×
Ad

ಮಾಜಿ ಸಂಸದ ಪ್ರತಾಪ್ ಸಿಂಹ ನನ್ನ ತಾಯಿಯ ಕ್ಷಮೆ ಕೇಳಬೇಕು: ಶಾಸಕ ಪ್ರದೀಪ್ ಈಶ್ವರ್

Update: 2025-10-25 22:44 IST

ಬೆಂಗಳೂರು: ‘ಸ್ತ್ರೀ ಕುಲದ ಬಗ್ಗೆ ಗೌರವವಿದ್ದರೆ ನನ್ನ ತಾಯಿಗೆ ಅವಮಾನ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಲೆ ಕ್ಷಮೆ ಕೇಳಬೇಕು. ಹಿಂದೂ, ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಬಾಯಿ ಬಂದಂತೆ ಮಾತನಾಡಿದರೆ ಅದನ್ನು ನೋಡಿಕೊಂಡು ನಾವು ಸುಮ್ಮನೆ ಇರಬೇಕಾ?’ ಎಂದು ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಬಗ್ಗೆ ಪ್ರತಾಪ್ ಸಿಂಹ ಏಕ ವಚನದಲ್ಲಿ ಮಾತನಾಡಿದರೆ ಅದನ್ನು ಕೇಳಿಸಿಕೊಂಡು ನಾವು ಸುಮ್ಮನೆ ಇರಬೇಕಾ? ಎಂದರು.

ವೈಯಕ್ತಿಕವಾಗಿ ನಾನು ಎಂದಿಗೂ ಪ್ರತಾಪ್ ಸಿಂಹ ವಿರುದ್ಧ ಮಾತನಾಡಿಲ್ಲ. ಆದರೆ, ನನ್ನ ಹುಟ್ಟಿನ ಬಗ್ಗೆ, ನನ್ನ ತಂದೆ, ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ನನ್ನನ್ನು ಮುಳ್ಳು ಹಂದಿ ಎಂದು ಕರೆದರು. ಮುಳ್ಳು ಹಂದಿಯ ಲಕ್ಷಣಗಳು ಹೇಗಿರುತ್ತವೆ ಎಂದರೆ ‘ಬೆಳಗ್ಗೆ ಎದ್ದ ಕೂಡಲೆ ಬಂದು ಪತ್ರಿಕಾಗೋಷ್ಠಿ ಮಾಡೋದು, ತಲೆಯಲ್ಲಿರುವ ಕೂದಲು ಎರಡು ಕಡೆ ನಿಂತಿರುವಂತೆ ಇರೋದು, ಕಾರಣ ಇಲ್ಲದೆ ಟಿಕೆಟ್ ಕೈ ತಪ್ಪುವುದು, ಯಾಕೆ ಟಿಕೆಟ್ ಕೈ ತಪ್ಪಿತು ಎಂದು ಪುಸ್ತಕ ಬರೆದರೆ ಅದು ಬಿಡುಗಡೆಯಾಗದಂತೆ ತಡೆಯಾಜ್ಞೆ ತರೋದು’ ಎಂದು ಅವರು ವ್ಯಂಗ್ಯವಾಡಿದರು.

ಪ್ರತಾಪ್ ಸಿಂಹ ಸುಮ್ಮನಿದ್ದರೆ ನಾನು ಸಮ್ಮನಿರುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದೊಂದು ನಕಲಿ ಕಾಮೆಂಟ್‍ಗೆ ಪ್ರತಾಪ್ ಸಿಂಹ 60 ಪೈಸೆ ಪಾವತಿ ಮಾಡುತ್ತಾರೆ. ಇವರು ಪಾಸ್ ನೀಡಿದ ವ್ಯಕ್ತಿಗಳು ಸಂಸತ್ ಭವನದಲ್ಲಿ ದಾಳಿ ಮಾಡಿದರು. ಅದನ್ನು ಪ್ರಶ್ನಿಸುವುದು ತಪ್ಪಾ? ನಾನು ಆರೆಸ್ಸೆಸ್ ನಿಷೇಧ ಮಾಡುತ್ತೇವೆ ಎಂದು ಹೇಳಿಲ್ಲ. ಸರಕಾರಿ ಜಾಗಗಳಲ್ಲಿ ಅನುಮತಿ ಪಡೆಯದೆ ಯಾರಿಗೂ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದು ಹೇಳಿದ್ದೇವೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

ಆರೆಸ್ಸೆಸ್ ನೋಂದಣಿಯ ದಾಖಲೆ ಎಲ್ಲಿ ಎಂದು ಕೇಳಿದರೆ ತಪ್ಪಾ? ಬೇರೆಯವರು ನೋಂದಣಿ ಇಲ್ಲದೆ ಮನೆ ಕಟ್ಟಿದ್ದರೆ, ಹಣಕಾಸಿನ ವ್ಯವಹಾರ ಮಾಡಿದರೆ ಎಲ್ಲ ತನಿಖಾ ಸಂಸ್ಥೆಗಳು ಬೆನ್ನಿಗೆ ಬೀಳುತ್ತವೆ. ಅಶೋಕ್ ಹಾಗೂ ಸೋಮಣ್ಣ ತಮ್ಮ ಎನ್‍ಪಿಎಸ್ ನಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ಜಾಗ ನೀಡಲಿ ಎಂದು ಅವರು ಹೇಳಿದರು.

ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ನಾವು ಬದ್ಧವಾಗಿದ್ದೇವೆ. ಅವರ ಜೊತೆ ನಾವಿದ್ದೇವೆ. ಕೇಂದ್ರ ಸರಕಾರ ಬರ ಪರಿಹಾರದಡಿ ಕರ್ನಾಟಕಕ್ಕೆ 384 ಕೋಟಿ ರೂ. ನೀಡಿದರೆ, ಮಹಾರಾಷ್ಟ್ರಕ್ಕೆ 1544 ಕೋಟಿ ರೂ.ನೀಡಿದ್ದಾರೆ. ಇದನ್ನು ಅಶೋಕ್ ಸಮರ್ಥಿಸಿಕೊಳ್ಳುತ್ತಾರೆ. ಐಟಿ ರಫ್ತು, ತಲಾ ಆದಾಯ, ಗ್ರಾ.ಪಂ.ಗಳಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇದು ಕೇಂದ್ರ ಸರಕಾರವೆ ಕೊಟ್ಟಿರುವ ಅಂಕಿ ಅಂಶಗಳು ಎಂದು ಪ್ರದೀಪ್ ಈಶ್ವರ್ ಹೇಳಿದರು.

ಮಹಿಳೆಯರ ಬಗ್ಗೆ, ಹಿರಿಯರ ಬಗ್ಗೆ, ಒಂದು ಸಮುದಾಯದ ಬಗ್ಗೆ ತುಚ್ಛವಾಗಿ ಮಾತನಾಡುತ್ತಿರುವ ನಿಮ್ಮ ಪಕ್ಷದ ಶಾಸಕರು, ಮಾಜಿ ಸಂಸದನಿಗೆ ಬುದ್ಧಿ ಮಾತು ಹೇಳುವುದಿಲ್ಲವೇ? ಪ್ರತಾಪ್ ಸಿಂಹ, ಸಿ.ಟಿ.ರವಿಗೆ ಆರೆಸ್ಸೆಸ್‍ನಲ್ಲಿ ಇದೇ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾರೆಯೇ? ಎಂದು ಅವರು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 366 ಹಳ್ಳಿಗಳು ಇವೆ. ಇದರಲ್ಲಿ 200 ಹಳ್ಳಿಗಳಿಗೆ ನಾನು ತಲುಪಿದ್ದೇನೆ. ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಲ್ಲಿ ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ. ಯತ್ನಾಳ್, ಸಿ.ಟಿ.ರವಿ, ಅಶೋಕ್, ಅಶ್ವತ್ಥ ನಾರಾಯಣ ಅವರ ರಿಪೋರ್ಟ್ ಕಾರ್ಡ್ ತೋರಿಸಲಿ. ಛಲವಾದಿ ನಾರಾಯಣಸ್ವಾಮಿ ಸೈದ್ಧಾಂತಿಕವಾಗಿ ಹೋರಾಡೋಣ. ಆದರೆ, ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಗೌರವವಿರಲಿ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News