ನೀಟ್ ಪರೀಕ್ಷೆಗೆ ಕಾಂಗ್ರೆಸ್ ರ‍್ಯಾಲಿಯಿಂದ ಅಡಚಣೆ ಆರೋಪ: ತೇಜಸ್ವಿ ಸೂರ್ಯಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಪ್ರಿಯಾಂಕ್ ಖರ್ಗೆ | ತೇಜಸ್ವಿ ಸೂರ್ಯ
ಬೆಂಗಳೂರು: ನೀಟ್ ಪರೀಕ್ಷೆಯ ದಿನ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮೆಗಾ ರ‍್ಯಾಲಿಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ನೀಟ್ ವಿದ್ಯಾರ್ಥಿಗಳಿಗೆ ಅಡಚಣೆಯಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಆರೋಪಕ್ಕೆ ಗೃಹಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ತೇಜಸ್ವಿ ಹೇಳಿಕೆಗೆ ತಿರುಗೇಟು ನೀಡಿರುವ ಗೃಹಸಚಿವರು ತೇಜಸ್ವಿ ಸೂರ್ಯ ಹೆಸರನ್ನು ಪ್ರಸ್ತಾವಿಸದೇ "ಸರಣಿ ತಪ್ಪುಮಾಹಿತಿಯ ಸಂಸದ" ಎಂದು ಟೀಕಿಸಿದ್ದು, ತೇಜಸ್ವಿಯವರ ಆರೋಪ "ಅರ್ಧಸತ್ಯ ಮತ್ತು ವ್ಯವಸ್ಥಿತ ಆಕ್ರೋಶ" ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ರ‍್ಯಾಲಿಯಿಂದಾಗಿ ಸಂಚಾರ ವ್ಯತ್ಯಯವಾದ ಕಾರಣ ಹಲವು ಮಂದಿ ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರು ಎಂದು ತೇಜಸ್ವಿ ಎಕ್ಸ್ ಪೋಸ್ಟ್‌ನಲ್ಲಿ ಆಪಾದಿಸಿದ್ದರು. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದನ್ನು ಉಲ್ಲೇಖಿಸಿ ತೇಜಸ್ವಿ ಸೂರ್ಯ ಈ ಆರೋಪ ಮಾಡಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ವಾರಗಳಿಂದ ವಿದ್ಯಾರ್ಥಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರ ಕಳಕಳಿ ನಿಜವಾಗಿದ್ದರೆ, ನೀಟ್ ಪರೀಕ್ಷೆಯ ಸಮಯಕ್ಕೆ ಪಕ್ಷದ ರ‍್ಯಾಲಿ ಆಯೋಜಿಸುತ್ತಿರಲಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಸೂರ್ಯ ಟೀಕಿಸಿದ್ದರು.
ಇದಕ್ಕೆ ಅಂಕಿ ಅಂಶ ಸಹಿತ ತಿರುಗೇಟು ನೀಡಿದ ಗೃಹಸಚಿವರು, ಆರ್‌ಸಿ ಕಾಲೇಜಿನಲ್ಲಿ ನೀಟ್ ಪರೀಕ್ಷೆ ಬರೆಯಬೇಕಿದ್ದ 720 ಮಂದಿಯ ಪೈಕಿ 142 ಮಂದಿ ಗೈರುಹಾಜರಾಗಿದ್ದರು. ಮೂವರು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರು. ಮಾಗಡಿಯಿಂದ ಬರುತ್ತಿದ್ದ ಒಬ್ಬ ವಿದ್ಯಾರ್ಥಿ ಬಸ್ ಸೌಕರ್ಯವಿಲ್ಲದೇ ಕೇಂದ್ರಕ್ಕೆ ತಡವಾಗಿ ಆಗಮಿಸಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ಅಭ್ಯರ್ಥಿ ಮೇ 3ರ ಪರೀಕ್ಷೆಯ ಹಾಲ್‌ಟಿಕೆಟ್‌ನೊಂದಿಗೆ ಬಂದಿದ್ದರಿಂದ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಆರ್ ಟಿ ನಗರ ಕಡೆಯಿಂದ ಬರಬೇಕಿದ್ದ ಒಬ್ಬ ಅಭ್ಯರ್ಥಿ ಪರೀಕ್ಷೆ ತಪ್ಪಿಸಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಸಂಚಾರಿ ಪೊಲೀಸರು ಈ ಬಗ್ಗೆ ಮುನ್ಸೂಚನೆ ನೀಡಿ, ಪರ್ಯಾಯ ಸಂಚಾರಕ್ಕೆ ಸಲಹೆಯನ್ನೂ ನೀಡಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಅತಿಕಾಳಜಿ ವ್ಯಕ್ತಪಡಿಸುತ್ತಿರುವ ಬಿಜೆಪಿ ಸಂಸದ, ತಮ್ಮದೇ ಸರ್ಕಾರದ ಅಸಮರ್ಥತೆಯಿಂದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾದಾಗ, 10 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ಮೌನವಾಗಿದ್ದರು ಎಂದು ತಿರುಗೇಟು ನೀಡಿದ್ದಾರೆ.