕವಾಗಿ ದಾಖಲೆ ನೀಡುವ ಬದಲಾಗಿ, ಬ್ರಿಟಿಷ್ ಆಡಳಿತದಲ್ಲಿ ಆ ನಿಯಮ ಇರಲಿಲ್ಲ ಎನ್ನುತ್ತೀರಿ. ಸಂಘಟನೆ ಸ್ಥಾಪಿಸಿದ ಮೇಲೆ ನೋಂದಣಿ ಮಾಡಬೇಕು ಎಂಬುದು ಕನಿಷ್ಠ ಸೌಜನ್ಯ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.