ಬಾನು ಮುಷ್ತಾಕ್ ಸಾಧನೆ ನೋಡಿ ʼದಸರಾ ಉದ್ಘಾಟನೆʼಗೆ ಕರೆಸಿದ್ದೇವೆ, ಅದರಲ್ಲಿ ತಪ್ಪೇನಿದೆ? : ಪ್ರಿಯಾಂಕ್ ಖರ್ಗೆ
"ಟಿಪ್ಪು , ಹೈದರಾಲಿ ಕಾಲದಲ್ಲಿಯೂ ವಿಜೃಂಭಣೆಯಿಂದ ದಸರಾ ನಡೆದಿತ್ತು"
ಪ್ರಿಯಾಂಕ್ ಖರ್ಗೆ
ಬೆಂಗಳೂರು : ʼಕರ್ನಾಟಕದ ಪರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾನು ಮುಷ್ತಾಕ್ ಅವರು ಸಾಧನೆ ಮಾಡಿದ್ದಾರೆ. ಅವರ ಸಾಧನೆ ನೋಡಿ ದಸರಾ ಉದ್ಘಾಟನೆಗೆ ಕರೆಸಿದ್ದೇವೆ, ಅದರಲ್ಲಿ ತಪ್ಪು ಏನಿದೆ?ʼ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಇದ್ದಾಗ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಕರೆದಿದ್ದರು. ಅವರು ಕಾರಣಾಂತರದಿಂದ ಬರಲು ಆಗಿಲ್ಲ. ನಿಸಾರ್ ಅಹ್ಮದ್ ಅಥವಾ ಅಬ್ದುಲ್ ಕಲಾಂ ಇರಬಹುದು. ನೀವು ಅವರನ್ನು ಕರೆಸಿದ್ದು ಮುಸ್ಲಿಂ ಎಂದೇ ಅಥವಾ ಅವರ ಸಾಮರ್ಥ್ಯ ನೋಡಿಯೇ ಎಂದು ಕೇಳಿದ್ದಾರೆ.
ಟಿಪ್ಪು , ಹೈದರಾಲಿ ಇದ್ದಾಗ ದಸರಾ ಆಚರಣೆ ನಿಂತಿತ್ತಾ. ಆಗಲೂ ವಿಜೃಂಭಣೆಯಿಂದ ದಸರಾ ನಡೆದಿತ್ತು.ಈಗಲೂ ನಡೆಯುತ್ತದೆ. ರಾಜ್ಯ, ಸಮಾಜ, ಭಾಷೆಗೆ ಬಿಜೆಪಿಯವರ ಕೊಡುಗೆ ಏನು ಇಲ್ಲ. ಇವರ ಕೊಡುಗೆ ಶೂನ್ಯ. ರಾಜಕೀಯ ಅಷ್ಟೇ ಬೇರೆ ಏನು ಇಲ್ಲ, ಇವರಿಗೆ ಬೇರೆ ಕೆಲಸ ಇಲ್ಲ. ರಾಜಕೀಯ ಅಸ್ತಿತ್ವಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ನಡೆಯಲಾರದ ನಾಣ್ಯಗಳು ಚಾಲ್ತಿಯಲ್ಲಿ ಬರಬೇಕೆಂದರೆ ಏನಾದರೂ ಮಾತನಾಡುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ʼಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದಾರೆʼ ಎಂಬ ಯತ್ನಾಳ್ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ʼಯಾರಿಗೆ ಸ್ವಂತ ಮೌಲ್ಯಮಾಪನ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗಿಲ್ಲ, ಅವರು ನಮ್ಮ ಅಧ್ಯಕ್ಷರ ಬಗ್ಗೆ ಮಾತಾಡ್ತಾ ಇದ್ದಾರೆ. ಅವರಿಗೆ ಯಾಕೆ ಹೊರಗೆ ಹಾಕಿದ್ದಾರೆ ಎಂದು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್, ಸಿಎಂ ಬಗ್ಗೆ ಮಾತನಾಡಲು ಅವರು ಯಾರು. ಯತ್ನಾಳ್ ಪಕ್ಷದಿಂದ ಯಾಕೆ ಹೊರಗೆ ಹೋಗಿದ್ದಾರೆ ಎಂದು ಮೊದಲು ತಿಳಿದುಕೊಳ್ಳಲಿ. ಯಾಕೆ ಹೊರಗೆ ಹಾಕಿದ್ದಾರೆ ಅದನ್ನು ಮೊದಲು ಹೇಳಿ. ಅವರ ಮಾತಿಗೆ ಹೆಚ್ಚು ಬೆಲೆ ಕೊಡಬೇಡಿ. ಅವರ ಪಕ್ಷದಲ್ಲಿ ಅವರ ಮಾತಿಗೆ ಬೆಲೆ ಇರಲಿಲ್ಲ. ನಮ್ಮ ಪಕ್ಷದ ಬಗ್ಗೆ ಮಾತಾಡಿದಾಗ ಯಾಕೆ ಬೆಲೆ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.