×
Ad

ಕೇಂದ್ರ ಸರಕಾರ ಅಮೆರಿಕದ ಆಣತಿಯಂತೆ ನಡೆಯುತ್ತಿರುವುದೇಕೆ? : ಪ್ರಿಯಾಂಕ್ ಖರ್ಗೆ

Update: 2025-05-18 19:33 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು : ಭಯೋತ್ಪಾದನೆ ವಿರುದ್ಧ ಕೇಂದ್ರ ಸರಕಾರ ಜರುಗಿಸಿರುವ ಎಲ್ಲ ಕ್ರಮಗಳಿಗೂ ಸರ್ವಪಕ್ಷಗಳೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಆದರೂ ಕೇಂದ್ರ ಸರಕಾರ ಅಮೆರಿಕದ ಆಣತಿಯಂತೆ ನಡೆಯುತ್ತಿರುವುದೇಕೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಪದೇ ಪದೇ ಭಾರತೀಯ ಸೇನೆಗೆ ಅಪಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನ ವಿರುದ್ಧ ಕದನ ವಿರಾಮದ ಕೀರ್ತಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ಸಲ್ಲಬೇಕೆಂದು ಅವರ ಕಾರ್ಯದರ್ಶಿ ದೊಡ್ಡದಾಗಿ ಪೋಸ್ಟ್ ಹಾಕುತ್ತಿದ್ದಾರೆ. ಭಾರತದ ವಿದೇಶಾಂಗ ನೀತಿಯನ್ನು ಅಮೆರಿಕದ ಅಧ್ಯಕ್ಷರು ನಿಯಂತ್ರಿಸುತ್ತಿದ್ದಾರೆಯೇ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ರಾಜ್ಯ ಬಿಜೆಪಿ ಪಕ್ಷದ ತಿರಂಗಾ ಯಾತ್ರೆ ಹಾಸ್ಯಾಸ್ಪದ. ಮಧ್ಯ ಪ್ರದೇಶದ ಸಚಿವ ಸೇನೆಯ ಸೋಫಿಯಾ ಖುರೇಶಿ ಅವರ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ್ದಾರೆ. ಅವರನ್ನು ಈವರೆಗೂ ಏಕೆ ವಜಾಗೊಳಿಸಿಲ್ಲ ಎಂಬುದನ್ನು ತಿರಂಗಾ ಯಾತ್ರೆಯಲ್ಲಿ ಸ್ಪಷ್ಟಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ಒಳ್ಳೆಯ ಹೆಸರು ಇರುವ ಕಡೆಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ವೈಭವೀಕರಣ ಮಾಡಿಕೊಳ್ಳುತ್ತಾರೆ. ಕೆಟ್ಟ ಹೆಸರು ಬರುವ ಕಡೆಗೆ ಅವರು ಕಾಲಿಡುವುದಿಲ್ಲ. ಮಣಿಪುರದಲ್ಲಿ ಏನೆಲ್ಲಾ ನಡೆದಿದೆ ಎಂದು ಇಡೀ ಜಗತ್ತಿಗೇ ಗೊತ್ತು. ಈವರೆಗೂ ಅಲ್ಲಿಗೆ ಪ್ರಧಾನಿ ಹೋಗಿಲ್ಲ. ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. ಆದರೆ, ಪ್ರಧಾನಿಯವರು ಈ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News