ಆರೆಸ್ಸೆಸ್ ನಿಷೇಧ ಹಿಂಪಡೆದದ್ದೇ ತಪ್ಪಾಯ್ತು, ಮುಂದೆ ಕೇಂದ್ರದಲ್ಲಿ ನಾವು ಬಂದಾಗ ನೋಡೋಣ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ಹಿಂದೆ ಎರಡ್ಮೂರು ಸಲ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ನಿಷೇಧಿಸಿದಾಗ ದೇಶದ್ರೋಹಿ ಚಟುವಟಿಕೆಗಳನ್ನು ಮಾಡಲ್ಲವೆಂದು ನಮ್ಮ ಕೈಕಾಲು ಹಿಡಿದುಕೊಂಡರು. ಈಗ ಮತ್ತೆ ವರಸೆ ಬದಲಾಯಿಸಿದ್ದಾರೆ. ಸಂಘದ ನಿಷೇಧವನ್ನು ಹಿಂಪಡೆದದ್ದೇ ತಪ್ಪಾಯಿತು. ಮುಂದೆ ಕೇಂದ್ರದಲ್ಲಿ ನಮ್ಮ ಸರಕಾರ ಬಂದಾಗ ಈ ಬಗ್ಗೆ ನೋಡೋಣ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಂವಿಧಾನದ ಪೀಠಿಕೆಯಲ್ಲಿನ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ತೆಗೆದುಹಾಕಬೇಕೆಂಬ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಬಹಿರಂಗ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಪ್ರತಿಕ್ರಿಯಿಸಿದರು.
ನಾವು ಆರೆಸ್ಸೆಸ್ ತತ್ವ ಸಿದ್ಧಾಂತಗಳನ್ನು ಮೊದಲಿಂದಲೂ ವಿರೋಧಿಸಿಕೊಂಡು ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ. ದೇಶದಲ್ಲಿ ಒಬ್ಬರೇ ಇರಬೇಕು. ಒಂದೇ ಧರ್ಮವಿರಬೇಕು ಆರೆಸ್ಸೆಸ್ ಸಿದ್ಧಾಂತ. ಆದರೆ, ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಆರೆಸ್ಸೆಸ್ ಸಂಸ್ಥೆ ಹುಟ್ಟಿದಾಗಿನಿಂದಲೂ ಸಂವಿಧಾನ, ಸಮಾನತೆ, ಜಾತ್ಯತೀತ, ಸಾಮಾಜಿಕ ನ್ಯಾಯದ ತತ್ವ ಸಿದ್ಧಾಂತಗಳ ಬಗ್ಗೆ ಅವರಿಗೆ ಅಲರ್ಜಿಯಿದೆ. ನಾವು ಮೊದಲಿಂದಲೂ ಆರೆಸ್ಸೆಸ್ ಸಿದ್ಧಾಂತಗಳನ್ನು ವಿರೋಧಿಸಿಕೊಂಡು ಬಂದಿದ್ದೇವೆ, ಮುಂದೆಯೂ ವಿರೋಧಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.