ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದುರ್ಬಲ ವಿಪಕ್ಷ ಎಂದರೆ ಅದು ಬಿಜೆಪಿ : ರಮೇಶ್ ಬಾಬು
ರಮೇಶ್ ಬಾಬು
ಬೆಂಗಳೂರು : ಕಾಂಗ್ರೆಸ್ ಪಕ್ಷದ ನಾಯಕರನ್ನು ಕೇವಲ ಟೀಕೆ ಮಾಡುವುದಕ್ಕೆ ಪರಿಷತ್ತಿನ ಸದಸ್ಯ ಸ್ಥಾನವನ್ನು ಪಡೆದ ದೊಡ್ಡ ಗಿರಾಕಿ ಛಲವಾದಿ ನಾರಾಯಣಸ್ವಾಮಿಗೆ ‘ನಾಯಿ’ ಎನ್ನುವ ಪದದ ಮೇಲೆ ಸಾಕಷ್ಟು ಒಲವಿರಬಹುದು. ಅವರನ್ನು ಸಂಘ ಪರಿವಾರದವರು ಬುಲ್ ಡಾಗ್ ರೀತಿ ಬೆಳೆಸಿದ್ದಾರಾ? ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಪದವನ್ನು ಇಟ್ಟುಕೊಂಡು ಅವರನ್ನು ನಾನು ಟೀಕೆ ಮಾಡಲು ಹೋಗುವುದಿಲ್ಲ. ಯಾವುದೇ ಪಕ್ಷವಾದರೂ ಎಲ್ಲೆಯನ್ನು ಮೀರಿ ಭಾಷೆಯನ್ನು ಬಳಸಿ ಟೀಕೆ ಮಾಡುವ ಸಂಪ್ರದಾಯ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ಹೇಳಿದರು.
ಆದರೆ ಕಳೆದ ಐದಾರು ವರ್ಷಗಳಿಂದ ಬಿಜೆಪಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಟೀಕೆ ಮಾಡಿದರೆ ರಾತ್ರೋರಾತ್ರಿ ನಾಯಕರಾಗಬಹುದು ಎಂದು ತರಬೇತಿ ಪಡೆಯುತ್ತಿದ್ದಾರೆ. ಈ ತರಬೇತಿಯನ್ನು ಕೇಶವ ಕೃಪಾ, ಬೈಠಕ್ ಹೀಗೆ ಎಲ್ಲಿ ನೀಡಲಾಗುತ್ತಿದೆ ಎಂದು ಸಂಘಪರಿವಾರದವರೇ ಹೇಳಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.
ಸದಾ ವತ್ಸಲೇ ಮಾತೃಭೂಮಿ ಎಂದು ರಾಜಕೀಯ ಮಾಡುತ್ತಿದ್ದವರು ಈಗ ಸದಾ ಬೈಯುವುದೇ ರಾಜಕೀಯ ಎಂದು ಕೊಂಡಿದ್ದಾರೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಅವರೇ ಉದಾಹರಣೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ದುರ್ಬಲ ವಿರೋಧ ಪಕ್ಷ ಎಂದರೆ ಅದು ಬಿಜೆಪಿ. ಶಾಸನ ಸಭೆಯ ಎರಡೂ ಸದನಗಳಲ್ಲಿ ಅತ್ಯಂತ ಬೌದ್ದಿಕ ಹೀನರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಪತ್ರಿಕಾಗೋಷ್ಠಿಗಳನ್ನು ಮಾಡುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಜೊತೆಗೆ ಪದಬಳಕೆಯೂ ತಿಳಿದಿಲ್ಲ. ದಿನಬೆಳಗಾದರೆ ಆಡಳಿತ ಪಕ್ಷವನ್ನು ಬೈಯ್ಯುವುದು, ಪತ್ರಿಕಾಗೋಷ್ಠಿ ಮಾಡುವುದು ಇಷ್ಟೇ ವಿಪಕ್ಷ ನಾಯಕನ ಕೆಲಸ ಎಂದು ಕೊಂಡಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.
ಈ ಛಲವಾದಿ ನಾರಾಯಣಸ್ವಾಮಿ ಜನತಾ ಪರಿವಾರದಿಂದ ರಾಜಕೀಯ ಪ್ರಾರಂಭ ಮಾಡಿ, ಜೀವರಾಜ ಆಳ್ವ ಅವರಿಂದ ರಾಜಕೀಯ ನೆಲೆ ಪಡೆದು, ಸೈಕಲ್ ನಾರಾಯಣ ಸ್ವಾಮಿ ಎಂದು ಪ್ರಸಿದ್ದರಾಗಿದ್ದರು. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ರಾಜಕೀಯ ಆಶ್ರಯ ಪಡೆದು, ಕಾಂಗ್ರೆಸ್ ಪಕ್ಷದಿಂದ ಎಲ್ಲ ಅನುಕೂಲ ಪಡೆದು ಈಗ ಪಕ್ಷ ಹಾಗೂ ನಾಯಕರನ್ನು ಟೀಕೆ ಮಾಡುವ ವಿಶ್ವವಿಖ್ಯಾತ ರಾಜಕಾರಣಿಯಾಗಿ ಛಲವಾದಿ ನಾರಾಯಣಸ್ವಾಮಿ ಬದಲಾಗಿದ್ದಾರೆ ಎಂದು ಅವರು ಟೀಕಿಸಿದರು.
ಸಂಘ ಪರಿವಾರದವರು ವಾರಕ್ಕೊಮ್ಮೆ ಬೈಠಕ್ ಮಾಡಿ ಖರ್ಗೆ ಕುಟುಂಬದ ವಿರುದ್ದ, ಕಾಂಗ್ರೆಸ್ ವಿರುದ್ದ ಯಾವ ಪದ ಬಳಕೆ ಮಾಡಬೇಕು ಎಂದು ತರಬೇತಿ ನೀಡುತ್ತಿದ್ದಾರೆ. ಚಿತ್ತಾಪುರ ಸೇರಿದಂತೆ ಇತರೆಡೆ ಅವರು ಬಳಕೆ ಮಾಡಿರುವ ಪದವನ್ನು ಇಡೀ ರಾಜ್ಯ ನೋಡುತ್ತಿದೆ ಎಂದು ರಮೇಶ್ ಬಾಬು ಹೇಳಿದರು.
ಬಿಜೆಪಿಯಿಂದ ಉಚ್ಚಾಟಿತರಾದಂತಹ ಈಶ್ವರಪ್ಪ, ಯತ್ನಾಳ್, ರಾಜಕೀಯ ನಿರುದ್ಯೋಗಿ ಪ್ರತಾಪ್ ಸಿಂಹ, ಅಶೋಕ್, ಶಾಸಕ ರಘು ಹೀಗೆ ಇಂತಹವರದ್ದೇ ಒಂದು ತಂಡವಿದೆ. ಈ ತಂಡದ ನಾಯಕ ನಾರಾಯಣಸ್ವಾಮಿ. ಇವರು ಆರೆಸ್ಸೆಸ್‍ನ ಚಡ್ಡಿ ಹೊತ್ತಂತಹ ವೀರ ಎಂದು ಅವರು ವ್ಯಂಗ್ಯವಾಡಿದರು.
ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಖರ್ಗೆ ಅವರ ಬಣ್ಣವನ್ನು ಇಟ್ಟುಕೊಂಡು ಹೀಯಾಳಿಸಿದ್ದರು. ಇವರಿಗೆ ಇನ್ನೂ ನಾಚಿಕೆ, ಮಾನ ಮರ್ಯಾದೆ ಬಂದಿಲ್ಲ. ಇಂದು ಮತ್ತೆ ಖರ್ಗೆ ಕುಟುಂಬದ ಮೇಲೆ ಮತ್ತೊಂದು ಪದ ಬಳಕೆ ಮಾಡಿದ್ದಾರೆ. ಅವರಿಗೆ ನಾವು ಹೆದರುವುದಿಲ್ಲ. ಜನರೇ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ನಂಬಿದ್ದೇನೆ. ನಮ್ಮ ಪಕ್ಷ ನಿಮ್ಮನ್ನು ಹೆಸರಿಸುವ ಬೆದರಿಸುವ ಕೆಲಸ ಮಾಡುವುದಿಲ್ಲ. ನಮಗೆ ಇದು ಅವಶ್ಯಕತೆಯೂ ಇಲ್ಲ ಎಂದು ರಮೇಶ್ ಬಾಬು ಹೇಳಿದರು.