ಯುವ ಜನತೆಯ ಪರವಾದ ನಮ್ಮ ಹೋರಾಟ ಮುಂದುವರಿಯುತ್ತದೆ : ಡಿಸಿಎಂ ಜಿ.ಪರಮೇಶ್ವರ್‌

"ರಾಹುಲ್ ಗಾಂಧಿಯವರ ಧ್ವನಿ ಅಡಗಿಸುವುದಕ್ಕೆ ಕೇಂದ್ರದ ಪ್ರಯತ್ನ"

Update: 2026-07-22 12:41 IST

ತುಮಕೂರು : ಲಕ್ಷಾಂತರ ಜನ ವಿದ್ಯಾರ್ಥಿಗಳಿಗೆ ಆಗಿರುವ ಮೋಸ, ಅನ್ಯಾಯದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಧ್ವನಿ ಎತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ, ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸುವುದಕ್ಕೆ ಕೇಂದ್ರ ಸರಕಾರ ಈ ಪ್ರಯತ್ನಗಳನ್ನು ಮಾಡುತ್ತಿದೆ. ಯುವಜನತೆಯ ಪರವಾಗಿರುವ ನಮ್ಮ ಧ್ವನಿ, ಪ್ರತಿಭಟನೆ ಹೀಗೆಯೇ ಮುಂದುವರಿಯುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಮೋದಿಯವರು ರಾಜೀನಾಮೆ ನೀಡಬೇಕು ಎಂಬುದಾಗಿ ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಅಧಿಕಾರದಲ್ಲಿರುವವರು ತಪ್ಪು ಮಾಡಿರುವಾಗ ಸ್ವಾಭಾವಿಕವಾಗಿ ರಾಜೀನಾಮೆ ಕೇಳಬೇಕು. ಧರ್ಮೇಂದ್ರ ಪ್ರಧಾನ್ ಅವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರೈಲ್ವೆ ಅಪಘಾತದಂತಹ ಸಂದರ್ಭಗಳಲ್ಲಿ ಕೇಂದ್ರದ ಸಚಿವರುಗಳು ರಾಜೀನಾಮೆ ಕೊಟ್ಟಿದ್ದಾರೆ ಎಂದರು.

ಸಚಿವ ಸಂಪುಟ ವಿಸ್ತರಣೆಯ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ನಮ್ಮ ನಾಯಕರುಗಳು ದೆಹಲಿಗೆ ಹೋಗಿದ್ದಾರೆ. ವರಿಷ್ಠರ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ. ಅವರ ಅನುಮತಿಯ ಮೇರೆಗೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ತಿಳಿಸಿದರು.

ತುಮಕೂರಿಗೆ ಮತ್ತೊಂದು ಸಚಿವ ಸ್ಥಾನ ಸಿಗಬೇಕು ಎಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿ, ತುಮಕೂರು ದೊಡ್ಡ ಜಿಲ್ಲೆ. ಹಾಗಾಗಿ ಮತ್ತೊಂದು ಸಚಿವ ಸ್ಥಾನ ಕೊಡಬೇಕು ಎಂದು ನಾನು ಕೂಡ ಹೇಳಿದ್ದೇನೆ ಎಂದರು.

ಬರ ಪರಿಸ್ಥಿತಿಯ ನಿರ್ವಹಣೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇವತ್ತು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಶನಿವಾರ ಚಿತ್ರದುರ್ಗದಲ್ಲಿ ಬೆಂಗಳೂರು ವಿಭಾಗದ ಪರಿಶೀಲನೆಯನ್ನು ಮುಖ್ಯಮಂತ್ರಿಗಳು ಮತ್ತು ನಾನು ಮಾಡುತ್ತೇವೆ. ಶೀಘ್ರವೇ ಮೈಸೂರು ವಿಭಾಗದ್ದೂ ಮಾಡುತ್ತೇವೆ ಎಂದು ತಿಳಿಸಿದರು.

ತುಮಕೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಮೊದಲಿನಿಂದಲೂ ಈ ಬಗ್ಗೆ ಇಚ್ಛೆಯನ್ನು ವ್ಯಕ್ತಪಡಿಸುತ್ತಾ ಬಂದಿದ್ದೇನೆ. 25 ವರ್ಷಗಳಿಂದಲೂ ತುಮಕೂರಿನಲ್ಲೇ ಆಗಲಿ ಎಂಬ ಅಭಿಪ್ರಾಯವನ್ನು ಹೇಳುತ್ತಾ ಬಂದಿದ್ದೇವೆ. ಈಗಾಗಲೇ ಬಿಡದಿ ಸೇರಿದಂತೆ ಬೇರೆ ಬೇರೆ ಜಾಗಗಳನ್ನು ಗುರುತಿಸಲಾಗಿದೆ. ತುಮಕೂರಿಯನಲ್ಲೇ ಆದರೆ ಬಹಳ ಅನುಕೂಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News