KPSC ನೇಮಕಾತಿ ಅಕ್ರಮ ಪ್ರಕರಣ : ಸದಸ್ಯೆ ಶಾಂತಾ ಹೊಸಮನಿಗೆ ಇಲ್ಲ ಮಧ್ಯಂತರ ರಕ್ಷಣೆ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ಸಂಬಂಧ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ರಕ್ಷಣೆ ನಿರಾಕರಿಸಿ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದಿಂದ ಇಂದು ಶಾಂತ ಹೊಸಮನಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ರಾಜ್ಯ ಸರಕಾರ ಅಭಿಯೋಜಕ ಬಿ ಎನ್ ಜಗದೀಶ್, ಶಾಂತಾ ಹೊಸಮನಿ ಅವರು ಎ2 ಆರೋಪಿ ಅಂಕ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಕೆಪಿಎಸ್‌ಸಿ ಪರ ವಕೀಲೆ ಎಂಆರ್ ಸಿಂಚನ ಹಾಜರಾಗಿ ಸಹಾಯಕ ಕಾರ್ಯದರ್ಶಿ ಅವರು ನೀಡಿರುವ ವರದಿಯನ್ನು ನ್ಯಾಯ ಪೀಠಕ್ಕೆ ಸಲ್ಲಿಕೆ ಮಾಡಿದರು.
ಶಾಂತಾ ಹೊಸಮನಿ ಪರವಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ವಾದ ಮಾಡಿ, 2025ರ ಜುಲೈನಲ್ಲಿ ನೇಮಕಾತಿಗೆ ತಡೆ ನೀಡಲಾಗಿದೆ. ಪ್ರಕ್ರಿಯೆ ಮುಗಿಸುವುದನ್ನು ಮುಂದುವರಿಸಲು ಆದೇಶಿಸಲಾಗಿತ್ತು. ನ್ಯಾಯಾಲಯದ ಅನುಮತಿ ಇಲ್ಲದೇ ಅಂತಿಮ ಆಯ್ಕೆ ಪಟ್ಟಿ ಫಲಿತಾಂಶ ಪ್ರಕಟಿಸದಂತೆ ಮುಖ್ಯ ನ್ಯಾಯಮೂರ್ತಿಗಳ ಪೀಠ ಆದೇಶಿಸಿದೆ ಎಂದರು, ಅಲ್ಲದೆ ಹೀಗಾಗಿ, ಅರ್ಜಿದಾರರ ವಿರುದ್ಧ ಆತುರದ ಕ್ರಮಕೈಗೊಳ್ಳದಂತೆ ಆದೇಶಿಸಬೇಕು ಎಂದು ವಾದ ಮಾಡಿದರು.
ಎರಡು ಕಡೆ ವಾದ ಆಲಿಸಿದ ಪೀಠ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.