×
Ad

ಕೇಂದ್ರ ಸೇವೆಗೆ ಅರ್ಹತಾ ಪಟ್ಟಿಯಲ್ಲಿ ಪ್ರಣ‌ವ್‌ ಮೊಹಾಂತಿ

Update: 2025-07-30 11:32 IST

ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್‌ ಮೊಹಾಂತಿ ಅವರು ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಸಭೆ ನಡೆಸಿದ ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿಯು, ವಿವಿಧ ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಯ ಅರ್ಹರ ಪಟ್ಟಿಗೆ ಆಯ್ಕೆ ಮಾಡಿದೆ.

ಸಿಬಿಐ, ಎನ್‌ಎಐ ಸೇರಿ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗೆ ಈ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ಈ ಪಟ್ಟಿಯಲ್ಲಿ 35 ಅಧಿಕಾರಿಗಳಿದ್ದು, ಕರ್ನಾಟಕದಿಂದ ಮೊಹಾಂತಿ ಮಾತ್ರ ಇದ್ದಾರೆ.

ಧರ್ಮಸ್ಥಳ ಗ್ರಾಮದ ವಿವಿಧೆಡೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೋರ್ವ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ರಚಿಸಿರುವ ಎಸ್‌ಐಟಿಯನ್ನು ಪ್ರಣವ್‌ ಮೊಹಾಂತಿ ಅವರು ಮುನ್ನಡೆಸುತ್ತಿದ್ದಾರೆ.

ಎಸ್‍ಐಟಿ ಮುಖ್ಯಸ್ಥ ಕೇಂದ್ರಕ್ಕೆ ಹೋದರೆ ಬೇರೆ ಅಧಿಕಾರಿ ನೇಮಕ:ಡಾ.ಜಿ.ಪರಮೇಶ್ವರ್

ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‍ಐಟಿ ಮುಖ್ಯಸ್ಥ ಡಾ.ಪ್ರಣವ್‌ ಮೊಹಂತಿ ಕೇಂದ್ರ ಸೇವೆಗೆ ಹೋದರೆ ತನಿಖೆಗೆ ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ಮುಖ್ಯಸ್ಥ ಡಾ.ಪ್ರಣವ್‌ ಮೊಹಂತಿ ಕೇಂದ್ರ ಸೇವೆಗೆ ಹೋದರೆ ತನಿಖೆಗೆ ಬೇರೆಯವರನ್ನು ನೇಮಕ ಮಾಡುತ್ತೇವೆ. ಯಾರು ಬದಲಾವಣೆ ಆದರೂ, ಕಾನೂನು ಪ್ರಕಾರ ಪ್ರಕ್ರಿಯೆ ನಿಲ್ಲುವುದಿಲ್ಲ ನಡೆಯಲಿವೆ ಎಂದು ಹೇಳಿದರು.

ಶಾಸಕರ ಜೊತೆ ಸಿಎಂ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಮುಂದೆ ಶಾಸಕರು ಅನಿಸಿಕೆ ಹೇಳಲು ಇದು ಉತ್ತಮ ಅವಕಾಶ. ಅವರ ಬಳಿ ಸಮಸ್ಯೆ ಹೇಳಿದರೆ ಪರಿಹಾರ ಸಿಗುತ್ತದೆ. ನಮ್ಮ ಜಿಲ್ಲೆಯಲ್ಲಿ ಡೈರಿ ನೇಮಕದ ವಿಚಾರದಲ್ಲಿ ವೈಮನಸ್ಸು ಇತ್ತು. ನಿನ್ನೆ ಸಿಎಂ ಸಭೆಯಲ್ಲಿ ಚರ್ಚೆಯಾಗಿದೆ. ಹಾಲು ಒಕ್ಕೂಟದಲ್ಲಿ ದಲಿತರಿಗೆ ಅವಕಾಶ ಸಿಕ್ಕಿರಲಿಲ್ಲ. ಇದು ಕೆಲವು ನಮ್ಮ ಶಾಸಕರಿಗೆ ಬೇಸರವಾಗಿತ್ತು. ನಿನ್ನೆ ಸಭೆಯಲ್ಲಿ ಮನವರಿಕೆ ಮಾಡಿದ್ದೆವು. ಹಾಗಾಗಿ ಆ ಸಮಸ್ಯೆ ಬಗೆಹರಿದಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News