×
Ad

ಬೆಂಗಳೂರು | ಮಾಂಸ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ ಇಬ್ಬರಿಗೆ ಹಲ್ಲೆ: ಪುನೀತ್ ಕೆರೆಹಳ್ಳಿ ಬಂಧನ, ಬಿಡುಗಡೆ

Update: 2025-07-20 21:14 IST

ಬೆಂಗಳೂರು : ಮಾಂಸ ಸಾಗಿಸುತ್ತಿದ್ದ ಗೂಡ್ಸ್ ವಾಹನವನ್ನು ಅಡ್ಡಗಟ್ಟಿ ಚಾಲಕ ಸಹಿತ ಇಬ್ಬರಿಗೆ ನಿಂದಿಸಿ, ಹಲ್ಲೆ ನಡೆಸಿದ ಆರೋಪ ಪ್ರಕರಣದಡಿ ಪುನೀತ್ ಕೆರೆಹಳ್ಳಿಯನ್ನು ಇಲ್ಲಿನ ಬಾಗಲಗುಂಟೆ ಠಾಣೆಯ ಪೊಲೀಸರು ಬಂಧಿಸಿದ್ದು, ವಿಚಾರಣೆ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಅಲ್ಲಾಬಕ್ಷ್ ಎಂಬುವರು ನೀಡಿದ ದೂರಿನನ್ವಯ ಬಾಗಲಗುಂಟೆ ಠಾಣಾ ಪೊಲೀಸರು ಬಿಎನ್‍ಎಸ್ ಸೆಕ್ಷನ್ 115(2), 118(1), 126(2), 352, 3(5) ಅಡಿಯಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ದೂರಿನ ವಿವರ: ‘ಆದೀರ್ ಎಂಬುವರು ತಮ್ಮ ಬಿಳಿ ಬಣ್ಣದ ಮಹೇಂದ್ರ ಬುಲೆರೋ ಗೂಡ್ಸ್ ವಾಹನದಲ್ಲಿ ಚನ್ನರಾಯಪಟ್ಟಣದಲ್ಲಿರುವ ಮಾಂಸವನ್ನು ತುಂಬಿಕೊಂಡು ಬೆಂಗಳೂರಿನ ಶಿವಾಜಿನಗರಕ್ಕೆ ಹೋಗಿ ಅನ್‍ಲೋಡ್ ಮಾಡುವಂತೆ ತನಗೆ ಮತ್ತು ಫಾಜೀಲ್ ಖಾನ್ ಎಂಬಾತನಿಗೆ ತಿಳಿಸಿದ್ದರು.

ಅದರಂತೆ ನಾವಿಬ್ಬರು ಜು.19ರಂದು ರಾತ್ರಿ 10 ಗಂಟೆಗೆ ಚನ್ನರಾಯಪಟ್ಟಣದಿಂದ ಬಿಟ್ಟು 11ಗಂಟೆಗೆ ನೆಲಮಂಗಲದ ಹತ್ತಿರ ಬಂದಾಗ ಕೆ.ಎ.-51-ಎಂ.ಯು.-9536 ನಂಬರಿನ ಕೆಂಪು ಬಣ್ಣದ ಸ್ವೀಫ್ಟ್ ಕಾರೊಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಟಿ.ದಾಸರಹಳ್ಳಿ ಮೇಲ್ಸೇತುವೆಯವರೆಗೆ ನಮ್ಮನ್ನು ಹಿಂಬಾಲಿಸಿಕೊಂಡು ಬಂತು.

ಮೇಲ್ಸೇತುವೆ ಬಳಿ ನಮ್ಮ ವಾಹನವನ್ನು ಅಡ್ಡ ಹಾಕಿ ಆ ಕಾರಿನಿಂದ ಇಳಿದು ಬಂದ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಏಕಾಏಕಿಯಾಗಿ ನಮ್ಮನ್ನು ಅವಾಚ್ಯವಾಗಿ ನಿಂದಿಸುತ್ತಾ, ತನ್ನ ಮುಖದ ಮೇಲೆ ಕೈಗಳಿಂದ ಹಲ್ಲೆ ನಡೆಸಿದರು ಮತ್ತು ನನ್ನ ಪಕ್ಕದಲ್ಲಿದ್ದ ಫಾಜೀಲ್ ಖಾನ್‍ಗೂ ಹಲ್ಲೆ ನಡೆಸಲಾಯಿತು. ಆದ್ದರಿಂದ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು’ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಂಸ ತುಂಬಿದ್ದ ಗೂಡ್ಸ್ ವಾಹನ ವಶಕ್ಕೆ:

ಟಿ.ದಾಸರಹಳ್ಳಿ ಮೇಲ್ಸೇತುವೆ ಬಳಿ ಅಕ್ರಮವಾಗಿ ದನದ ಕರುಗಳ ಮಾಂಸವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೀಣ್ಯ ಠಾಣಾ ಪೊಲೀಸರು, ಮಹೇಂದ್ರ ಬುಲೆರೋ ಗೂಡ್ಸ್ ವಾಹನದ ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಮಾಂಸದ ಮಾದರಿಯನ್ನು ಸಂಗ್ರಹಿಸಿ ದನದ ಕರುಗಳ ಮಾಂಸವೇ ಎಂಬುದನ್ನು ದೃಢಪಡಿಸಲು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆ ಸಂಬಂಧ ಗೋವು ವಧೆ ನಿಷೇಧ ಕಾಯ್ದೆ 2020ರಡಿಯಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News