×
Ad

ಕಾಂಗ್ರೆಸ್ ಪಕ್ಷದವರು ʼರಾಜಭವನ ಚಲೋʼ ಅಲ್ಲ, ʼಮುಡಾ ಚಲೋʼ ನಡೆಸಲಿ : ಪ್ರಹ್ಲಾದ್‌ ಜೋಶಿ ಲೇವಡಿ

Update: 2024-08-31 15:01 IST

ಪ್ರಹ್ಲಾದ್‌ ಜೋಶಿ (PC:x/@JoshiPralhad)

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದವರು ರಾಜಭವನ ಚಲೋ ಅಲ್ಲ, ಮುಡಾ ಚಲೋ ನಡೆಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಲೇವಡಿ ಮಾಡಿದರು.

ಶನಿವಾರ ಹಬ್ಬಳ್ಳಿಯಲ್ಲಿ ಮಾ‍ಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜಭವನ ಚಲೋ ಏಕೆ ಮಾಡುತ್ತಾರೆ? ತಪ್ಪಿಗೆ ಕ್ಷಮೆ ಕೇಳಲು ಮುಡಾ ಚಲೋ ಮಾಡಲಿ. ಮುಡಾಕ್ಕೆ ತೆರಳಿ ನಿವೇಶನ ತೆಗೆದುಕೊಂಡದ್ದು, ಆಪ್ತರಿಗೆ ಕೊಡಿಸಿದ್ದು ತಪ್ಪಾಯಿತು ಎಂದು ಕೈ ಮುಗಿದು ಕ್ಷಮೆ ಕೇಳಿ ಬರಲಿ" ಎಂದು ಹೇಳಿದರು.

ಸಿಎಂ ತನಿಖೆಗೇಕೆ ಹೆದರುತ್ತಾರೆ?: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೇಕೆ ಹೆದರುತ್ತಾರೆ? ಅರ್ಥವಾಗುತ್ತಿಲ್ಲ. ಹಿಂದೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಮೇಲೂ ಖಾಸಗಿ ದೂರಿನ ಮೇರೆಗೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದರು. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿಲ್ಲವೇ? ಯಡಿಯೂರಪ್ಪ ಅವರು ಶುದ್ಧ ಹಸ್ತರಾಗಿ ಬಂದ ಮೇಲೆ ಸಿದ್ದರಾಮಯ್ಯ ಕ್ಷಮೆ ಕೇಳಿದ್ದರೆ? ಎಂದು ಜೋಶಿ ಪ್ರಶ್ನಿಸಿದರು

ಮುಡಾ ಹಗರಣದಲ್ಲಿ ಖಾಸಗಿಯವರು ದೂರು ನೀಡಿದ್ದರಿಂದ ಈಗ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಬಿಎಸ್ ವೈ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ವ್ಯತ್ಯಾಸವೇನಿಲ್ಲ. ಸಿಎಂ ಮೊದಲು ತನಿಖೆ ಎದುರುಸಲಿ ಎಂದು ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ರಾಜ್ಯಪಾಲರನ್ನು ಏಕೆ ಬೆದರಿಸುತ್ತೀರಿ‌?: ಮುಡಾ ಹಗರಣದಲ್ಲಿ ತನಿಖೆಗೆ ಅನುಮತಿ ನೀಡಿದ ಕಾರಣಕ್ಕೆ ರಾಜಭವನ ಚಲೋ ಮೂಲಕ ರಾಜ್ಯಪಾಲರನ್ನ ಬೆದರಿಸುವ, ಹೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಮುಡಾ ಭ್ರಷ್ಟಾಚಾರದಲ್ಲಿ ಸಹಾಯ ಮಾಡಿದ ಅಧಿಕಾರಿಗೆ ರಿಜಿಸ್ಟ್ರಾರ್ ಆಗಿ ಪ್ರಮೋಶನ್ ಮಾಡಿದ್ದೀರಿ. ಅದೇ ತಪ್ಪು ನಡೆದಿದೆ ಎಂದು ಪತ್ರ ಬರೆದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದೀರಿ. ಈಗ ತನಿಖೆಗೆ ಅನುಮತಿ ನೀಡಿದರೆಂದು ರಾಜ್ಯಪಾಲರಿಗೆ ಬೆದರಿಕೆ ಹಾಕುತ್ತಿದ್ದೀರಿ ಎಂದು ಸಿಎಂ, ಡಿಸಿಎಂ ವಿರುದ್ಧ ಜೋಶಿ ಹರಿಹಾಯ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News