"ಅವರು ಮುಖ್ಯಮಂತ್ರಿ ಅವರನ್ನು ಮುಟ್ಟಬಾರದು": ದಿಲ್ಲಿ ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಮಧ್ಯಪ್ರವೇಶದ ಘಟನೆ ವಿವರಿಸಿದ ಸಿಎಂ ಡಿ.ಕೆ.ಶಿವಕುಮಾರ್
PC :x/@DKShivakumar
ಹೊಸದಿಲ್ಲಿ: "ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ನಮ್ಮ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಹೊಸ ಮುಖ, ಜಿಲ್ಲೆ ಹಾಗೂ ಪ್ರಾಂತ್ಯವಾರು ಲೆಕ್ಕಾಚಾರ ಮಾಡಿ ತೀರ್ಮಾನ ಮಾಡುತ್ತಾರೆ" ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಹೊಸದಿಲ್ಲಿ ಕರ್ನಾಟಕ ಭವನದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
"ಸಚಿವ ಸಂಪುಟ ವಿಸ್ತರಣೆ ಮಾಡಿ, ಬುಧವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮಾಡಲು ರಾಜ್ಯಪಾಲರ ಅನುಮತಿ ಪಡೆಯಲಾಗಿತ್ತು. ಆದರೆ ಮಂಗಳವಾರ ನಿಗದಿಯಾಗಿದ್ದ ಸಭೆ ಕಾರಣಾಂತರಗಳಿಂದ ನಡೆಯಲಿಲ್ಲ. ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಿರುವಾಗ ಅವರನ್ನು ಬಂಧಿಸಿದ್ದಾರೆ. ನನ್ನನ್ನು ಪೋಲೀಸರು ಎಳೆದಾಡಲು ಮುಂದಾದಾಗ ರಾಹುಲ್ ಗಾಂಧಿ ಅವರು, ಅವರು ಮುಖ್ಯಮಂತ್ರಿ ಅವರನ್ನು ಮುಟ್ಟಬಾರದು ಎಂದು ತಾಕೀತು ಮಾಡಿದರು. ನಂತರ ನನಗೆ ಮನವಿ ಮಾಡಿದರು, ನಾನು ಪಕ್ಕಕ್ಕೆ ಬಂದೆ" ಎಂದು ವಿವರಿಸಿದರು.
ರಾಹುಲ್ ಗಾಂಧಿ ಅವರು ಸಚಿವ ಸಂಪುಟಕ್ಕೆ ಮಾನದಂಡ ವಿಧಿಸಿರುವ ಬಗ್ಗೆ ಹಾಗೂ ಹೊಸ ಪ್ರಯೋಗದ ಬಗ್ಗೆ ಕೇಳಿದಾಗ, "ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾರಾದರೂ ಮಾಧ್ಯಮಗಳ ಮುಂದೆ ಚರ್ಚೆ ಮಾಡುತ್ತಾರಾ? ಬೋಸರಾಜು ಶಾಸಕರಾಗದಿದ್ದರೂ ಮಂತ್ರಿ ಮಾಡಿಕೊಳ್ಳಲಿಲ್ಲವೇ? ಕೃಷ್ಣ ಅವರ ಸರಕಾರದಲ್ಲಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಿಲ್ಲವೇ? ಮಾಧ್ಯಮದವರನ್ನು ಎಂಎಲ್ಸಿ, ಎಂಪಿ ಮಾಡಿಕೊಂಡಿಲ್ಲವೇ?" ಎಂದು ತಿಳಿಸಿದರು.
ಸಚಿವ ಸಂಪುಟ ವಿಚಾರಕ್ಕೆ ನೀವು ಮತ್ತೆ ದಿಲ್ಲಿಗೆ ಬರುತ್ತೀರಾ ಎಂದು ಕೇಳಿದಾಗ, "ನಮ್ಮ ನಾಯಕರು ನಮ್ಮ ಜೊತೆ ಚರ್ಚೆ ಮಾಡುತ್ತಾರೆ. ಅಭಿಪ್ರಾಯ ಪಡೆಯುತ್ತಾರೆ. ಸಿದ್ದರಾಮಯ್ಯ ಅವರ ಸರಕಾರ ಇದ್ದಾಗಲೂ ಇದೇ ರೀತಿ ಮಾಡಿದ್ದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರಿಪ್ರಸಾದ್ ಅವರು ಸೇರಿ ಚರ್ಚೆ ಮಾಡಿದ್ದೇವೆ" ಎಂದರು.