×
Ad

ʼಪಾಕ್ ಪರ ಘೋಷಣೆʼ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು

Update: 2024-03-15 16:10 IST

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಝಿಂದಾಬಾದ್‌ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧನವಾಗಿದ್ದ ಮೂವರು ಆರೋಪಿಗಳಿಗೆ ಬೆಂಗಳೂರಿನ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಹಾವೇರಿ ಜಿಲ್ಲೆ ಬ್ಯಾಡಗಿಯ ಮುಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್‌ ನಿವಾಸಿ ಡಿ.ಎಸ್‌ ಮುನವ್ವರ್ ಹೊಸದಿಲ್ಲಿಯ ಕಿಶನ್‌ ಗಂಜ್‌ನ ಮುಹಮ್ಮದ್ ಇಲ್ತಾಝ್ ಸಲ್ಲಿಸಿದ್ದ ಜಾಮೀನು‌ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತು. 

ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶ‌ ವಿಜೇತ್ ಅವರಿದ್ದ ಪೀಠ, 1 ಲಕ್ಷ ರೂ. ಮೊತ್ತದ ಮುಚ್ಚಳಿಕೆ ಬಾಂಡ್ ನೀಡಬೇಕು. ಇಬ್ಬರು ವ್ಯಕ್ತಿಗಳು ಶ್ಯೂರಿಟಿ ಒದಗಿಸಬೇಕು, ಪ್ರಕರಣದ ತನಿಖೆ ಮುಗಿಯುವವರೆಗೆ ದೇಶ ಬಿಟ್ಟು ಹೋಗಬಾರದು, ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಮತ್ತು ಇಂತಹ ಅಪರಾಧ ಕೃತ್ಯಗಳಲ್ಲಿ ಮತ್ತೆ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.

ವಿಚಾರಣೆ ವೇಳೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ಆರೋಪಿಗಳಿಗೆ ಸಿಆರ್‌ಪಿಸಿ ಸೆಕ್ಷನ್‌ 41ರ ಅನ್ವಯ ನೋಟಿಸ್‌ ನೀಡಿಲ್ಲ. ಅಂತೆಯೇ, ಆರೋಪಿಸಲಾದ ಘೋಷಣೆಯ ಮಾದರಿಯನ್ನು ಧ್ವನಿ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಸಾಕ್ಷ್ಯವೇ ಇಲ್ಲದ ಪ್ರಕರಣವಾಗಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಫೆ.27ರಂದು ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆಯ ಫಲಿತಾಂಶ ವೇಳೆ ಕಾಂಗ್ರೆಸ್ ಅಭ್ಯರ್ಥಿ ನಾಸಿರ್‌ ಹುಸೇನ್‌ ಪರ ಸಂಭ್ರಮಾಚರಿಸುವ ವೇಳೆ ಆರೋಪಿಗಳು ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ, ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ ಐಆರ್ ನಲ್ಲಿ ದಾಖಲಿಸಿಕೊಂಡ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಹೀಗಾಗಿ ಜಾಮೀನು ಕೋರಿ ಆರೋಪಿಗಳ ಕೋರ್ಟ್ ಮೊರೆ ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News