×
Ad

ಗಂಟೆಗೊಂದು ಸುಳ್ಳು-ಗಳಿಗೆಗೊಂದು ಬಣ್ಣ, ಇವು ಬಿಜೆಪಿಯವರು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಬಂದ ಗುಣ : ಪ್ರಿಯಾಂಕ್‌ ಖರ್ಗೆ

Update: 2025-05-23 15:04 IST

ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ಹಿಟ್ಲರ್ ಕಾಲದಲ್ಲಿ ಗೋಬೇಲ್ಸ್ ಎಂಬುವವನಿದ್ದ, ಅವನು ಈಗ ಬಿಜೆಪಿಗರ ರೂಪದಲ್ಲಿ ಪುನಃರಾವತಾರ ಪಡೆದಿದ್ದಾನೆ. ಗಂಟೆಗೊಂದು ಸುಳ್ಳು, ಗಳಿಗೆಗೊಂದು ಬಣ್ಣ, ಇವು ಬಿಜೆಪಿಯವರು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಬಂದ ಗುಣ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು,"ನಾನು ಗಾದೆಮಾತು ಹೇಳಿದೆ, ಬಸವಣ್ಣನವರ ವಚನ ಹೇಳಿದೆ, ಅವರೇಕೆ ನನಗೆ ಹೇಳಿದರು ಎಂದುಕೊಳ್ಳಬೇಕು" ಎನ್ನುವ ಮನುವಾದಿ ನಾರಾಯಣಸ್ವಾಮಿಯವರು ಹೇಳಿದ್ದಾರೆ. ನಾರಾಯಣಸ್ವಾಮಿಯವರೇ, ಗೋಸುಂಬೆಗೂ ನಿಮಗೂ ಬಣ್ಣ ಬದಲಿಸುವ ಕಾಂಪಿಟೇಶನ್ ಇಟ್ಟರೆ ಗೆಲುವು ನಿಮ್ಮದೇ!. ಮೊದಲು ಪ್ರಿಯಾಂಕ್ ಖರ್ಗೆಯೇ ಬೊಗಳುವ ನಾಯಿ ಎಂದಿರಿ, ನಂತರ ಇದಕ್ಕೆ ವಿಷಾಧಿಸುತ್ತೇನೆ ಎಂದಿರಿ, ಆ ನಂತರ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿರಿ, ತದನಂತರ “ನಾನು ಗಾದೆ ಹೇಳಿದೆ, ಅವರು ನನಗೇ ಹೇಳಿದರು ಎಂದು ಭಾವಿಸಿಕೊಂಡಿದ್ದಾರೆ“ ಎನ್ನುತ್ತಿರುವಿರಿ. ಒಂದೊಂದು ಹೊತ್ತಿಗೆ ಒಂದೊಂದು ಮಾತನಾಡುವ ನಾರಾಯಣಸ್ವಾಮಿಯವರೇ, ನಿಮಗೆ ನಾಲಿಗೆ ಹಿಡಿತದಲ್ಲಿಲ್ಲವೇ ಅಥವಾ ಬುದ್ದಿಯೇ ಹಿಡಿತದಲ್ಲಿಲ್ಲವೇ?" ಎಂದು ವಾಗ್ದಾಳಿ ನಡೆಸಿದ್ದಾರೆ.

ಬಾಬಾ ಸಾಹೇಬರ ಸೋಲಿಗೆ ಸಾವರ್ಕರ್ ಕಾರಣ ಎಂಬುದಕ್ಕೆ ದಾಖಲೆ ನೀಡಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಿರಿ, ನಾನು ದಾಖಲೆ ನೀಡಿದ್ದಕ್ಕೆ ಹತಾಶೆ, ಕೋಪ ಒಟ್ಟಿಗೆ ಸೇರಿ ತಮ್ಮ ಬಾಯಿಯಿಂದ ಈ ಬೈಗುಳಗಳು ಉದುರುತ್ತಿವೆಯೇ? ಮಲ್ಲಿಕಾರ್ಜುನ ಖರ್ಗೆಯವರಿಗೆ ಹಾಗೂ ಪ್ರಿಯಾಂಕ್ ಖರ್ಗೆಗೆಯೆಡೆಗೆ ತೂರುವ ಒಂದೊಂದು ಬೈಗುಳವೂ ನಿಮ್ಮ ಕುರ್ಚಿಯ ಭದ್ರತೆಗೆ ಒಂದೊಂದು ಮೊಳೆ ಹೊಡೆದಂತೆ, ಬಿಜೆಪಿಯಲ್ಲಿ ನಿಮ್ಮ ಅಸ್ತಿತ್ವ ಇರುವುದೇ ನಮಗೆ ಬೈಯ್ಯುವುದರಲ್ಲಿ, ಬೈಯ್ಯುವುದಕ್ಕಾಗಿಯೇ ಬಿಜೆಪಿ ನಿಮ್ಮನ್ನು ಇಟ್ಟುಕೊಂಡಿದೆ ಎಂಬ ಸತ್ಯ ಎಂಬುದು ನಮಗೆ ತಿಳಿದಿದೆ ಎಂದಿದ್ದಾರೆ.

ಸ್ಪಷ್ಟವಾಗಿ ನನ್ನ ಹೆಸರನ್ನೇ ಬಳಸಿ ನಾಯಿ ಎಂದಿರುವ ತಾವು ಈಗ "ಅವರೇ ಭಾವಿಸಿಕೊಂಡಿದ್ದಾರೆ" ಎನ್ನುತ್ತಿದ್ದೀರಲ್ಲ, ಈ ಹಸಿಹಸಿಯಾದ ಸುಳ್ಳು ಹೇಳುವುದಕ್ಕೆ ಆರೆಸ್ಸೆಸ್‌ ಕಚೇರಿಯಲ್ಲಿ ಎಷ್ಟು ದಿನ ಟ್ರೈನಿಂಗ್ ಪಡೆದಿದ್ದೀರಿ. ನಾರಾಯಣಸ್ವಾಮಿಯವರ ಮಾತಿಗೆ ಗೋಣಾಡಿಸುವ ವಿಜಯೇಂದ್ರ ಅವರೇ, ಅಶೋಕ್‌ ಅವರೇ, ನಾಯಿ ಎಂಬ ನಿಂಧನೆಗೆ ನಿಮ್ಮ ಹಾಗೂ ನಿಮ್ಮ ಪಕ್ಷದ ಅನುಮೋದನೆ ಇದೆಯೇ? ಇಂತಹ ಕೀಳು ಸಂಸ್ಕೃತಿಯ ರಾಜಕಾರಣಕ್ಕೆ ನಿಮ್ಮ ಸಹಮತ ಇದೆಯೇ? ನಾಳೆಯಿಂದ ನಿಮಗೆ ಹಾಗೂ ನಿಮ್ಮ ನಾಯಕರಿಗೆ ನಾಯಿ, ನರಿ, ಹಂದಿ ಎಂಬಂತಹ ಪದಗಳಿಂದ ಕರೆದರೆ ತಾವು ಸಂತೋಷದಿಂದ ಸ್ವೀಕರಿಸುತ್ತೀರಾ?. ಕೊನೆಯದಾಗಿ ಬಿಜೆಪಿ ನಾಯಕರು ಒಂದೇ ಒಂದು ಪ್ರಶ್ನೆಗೆ ಉತ್ತರಿಸಲಿ, ಸುಳ್ಳಿನಿಂದ ಬಿಜೆಪಿ ಹುಟ್ಟಿತಾ ಅಥವಾ ಬಿಜೆಪಿಯಿಂದಲೇ ಸುಳ್ಳು ಹುಟ್ಟಿತಾ? ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News